ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಸಮಾವೇಶ

KannadaprabhaNewsNetwork |  
Published : Nov 25, 2026, 01:30 AM IST
 | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ನಗರದ ಹೊರವಲಯದ ಆಳಂದ ರಸ್ತೆಯ ಭೋಸಗಾ ಕ್ರಾಸ್ ಸಮೀಪ ಡಿ.12ರಿಂದ ಮೂರು ದಿನಗಳ ಕಾಲ ನವ ಕರ್ನಾಟಕ ರೈತ ಸಂಘದ ವತಿಯಿಂದ ರಾಷ್ಟ್ರಮಟ್ಟದ ಬೃಹತ್ ರೈತ ಚಿಂತನ ಸಮಾವೇಶ ಹಾಗೂ ಕೃಷಿ ಮೇಳ ಆಯೋಜಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ನಗರದ ಹೊರವಲಯದ ಆಳಂದ ರಸ್ತೆಯ ಭೋಸಗಾ ಕ್ರಾಸ್ ಸಮೀಪ ಡಿ.12ರಿಂದ ಮೂರು ದಿನಗಳ ಕಾಲ ನವ ಕರ್ನಾಟಕ ರೈತ ಸಂಘದ ವತಿಯಿಂದ ರಾಷ್ಟ್ರಮಟ್ಟದ ಬೃಹತ್ ರೈತ ಚಿಂತನ ಸಮಾವೇಶ ಹಾಗೂ ಕೃಷಿ ಮೇಳ ಆಯೋಜಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಶ್ರೀನಿವಾಸ ಸರಡಗಿಯ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಹಾಗೂ ಪಾಳಾದ ಪೂಜ್ಯ ಡಾ. ಗುರುಮೂರ್ತಿ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಸಭೆ ಜರುಗಿತು.ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿ ಮೊದಲ ಬಾರಿಗೆ ಇಂತಹ ರಾಷ್ಟ್ರಮಟ್ಟದ ರೈತ ಸಮಾವೇಶ ಮತ್ತು ಕೃಷಿ ಮೇಳ ಆಯೋಜಿಸಲಾಗುತ್ತಿದೆ. ಸಮಾವೇಶವು ಕೇವಲ ಭಾಷಣ ಹಾಗೂ ಘೋಷಣೆಗಳಿಗೆ ಸೀಮಿತವಾಗದೆ, ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ ಸೇರಿದಂತೆ ಕೃಷಿ ಆಧಾರಿತ ಉಪಕಸುಬುಗಳು ಹಾಗೂ ನೂತನ ತಂತ್ರಜ್ಞಾನಗಳ ಅಳವಡಿಕೆ ಕುರಿತು ಸಮಗ್ರ ಚರ್ಚೆ ನಡೆಸುವ ಉದ್ದೇಶ ಹೊಂದಿದೆ ಎಂದರು.ಪ್ರಕೃತಿ ವಿಕೋಪದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಲೆ ಏರಿಳಿತ, ಕೃಷಿ ನಷ್ಟ ಸೇರಿದಂತೆ ಹಲವು ಸಮಸ್ಯೆಗಳಿಂದ ಅನ್ನದಾತನ ಬದುಕು ದುಸ್ತರವಾಗಿದೆ. ದೇಶದ ಬೆನ್ನೆಲುಬಾಗಿರುವ ರೈತರ ನೆರವಿಗೆ ಪ್ರತಿಯೊಬ್ಬರೂ ಸ್ಪಂದಿಸಿ, ಅವರೊಂದಿಗೆ ನಿಲ್ಲುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈತ ಸಮಾವೇಶ ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು.ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದ ಹಳ್ಳಿಗಳು ಖಾಲಿಯಾಗುತ್ತಿವೆ. ಸ್ಥಳೀಯವಾಗಿ ಉದ್ಯೋಗ ಸಿಗದೆ ದುಡಿಯುವ ಕೈಗಳು ಗುಳೆ ಹೋಗುತ್ತಿವೆ. ಇದನ್ನು ತಡೆಗಟ್ಟಲು ಗುಡಿ ಕೈಗಾರಿಕೆಗಳು, ಹೈನುಗಾರಿಕೆ ಸೇರಿದಂತೆ ಕೃಷಿ ಆಧಾರಿತ ಉಪಕಸುಬುಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ. ಮೂರು ದಿನಗಳ ಸಮಾವೇಶ ಹಾಗೂ ಕೃಷಿ ಮೇಳದಲ್ಲಿ ರೈತರು, ಕೃಷಿ ಕಾರ್ಮಿಕರು, ರೈತ ಮಹಿಳೆಯರು ಹಾಗೂ ವಿಶೇಷವಾಗಿ ವಿದ್ಯಾರ್ಥಿ ಯುವಜನರು ಭಾಗವಹಿಸಿ ಕೃಷಿಯ ಮಹತ್ವ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ, ಸಮಾವೇಶದ ಉಪಾಧ್ಯಕ್ಷ ಶಿವಕಾಂತ ಮಹಾಜನ, ಪದಾಧಿಕಾರಿಗಳಾದ ಅಶೋಕ ಗುತ್ತೇದಾರ ಬಡದಾಳ, ದಿವ್ಯಾ ಹಾಗರಗಿ, ಮಂಜು ರೆಡ್ಡಿ, ಸಂತೋಷ ಗುತ್ತೇದಾರ, ರಾಜೇಶ ಹಗರಗಿ, ಆರತಿ ತಿವಾರಿ, ಪವನಕುಮಾರ ವಳಕೇರಿ, ಜಿ.ಕೆ. ಪಾಟೀಲ ಸೇಡಂ, ಕಲ್ಯಾಣಪ್ಪ ಪಾಟೀಲ ಮಳಖೇಡ, ವಿಜಯ ರಾಠೋಡ, ಅಂಬಾರಾಯ ಅಷ್ಟಗಿ, ಸೋನು ಪಾಠಕ ಹಾಗೂ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರಹಿ ಇದ್ದರು. ಶ್ರೀಮತಿ ಗುರುಬಾಯಿ ವಸ್ತ್ರದ ಪ್ರಾರ್ಥಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳೂ ಸಂವಿಧಾನ ವಿರೋಧಿ: ಎಂ.ಕೃಷ್ಣಮೂರ್ತಿ
ಇಂದು ರೈತರ ಟ್ರ್ಯಾಕ್ಟರ್ ರ್‍ಯಾಲಿಗೆ ಮಹಿಳಾ ಒಕ್ಕೂಟ ಬೆಂಬಲ