ಕನ್ನಡಪ್ರಭ ವಾರ್ತೆ ಹಲಗೂರು
ಕರ್ನಾಟಕ ಪ್ರಾಂತ ರೈತ ಸಂಘಟನೆ ಹಲಗೂರು ಹೋಬಳಿ ಸಮಿತಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರಾಪಂ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕೃಷಿ ಕೂಲಿಕಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಧಿಕಾರ ಶಾಹಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದು ದೂರಿದರು.ನಗರ ಪ್ರದೇಶಗಳಿಗೆ ಕೂಲಿಕಾರರು ವಲಸೆ ಹೋಗುವುದನ್ನು ತಡೆಗಟ್ಟಲು, ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಕೆಲಸ ನೀಡುವ ಉದ್ದೇಶದಿಂದ ಎಡಪಕ್ಷಗಳ ಒತ್ತಾಯದ ಮೇರೆಗೆ ಯುಪಿಎ ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿತ್ತು. ಆದರಂತೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೆಲಸ ಮಾಡಿದ ನಂತರ ಫೋಟೋ ತೆಗೆಯಲು ದಿನಗಟ್ಟಲೆ ಕಾಯಿಸುವುದು ಕಾಯಕ ಬಂದುವಿಗೆ ಹಣ ಹಾಕದಿರುವುದು ಹಾಗೂ ಬೋರ್ಡ್ ಬರೆಸಿದ ಹಣವನ್ನು ಸಹ ಹಾಕದಿರುವುದು ಇವೆಲ್ಲವೂ ಯೋಜನೆ ದುರ್ಬಲಗೊಳಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಹಲಗೂರು ಹೋಬಳಿ ಘಟಕ ಅಧ್ಯಕ್ಷ ಎಂ.ಇ.ಮಹದೇವ, ಕಾರ್ಯದರ್ಶಿ ಮಹೇಶ್, ತಾಲೂಕು ಉಪಾಧ್ಯಕ್ಷರಾದ ಪ್ರಮೀಳಾ, ಶಿವಕುಮಾರ್, ಸಹ ಕಾರ್ಯದರ್ಶಿ ಸತೀಶ್, ಮುಖಂಡರಾದ ಸಣ್ಣಶೆಟ್ಟಿ, ಗಣೇಶ್ ಹಲವರು ಭಾಗವಹಿಸಿದ್ದರು.