ರಸಗೊಬ್ಬರದ ಅಭಾವಕ್ಕೆ ಕೃಷಿ ಇಲಾಖೆಯೇ ಕಾರಣ: ಮಾಜಿ ಸಚಿವ ಬಿ.ಸಿ. ಪಾಟೀಲ

KannadaprabhaNewsNetwork |  
Published : Jul 28, 2025, 12:32 AM IST
27ಎಚ್‌ವಿಆರ್1- | Kannada Prabha

ಸಾರಾಂಶ

ರಾಜ್ಯದೆಲ್ಲೆಡೆ ನಕಲಿ ಹಾಗೂ ಕಳಪೆ ರಸಗೊಬ್ಬರಗಳ ಹಾವಳಿ ಸಹ ಹೆಚ್ಚಾಗಿದ್ದು, ಕೃಷಿ ಇಲಾಖೆ ಹಾಗೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

ಹಾವೇರಿ: ರಾಜ್ಯದಲ್ಲಿ ಗೊಬ್ಬರದ ಅಭಾವ ಸೃಷ್ಟಿಯಾಗಲು ಕೃಷಿ ಇಲಾಖೆ ಕಾರಣ. ಹವಾಮಾನ ಇಲಾಖೆ ಮಾರ್ಚ್‌ನಲ್ಲೇ ಅತಿಯಾದ ಮಳೆಯ ಮುನ್ಸೂಚನೆ ನೀಡಿದ್ದರೂ ಕೃಷಿ ಸಚಿವ ಚಲುವರಾಯಸ್ವಾಮಿ ಅಗತ್ಯ ತಯಾರಿ ಮಾಡಿಕೊಳ್ಳದಿರುವುದು ಈ ಸ್ಥಿತಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ಗೊಬ್ಬರ ಪೂರೈಸಿದ್ದರೂ ಬೇರೆಡೆ ಮಾರಾಟ ಮಾಡಿಕೊಂಡಿರುವ ಶಂಕೆ ಇದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಿಯಾದ ರೀತಿಯಲ್ಲಿ ಗೊಬ್ಬರದ ದಾಸ್ತಾನು ಮಾಡದೇ, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಸಹಿತ ಸರ್ಕಾರ ತೆಗೆದುಕೊಳ್ಳದ್ದರಿಂದ ಅಭಾವ ಸೃಷ್ಟಿಯಾಗಿದೆ ಎಂದರು.

ರಾಜ್ಯದೆಲ್ಲೆಡೆ ನಕಲಿ ಹಾಗೂ ಕಳಪೆ ರಸಗೊಬ್ಬರಗಳ ಹಾವಳಿ ಸಹ ಹೆಚ್ಚಾಗಿದ್ದು, ಕೃಷಿ ಇಲಾಖೆ ಹಾಗೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸರ್ಕಾರವು ಕೇವಲ ಸಾಧನಾ ಸಮಾವೇಶ ಮಾಡುವುದರಲ್ಲಿ ಬಿಜಿಯಾಗಿದೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಸರ್ಕಾರ ವಹಿಸುತ್ತಿಲ್ಲ. ಜಿಲ್ಲೆಯಲ್ಲಿ ಉಂಟಾದ ಬೆಳೆನಾಶದ ಸರ್ವೆ ನಡೆಸಿ ಎಂದರೂ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಸರ್ಕಾರ ಸಂಪೂರ್ಣ ಹಳಿ ತಪ್ಪಿದೆ. ಇದು ರೈತ ವಿರೋಧಿ ಸರ್ಕಾರ ಎಂದು ದೂರಿದರು. ಜು. 29ರಂದು ಪ್ರತಿಭಟನೆ: ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಕೆಗೆ ಒತ್ತಾಯಿಸಿ ಹಾಗೂ ಮಧ್ಯಂತರ ಬೆಳೆಹಾನಿ ಪರಿಹಾರ ವಿತರಣೆಗೆ ಆಗ್ರಹಿಸಿ ಜು. 29ರಂದು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲಾಗುವುದು.

ರಾಜ್ಯ ಸರ್ಕಾರ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿತ್ತು. ಆದರೆ ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ಪೂರೈಸಿತ್ತು. ಕೇಳಿದ್ದಕ್ಕಿಂತ ಹೆಚ್ಚು ಗೊಬ್ಬರವನ್ನು ಕೇಂದ್ರ ಪೂರೈಸಿದೆ. ಇದನ್ನು ರಾಜ್ಯ ಸರ್ಕಾರ ಫ್ಯಾಕ್ಟರಿಗಳಿಗೆ ಮಾರಾಟ ಮಾಡಿರುವ ಸಂಶಯ ಮೂಡುತ್ತಿದೆ.

ಈ ಮೂಲಕ ರಾಜ್ಯ ಸರ್ಕಾರ ಇದರಲ್ಲೂ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ಆರು ಶಾಸಕರಿದ್ದರೂ ಜನರ ಗೋಳು ಕೇಳುವವರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಗಮನಿಸುತ್ತಿಲ್ಲ ಎಂದು ದೂರಿದರು.ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಗ್ರಾಮದಲ್ಲಿ ಎರಡು ಕೆರೆಗಳ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಹೊಲಗಳಿಗೆ ನುಗ್ಗಿ ಬೆಳೆಹಾನಿಗೀಡಾಗಿದೆ. ಕೆಲಸದ ಅನುಭವ ಇಲ್ಲದ ಕಾಂಗ್ರೆಸ್ ಮುಖಂಡನೊಬ್ಬ ಗುತ್ತಿಗೆ ಪಡೆದು ಇತ್ತೀಚೆಗೆ ಕೆರೆಗೆ ಒಡ್ಡು ನಿರ್ಮಿಸಿದ್ದ. ಕಳಪೆ ಕಾಮಗಾರಿಯಿಂದ ಅದು ಒಡೆದಿದೆ ಎಂದು ಆರೋಪಿಸಿದರು.ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ಮಂಜುನಾಥ ಓಲೇಕಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶಪ್ಪ ಮೇಗಳಮನಿ, ಕಲ್ಯಾಣಕುಮಾರ ಶೆಟ್ಟರ್, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''