ಕನ್ನಡಪ್ರಭ ವಾರ್ತೆ ಸಂಕೇಶ್ವರಶಂಕರಾಚಾರ್ಯ ಸಂಸ್ಥಾನ ಮಠದಲ್ಲಿ ಸಂಗ್ರಹವಾಗಿರುವ ಪ್ರಾಚೀನ ಮೋಡಿ ಲಿಪಿಯ ಐತಿಹಾಸಿಕ ಹಸ್ತಪ್ರತಿಗಳು ಹಾಗೂ ದಾಖಲೆಗಳಲ್ಲಿನ ಅಮೂಲ್ಯ ಮಾಹಿತಿಯನ್ನು ಹೊರಜಗತ್ತಿಗೆ ಪರಿಚಯಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ದೊರೆತಿದೆ.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಶಂಕರಾಚಾರ್ಯ ಸಂಸ್ಥಾನ ಮಠದಲ್ಲಿ ಸಂಗ್ರಹವಾಗಿರುವ ಪ್ರಾಚೀನ ಮೋಡಿ ಲಿಪಿಯ ಐತಿಹಾಸಿಕ ಹಸ್ತಪ್ರತಿಗಳು ಹಾಗೂ ದಾಖಲೆಗಳಲ್ಲಿನ ಅಮೂಲ್ಯ ಮಾಹಿತಿಯನ್ನು ಹೊರಜಗತ್ತಿಗೆ ಪರಿಚಯಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ದೊರೆತಿದೆ. ದಾಖಲೆಗಳ ಭಾಷಾಂತರ ಹಾಗೂ ವೈಜ್ಞಾನಿಕ ಸಂರಕ್ಷಣೆ ಉದ್ದೇಶದಿಂದ ಗೋವಾ ಸರ್ಕಾರ ಮತ್ತು ಶ್ರೀಮಠದ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.ಗೋವಾ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ ಹಾಗೂ ಶ್ರೀಮಠದ ಪೀಠಾಧಿಪತಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಉಭಯ ಸಂಸ್ಥೆಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಶ್ರೀಮಠದಲ್ಲಿ ಸಂಗ್ರಹವಾಗಿರುವ ಮೋಡಿ ಲಿಪಿಯ ದಾಖಲೆಗಳು ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ಮಾಹಿತಿ ಒಳಗೊಂಡಿವೆ. ಈ ದಾಖಲೆಗಳನ್ನು ಭಾಷಾಂತರಿಸುವ ಮೂಲಕ ಇತಿಹಾಸದ ಹಲವು ಅಪರಿಚಿತ ಸಂಗತಿಗಳನ್ನು ಅನಾವರಣಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಭಾಷಾಂತರ ಕಾರ್ಯ ಪೂರ್ಣಗೊಂಡ ಬಳಿಕ ಶ್ರೀಮಠದ ಇತಿಹಾಸದ ಕುರಿತು ಹೊಸ ಸಂಶೋಧನೆಗಳಿಗೆ ಅವಕಾಶ ದೊರೆಯಲಿದ್ದು, ಇತಿಹಾಸಾಸಕ್ತರು ಹಾಗೂ ಸಂಶೋಧಕರಿಗೆ ಅಮೂಲ್ಯ ಆಕರಗಳು ಲಭ್ಯವಾಗಲಿವೆ.
ಕಾಲದ ಪ್ರಭಾವದಿಂದ ಹಳೆಯ ದಾಖಲೆಗಳು ಹಾಳಾಗದಂತೆ ವೈಜ್ಞಾನಿಕ ವಿಧಾನದಲ್ಲಿ ಸಂರಕ್ಷಿಸುವುದಕ್ಕೂ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಹಸ್ತಪ್ರತಿಗಳ ಭಾಷಾಂತರದ ಜತೆಗೆ ಶ್ರೀಮಠದ ಸುದೀರ್ಘ ಇತಿಹಾಸ, ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ಜ್ಞಾನಸಂಪತ್ತನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ತಲುಪಿಸುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ.
ಒಪ್ಪಂದದ ಅನುಷ್ಠಾನದ ಮುಂದಿನ ಹಂತವಾಗಿ ಗೋವಾ ಸರ್ಕಾರ ನಿಯೋಜಿಸಿರುವ ತಜ್ಞರ ತಂಡ ಶೀಘ್ರದಲ್ಲೇ ಶಂಕರಾಚಾರ್ಯ ಸಂಸ್ಥಾನ ಮಠಕ್ಕೆ ಭೇಟಿ ನೀಡಲಿದೆ. ಈ ವೇಳೆ ಮೋಡಿ ಲಿಪಿಯ ಹಸ್ತಪ್ರತಿಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿ, ಭಾಷಾಂತರ ಮತ್ತು ಸಂರಕ್ಷಣಾ ಕಾರ್ಯದ ರೂಪುರೇಷೆ ಸಿದ್ಧಪಡಿಸಲಿದೆ. ಬಳಿಕ ಯೋಜನೆಯ ಕಾರ್ಯಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು.
ಈ ಸಂದರ್ಭದಲ್ಲಿ ಶ್ರೀಮಠದ ಉತ್ತರಾಧಿಕಾರಿ ಶಂಕರ ಭಾರತಿ ಸ್ವಾಮೀಜಿ, ನಾರು ವಡೇರ, ಗಜಾನನ ಪಾಟೀಲ, ಸಂಜಯ ಜರಳಿ, ಸಂಜು ಶಿಂಧೆ, ಗೋಪಾಲ ಕುಲಕರ್ಣಿ, ಸುಹಾಸ ಕುಲಕರ್ಣಿ, ಅಥರ್ವ ಪನಶೀಕರ ಸೇರಿದಂತೆ ಶ್ರೀಮಠದ ಭಕ್ತರು, ಪದಾಧಿಕಾರಿಗಳು ಹಾಗೂ ಗೋವಾ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.