ಫಸಲು ನೀಡುವ ಅಡಕೆ, ತೆಂಗಿನ ಮರಗಳು ಸುಟ್ಟು ಕರಕಲು
ತಾಲೂಕಿನ ಮಂಡ್ಲಿಕೊಪ್ಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಸುಮಾರು ₹೪ ಲಕ್ಷ ಮೌಲ್ಯದ ಕೃಷಿ ಸಾಮಗ್ರಿ ಹಾಗೂ ಫಸಲು ನೀಡುವ ಅಡಕೆ, ತೆಂಗಿನ ಮರಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಇಲ್ಲಿನ ಸುಮಾ ಹೆಗಡೆ ಎನ್ನುವವರಿಗೆ ಸೇರಿದ ಮನೆಯ ತೋಟದ ಸಮೀಪ ಈ ಅವಘಡ ಸಂಭವಿಸಿದೆ. ಅಣಬೆ (ಮಶ್ರುಮ್) ಉದ್ಯಮಕ್ಕಾಗಿ ಶೇಖರಿಸಿಡಲಾಗಿದ್ದ ಸುಮಾರು ₹೧ ಲಕ್ಷ ೯೬ ಸಾವಿರ ಮೌಲ್ಯದ ೭೦೦ ರೋಲ್ ಹುಲ್ಲು ಹಾಗೂ ₹೭೫ ಸಾವಿರ ಮೌಲ್ಯದ ೪ ಲೋಡ್‌ಗಳಷ್ಟು ಜೋಳದ ದಂಟು, ಬೆಂಕಿಯ ತೀವ್ರತೆಗೆ ಶೆಡ್‌ಗೆ ಅಳವಡಿಸಲಾಗಿದ್ದ ₹೩೨ ಸಾವಿರ ಮೌಲ್ಯದ ಶೀಟ್, ₹೧೫ ಸಾವಿರ ಮೌಲ್ಯದ ಪೈಪ್, ₹೬ ಸಾವಿರ ಬೆಲೆಬಾಳುವ ಎಲೆಕ್ಟ್ರಿಕಲ್ ವೈರ್ ಹಾಗೂ ₹೧೦ ಸಾವಿರ ಮೌಲ್ಯದ ಪ್ಯಾನಲ್ ಬೋರ್ಡ್‌ಗಳು ನಾಶವಾಗಿವೆ. ಇದರೊಂದಿಗೆ ತೋಟಕ್ಕೆ ಅಳವಡಿಸಿದ್ದ ₹೧೦ ಸಾವಿರ ಮೌಲ್ಯದ ಡ್ರಿಪ್ ಪೈಪ್‌ಗಳು ಕರಗಿ ಹೋಗಿವೆ. ದುರಂತದಲ್ಲಿ ತೋಟದಲ್ಲಿದ್ದ ಸುಮಾರು ೫೦ ಅಡಕೆ ಮರಗಳು ಹಾಗೂ ೪ ತೆಂಗಿನ ಮರಗಳು ಸುಟ್ಟು ಹೋಗಿದ್ದು, ಇವುಗಳ ಮೌಲ್ಯ ₹೩೫ ಸಾವಿರ, ಇತರೆ ವಸ್ತುಗಳು ಸೇರಿದಂತೆ ಒಟ್ಟಾರೆ ₹೩. ೯೯ ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಸತತ ಕಾರ್ಯಾಚರಣೆ:
ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸಂಜೆ ೬ ಗಂಟೆಯವರೆಗೂ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.