ನಾಳೆ ಕೃಷಿ ವಿವಿ ಘಟಿಕೋತ್ಸವ: 156 ಚಿನ್ನದ ಪದಕ ಪ್ರದಾನ

KannadaprabhaNewsNetwork |  
Published : Mar 03, 2024, 01:32 AM ISTUpdated : Mar 03, 2024, 11:54 AM IST
GKVK | Kannada Prabha

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸ ಮಾ.4ರಂದು ನಡೆಯಲಿದ್ದು, ಒಟ್ಟು 1244 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. 156 ಚಿನ್ನದ ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ವಿವಿ ಕುಲಪತಿ ಡಾ। ಎಸ್.ವಿ.ಸುರೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸ ಮಾ.4ರಂದು ನಡೆಯಲಿದ್ದು, ಒಟ್ಟು 1244 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. 156 ಚಿನ್ನದ ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ವಿವಿ ಕುಲಪತಿ ಡಾ। ಎಸ್.ವಿ.ಸುರೇಶ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 11.30ಕ್ಕೆ ಹೆಬ್ಬಾಳದ ಜಿಕೆವಿಕೆಯ ಡಾ। ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆಯಲಿರುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ವಹಿಸಲಿದ್ದಾರೆ. 

ಕೃಷಿ ಸಚಿವ ಚಲುವರಾಯಸ್ವಾಮಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ। ಹಿಮಾಂಶು ಪಾಠಕ್ ಮತ್ತಿತರರು ಉಪಸ್ಥಿತರಿರುವರು ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಹಾಸನ ಜಿಲ್ಲೆಯ ದೊಡ್ಡಮಗ್ಗೆ ಗ್ರಾಮದ ಎಂ.ಸಿ.ರಂಗಸ್ವಾಮಿ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ಗೌರವ ಡಾಕ್ಟರೆಟ್ ಪ್ರದಾನಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ। ಬಸವೇಗೌಡ, ಶಿಕ್ಷಣ ನಿರ್ದೇಶಕ ಡಾ। ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ವಿ.ಎಲ್.ಮಧುಪ್ರಸಾದ್ ಉಪಸ್ಥಿತರಿದ್ದರು.

ಇಸ್ರೇಲ್‌ ಮಾದರಿ ಕೃಷಿಕನಿಗೆ ಕೃಷಿ ವಿವಿ ಗೌರವ ಡಾಕ್ಟರೆಟ್‌

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಎಂ.ಸಿ.ರಂಗಸ್ವಾಮಿ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಇಸ್ರೇಲ್‌ ಮಾದರಿ ಹೈನುಗಾರಿಕೆ ತಂತ್ರಜ್ಞಾನವನ್ನು ಅಳವಡಿಕೊಂಡು ಸಾಧನೆ ಮಾಡಿದ್ದನ್ನು ಗುರುತಿಸಿ ಬೆಂಗಳೂರು ಕೃಷಿ ವಿವಿಯು ಗೌರವ ಡಾಕ್ಟರೆಟ್‌ಗೆ ಆಯ್ಕೆ ಮಾಡಿದೆ.

ರಂಗಸ್ವಾಮಿ ಅವರು ಸುಮಾರು 600 ಎಕರೆ ಜಮೀನಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ, ಹೈನುಗಾರಿಕೆ ಸಹ ಕೈಗೊಂಡಿದ್ದಾರೆ. 

ಪಶು ಆಹಾರ ಉತ್ಪಾದನಾ ಘಟಕ, ಅಂಗಾಂಶ ಕೃಷಿಯ ಮೂಲಕ ವೆನಿಲ್ಲಾ ಸಸಿಗಳ ಉತ್ಪಾದನೆ, ಮೀನು ಸಾಕಾಣೆ, ವಿದೇಶಿ ಜಾತಿ ಬೆಣ್ಣೆ ಹಣ್ಣಿನ ತಳಿ ಅಳವಡಿಕೆ, ಮಿಶ್ರಬೆಳೆ, ಅಂತರ ಬೆಳೆ ಪದ್ಧತಿ ಅಳವಡಿಸಿಕೊಂಡಿದ್ದಾರೆ. 

ಜಮೀನಿನಲ್ಲಿ ವ್ಯರ್ಥವಾಗಿ ಪೋಲಾಗುತ್ತಿದ್ದ ನೀರಿಗೆ ಕೃಷಿ ಹೊಂಡ ಮತ್ತು ಇಂಗು ಗುಂಡಿ ನಿರ್ಮಿಸಿದ್ದಾರೆ. ಜೊತೆಗೆ ಹಸಿರು ಮನೆಯಲ್ಲಿ ವೈಜ್ಞಾನಿಕ ರೀತಿಯ ಕೃಷಿಗೆ ಒತ್ತು ನೀಡಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕುಲಪತಿ ಸುರೇಶ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ