ಕೆವಿಜಿ ಬ್ಯಾಂಕ್‌, 35 ಸಾವಿರ ಕೋಟಿ ವಹಿವಾಟು

KannadaprabhaNewsNetwork |  
Published : May 25, 2024, 12:46 AM IST
24ಡಿಡಬ್ಲೂಡಿ2ಕಳೆದ ಆರ್ಥಿಕ ವರ್ಷದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವಹಿವಾಟು ಕುರಿತು ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಮಾಹಿತಿ ನೀಡಿದರು. ಬ್ಯಾಂಕ್‌ ಅಧಿಕಾರಿಗಳು ಇದ್ದಾರೆ.  | Kannada Prabha

ಸಾರಾಂಶ

ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು ಹೊಸ ಆರ್ಥಿಕ ವರ್ಷದ ಸಾಲಿನಲ್ಲೂ ಕೃಷಿ ,ಉದ್ಯಮ ಮತ್ತು ಗೃಹಸಾಲ ಒಳಗೊಂಡು ರಿಟೇಲ್ ಸಾಲಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಧಾರವಾಡ:

ಬರ ಹಾಗೂ ಇತರೆ ಸಂದಿಗ್ಧ ಪರಿಸ್ಥಿತಿಯಲ್ಲೂ ಕೆನರಾ ಬ್ಯಾಂಕ್ ಪ್ರವರ್ತಿತ ಇಲ್ಲಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಕಳೆದ ಆರ್ಥಿಕ ವರ್ಷದಲ್ಲಿ ₹ 35884 ಕೋಟಿ ವಹಿವಾಟು ದಾಖಲಿಸಿದ್ದು, ಬ್ಯಾಂಕಿನ ನಿಕ್ಕಿ ಲಾಭ ₹ 40.25 ಕೋಟಿಗಳಿಂದ ₹ 104.16 ಕೋಟಿಗಳಿಗೆ ವೃದ್ಧಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬ್ಯಾಂಕಿನ ನಿವ್ವಳ ಸಂಪತ್ತು ₹ 1264.56 ಕೋಟಿಗಳಿಂದ ₹ 1368.61 ಕೋಟಿಗಳಿಗೆ ವೃದ್ಧಿಸಿದೆ. ಠೇವಣಿ ಸಂಗ್ರಹಣೆಯಲ್ಲಿ ಶೇ.6.12ರಷ್ಟು ಪ್ರಗತಿ ದರದಲ್ಲಿ ₹19856 ಕೋಟಿ ಮಟ್ಟವನ್ನು ತಲುಪಿರುವ ಬ್ಯಾಂಕ್ ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದು, ಅದು 67 ಲಕ್ಷ ಮೀರಿದೆ. ಪ್ರತಿ ಉದ್ಯೋಗಿಯ ಸರಾಸರಿ ವಹಿವಾಟು ₹ 10.08 ಕೋಟಿಗಳಿಂದ ₹ 10.98 ಕೋಟಿಗಳಿಗೆ ಏರಿದೆ ಎಂದರು.

9 ಜಿಲ್ಲೆಗಳಲ್ಲಿ 629 ಶಾಖೆ ಹೊಂದಿರುವ ಬ್ಯಾಂಕ್‌, 2023-24ರ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ ₹ 11908 ಕೋಟಿ ಸಾಲ ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು ಶೇ.9.9 ಪ್ರಗತಿ ದರದಲ್ಲಿ ₹16027 ಕೋಟಿ ಮಟ್ಟವನ್ನು ತಲುಪಿದೆ. ಆದ್ಯತಾ ರಂಗಕ್ಕೆ ಮಹತ್ವ ನೀಡಿರುವ ಬ್ಯಾಂಕ್‌ ಈ ರಂಗದಡಿ ₹ 14299 ಕೋಟಿ ಸಾಲ ಹೊಂದಿದ್ದು ಇದು ಒಟ್ಟೂ ಸಾಲದ ಶೇ.89.22ರಷ್ಟಿದೆ. ಬ್ಯಾಂಕಿನ ಒಟ್ಟು ಸಾಲದಲ್ಲಿ ಕೃಷಿರಂಗದ ಸಾಲದ ಪ್ರಮಾಣ ₹11569 ಕೋಟಿಗಳಾಗಿದ್ದು ಅದು ಒಟ್ಟಾರೆ ಸಾಲದ ಶೇ.72.18ರಷ್ಟಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್‌ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 458879 ರೈತರಿಗೆ ₹ 8712 ಕೋಟಿ ಸಾಲ ವಿತರಿಸಿದೆ . ಒಟ್ಟಾರೆ ಸಾಲ ವಿತರಣೆಯಲ್ಲಿ ಕೃಷಿ ಅಭಿವೃದ್ಧಿಗೆ ₹ 11569 ಕೋಟಿ, ಎಂಎಸ್‌ಎಂಇ ರಂಗಕ್ಕೆ ₹ 876 ಕೋಟಿ ಮತ್ತು ಗೃಹ ರಂಗಕ್ಕೆ ₹ 58 ಕೋಟಿ ಸಾಲ ವಿತರಿಸಿದೆ ಎಂದು ಅಂಕಿ ಸಮೇತ ಮಾಹಿತಿ ನೀಡಿದರು.

ಸಂಘಟಿತ ವರ್ಗ ಮತ್ತು ಹಳ್ಳಿಗಾಡಿನ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಮಹತ್ವದ ಪಾತ್ರ ವಹಿಸುತ್ತಿದೆ. ಈ ವರೆಗೆ ಸುಮಾರು 21,73,377 ಲಕ್ಷ ಜನರನ್ನು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು 9,98,201 ಲಕ್ಷ ಜನರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವ್ಯಾಪ್ತಿಗೆ ತಂದಿದೆ. ಅಟಲ್ ಪೆನ್ಶನ್ ಯೋಜನೆಯಡಿ 4,27,736 ಲಕ್ಷ ಜನರನ್ನು ತಂದ ಬ್ಯಾಂಕಿನ ಕಾರ್ಯ ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾಧಿಕಾರ ಬ್ಯಾಂಕಿಗೆ ರಾಷ್ಟ್ರಮಟ್ಟದ 9 ಪ್ರಶಸ್ತಿಗಳನ್ನು ನೀಡಿದೆ ಎಂದರು.

2024-25ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್‌ ₹ 22 ಸಾವಿರ ಕೋಟಿ ಠೇವಣಿ ಮತ್ತು ₹ 18 ಸಾವಿರ ಕೋಟಿ ಮುಂಗಡ ಮಟ್ಟ ತಲುಪುವ ಮೂಲಕ ₹ 40 ಸಾವಿರ ಕೋಟಿ ವಹಿವಾಟು ಸಾಧಿಸುವ ಹಾಗೂ ಕನಿಷ್ಠ ₹ 175 ಕೋಟಿ ನಿಕ್ಕಿ ಲಾಭಗಳಿಸುವ ಗುರಿಯನ್ನು ಶ್ರೀಕಾಂತ ಭಂಡಿವಾಡ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಮಹಾ ಪ್ರಬಂಧಕರಾದ ಸತ್ಯಪ್ರಸಾದ ಎನ್, ಮಾಲಾಕಿ ಪುನೀತ, ಆರ್.ಟಿ. ಕಾಂಬ್ಳೆ, ಸತೀಶ ಆರ್, ಉಲ್ಲಾಸ ಗುನಗಾ ಇದ್ದರು. ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು ಹೊಸ ಆರ್ಥಿಕ ವರ್ಷದ ಸಾಲಿನಲ್ಲೂ ಕೃಷಿ ,ಉದ್ಯಮ ಮತ್ತು ಗೃಹಸಾಲ ಒಳಗೊಂಡು ರಿಟೇಲ್ ಸಾಲಗಳಿಗೆ ಆದ್ಯತೆ ನೀಡಲಾಗುವುದು ಎಂದು ಶ್ರೀಕಾಂತ ಭಂಡಿವಾಡ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌