ಹುಬ್ಬಳ್ಳಿ: ವೀರಶೈವ ಲಿಂಗಾಯತ ಎರಡು ಒಂದೇ. ಅವುಗಳನ್ನು ಬೇರೆ ಬೇರೆ ಮಾಡುವುದರಿಂದ ಸಮಾಜ ಒಡೆದು ಛಿದ್ರ ಛಿದ್ರವಾಗುತ್ತದೆ. ಗುರು ವಿರಕ್ತರು ಒಂದಾಗಬೇಕು. ಆ ಕಾರ್ಯವನ್ನು ಪಂಚಪೀಠದ ಶ್ರೀಗಳು ಮಾಡುವುದಾಗಿ ಭರವಸೆ ನೀಡಿದ್ದಾರೆ. ಸಮಾಜದಲ್ಲಿ ಭಿನ್ನಮತ ಉಂಟು ಮಾಡುವ ಕಾರ್ಯವನ್ನು ಕೆಲ ಸ್ವಾಮೀಜಿಗಳು ಮಾಡುತ್ತಿದ್ದು, ನಾವೆಲ್ಲ ಜಾಗೃತರಾಗಿರಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ವೀರಶೈವ ಸಂಘಟನಾ ಸಮಿತಿ ಮೂರುಸಾವಿರ ಮಠ, ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನೆ, ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘ, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಂಸ್ಥೆ, ವೀರಶೈವ ಸಮಾಜ ಸಂಘಟನಾ ಸೇವಾ ಸಮಿತಿ ಆಶ್ರಯದಲ್ಲಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಲಿಂಗಾಯತ ಒಳಪಂಡಗಳು ಬೇರೆ ಬೇರೆ ರೀತಿ ಕಾರ್ಯಕ್ರಮಗಳನ್ನು ಮಾಡಲಿ. ಆದರೆ, ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳು ಒಂದು ಎಂಬುದನ್ನು ತೋರ್ಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಬಗೆಗೆ ಹೆಚ್ಚಾಗಿ ಚರ್ಚೆಯಾಗುತ್ತಿದೆ. ವೀರಶೈವ ಲಿಂಗಾಯತ ಒಂದು ಎಂದು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸಮಾಜದ ಹೆಸರು ನಮೂದಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
೨೦೨೬ರಲ್ಲಿ ಜಾತಿ ಗಣತಿ ನಡೆಯಲಿದ್ದು, ಈ ವೇಳೆ ಎಲ್ಲರೂ ವೀರಶೈವ ಲಿಂಗಾಯತ ಎಂದು ನಮೂದಿಸಬೇಕು. ಕೇಂದ್ರ ಜಾತಿಗಣತಿ ಮಾಡುವಾಗ ರಾಜ್ಯ ಸರ್ಕಾರ ಮತ್ತೆ ರಾಜ್ಯದಲ್ಲಿ ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದರು.ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರೆ ಅವರು ಸಮಾಜದ ಬಗ್ಗೆ ಕಾಳಜಿ ಹೊಂದಿ ಉತ್ತಮ ಸಾಧನೆ ಮಾಡಲು ಪ್ರೇರಣೆ ದೊರೆಯುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ತಂದೆ-ತಾಯಿಗಳು ಸಾಕಷ್ಟು ತ್ಯಾಗ ಮಾಡಿರುತ್ತಾರೆ. ಸಾಧನೆ ಮಾಡಿ ದೊಡ್ಡವರಾದ ಮೇಲೆ ತಂದೆ-ತಾಯಿಯನ್ನು ಮಕ್ಕಳು ಮರೆಯಬಾರದು. ಯಾವುದೇ ಪರಿಸ್ಥಿತಿ ಎದುರಾದರೂ ತಂದೆ-ತಾಯಿ ಆಶ್ರಯ ನೀಡಿ ರಕ್ಷಣೆ ಮಾಡಬೇಕು ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ವಿದ್ಯಾರ್ಥಿಗಳು ನಾಡಿನ ಭವಿಷ್ಯದ ನಾಯಕರಾಗುತ್ತಾರೆ. ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ಶಿಕ್ಷಣದಿಂದ ಭವಿಷ್ಯದಲ್ಲಿ ಉತ್ತಮ ಸ್ಥಾನ ಹೊಂದಲು ಸಾಧ್ಯ. ಉತ್ತಮ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಮಾನವೀಯತೆಯ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು.ರಾಜಣ್ಣ ಕೊರವಿ, ನಾಗರಾಜ ಗೌರಿ, ತಾರಾದೇವಿ ವಾಲಿ, ಶಿವಣ್ಣ ಅಂಗಡಿ, ಪ್ರಕಾಶ ಬೆಂಡಿಗೇರಿ, ಮಹಾಂತೇಶ ಗಿರಿಮಠ, ಶಂಭುಲಿಂಗ ಲಕ್ಷ್ಮೇಶ್ವರಮಠ, ಸದಾಶಿವ ಚೌಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.