ಕಳೆಕಟ್ಟಿದ ಕೃಷಿ ಮೇಳ; ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ 2 ಲಕ್ಷ ಮಂದಿ ಭೇಟಿ

KannadaprabhaNewsNetwork | Published : Dec 9, 2024 12:46 AM

ಸಾರಾಂಶ

ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಪ್ರಸಕ್ತ ಸಾಲಿನ ಕೃಷಿ ಮೇಳವು ಕಳೆಕಟ್ಟಿದ್ದು, ಎರಡು ದಿನಗಳಲ್ಲಿ ಸುಮಾರು 2 ಲಕ್ಷ 20 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ.ವಾರಾಂತ್ಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳ ರೈತರು, ಪಕ್ಕದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಸೋಲಾಪುರ ಇತರೆ ಪ್ರದೇಶಗಳಿಂದಲೂ ಕೃಷಿ ಮೇಳವನ್ನು ವೀಕ್ಷಿಸಲು ಆಗಮಿಸಿರುವುದು ವಿಶೇಷವಾಗಿತ್ತು. ಮೇಳದಲ್ಲಿ ಕೇವಲ ರೈತರಷ್ಟೇ ಅಲ್ಲದೇ ಮಹಿಳೆಯರು, ಯುವಕರು, ವಿದ್ಯಾರ್ಥಿಗಳು,ಮಕ್ಕಳು ಭಾಗವಹಿಸಿ ಕೃಷಿ ಹಾಗೂ ಕೃಷಿಗೆ ಸಂಬಂಧಿತ ವಿಷಯಗಳನ್ನು ಅರಿಯುವುದರ ಜೊತೆಗೆ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.ಶ್ವಾನ ಪ್ರದರ್ಶನ ಗ್ರೇಡ್ ಡೆನ್ ಗೆ ಗೆಲುವು: ಮೇಳದ ಎರಡನೇ ದಿನದ ಜಿಲ್ಲಾಡಳಿತ, ಜಿಪಂ, ಪ್ರಾಣಿ ದಯಾ ಸಂಘ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಪಶುಪಾಲನಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಶ್ವಾನಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಶ್ವಾನ ಪ್ರದರ್ಶನದಲ್ಲಿ ಪಗ್, ಗೋಲ್ಡನ್ ಪೆಟ್, ವೇರ್ ಪಂಜಾಬಿ, ಜರ್ಮನ್ ಶಫರ್ಡ್, ಕೋಲಿನ್ ಪೈಜ್ ಶೆಲ್ಟ್, ಹೆವಿ ಬ್ರಿಡ್, ಡೊಮೆರಿನ್, ಮುಧೋಳ ಹೊಂಡ, ಲವ್ಲಿ ಸ್ವಿಡ್ಜ್ ಡ್ರೈನ್, ರೋಟ್ ವಿಲ್ಲರ್ ಸೇರಿ ವಿವಿಧ ದೇಸಿ ವಿದೇಶಿಯ 14 ತಳಿಯ ಶ್ವಾನಗಳ ಪ್ರದರ್ಶನ ನಡೆಯಿತು. ಇದರಲ್ಲಿ ಸಾಗರ್‌ ಎಂಬುವ ವರಿಗೆ ಸೇರಿದ ಗ್ರೇಡ್ ಡೆನ್ ತಳಿಯ ಶ್ವಾನ ಗೆಲುವು ಸಾಧಿಸಿತು.ಜಗಜೀವನ್ ರಾಮ್ ಅನಿಮಲ್ಸ್ ಸೈನ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಪಶುಪಾಲನಾ ಇಲಖೆಯ ಸಂಯುಕ್ತ ಆಶ್ರಯದಲ್ಲಿ ಶ್ವಾನ ಪ್ರದರ್ಶನ ನಡೆದಿದ್ದು ರಾಯಚೂರು, ಬೀದರ್, ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಶ್ವಾನ ಪ್ರಿಯರು ತಮ್ಮ ಶ್ವಾನಗಳನ್ನು ಪ್ರದರ್ಶನಕ್ಕೆ ತಂದಿದ್ದರು.ಬಳ್ಳಾರಿಯ ಕೆವಿಕೆ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ, ಗಂಗಾವತಿ ಕೆವಿಕೆಯ ಮಹಾಂತೇಶ, ಪ್ರಾಧ್ಯಾಪಕರಾದ ಪ್ರಹ್ಲಾದ್ ಉಭಾಳೆ, ಕೊಟ್ರೇಶ ತೀರ್ಪುಗಾರರಾಗಿದ್ದರು. ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆಯನ್ನು ಹಾಕಲಾಯಿತು.ಉಪಯುಕ್ತ ಮಾಹಿತಿ:

ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣ, ಪರಿಕರ, ನೂತನ ತಂತ್ರಜ್ಞಾನಗಳ ಹಾಗೂ ಸಮಗ್ರ ಕೃಷಿ ಪದ್ಧತಿಯ ಉಪಯುಕ್ತ ಮಾಹಿತಿ ದೊರೆಯಿತು. ಜಿಲ್ಲೆಯಲ್ಲಿ ಹತ್ತಿ, ಭತ್ತ, ತೊಗರಿ ಹೆಚ್ಚಾಗಿ ಬೆಳೆಯುವ ಕಾರಣ ವಿವಿಧ ಕಂಪನಿಗಳು ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯಿಸಿದವು.ಮೇಳದಲ್ಲಿ ತೆಲಂಗಾಣ, ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಸಂಸ್ಥೆಗಳು ಹಾಗೂ ಕಂಪನಿಗಳು ಭಾಗವಹಿಸಿ ರಸಗೊಬ್ಬರ ಸಿಂಪಡಿಸುವ ಡ್ರೋನ್, ಸೌರಶಕ್ತಿಯ ಸ್ವಯಂ ಚಾಲಿತ ನೀರಿನ ಪಂಪ್ಸೆಟ್ ಬಳಕೆಯ ಮಾಹಿತಿ ಒದಗಿಸಿದವು.14 ಜನರಿಗೆ ಕೃಷಿ ಪ್ರಶಸ್ತಿ ಪ್ರದಾನ

ಮೇಳದ ವೇದಿಕೆ ಕಾರ್ಯಕ್ರಮದಲ್ಲಿ ವಿವಿ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡ 14 ಜನರಿಗೆ ಕೃಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಕಲಬುರಗಿ ಜಿಲ್ಲೆಯ ಕನಕನಾಳಿ ಗ್ರಾಮದ ಬಸವರಾಜ್, ಸೈಯದ್ ಚಿಂಚೋಳಿ ಗ್ರಾಮದ ಜ್ಯೋತಿ, ಬೀದರ್ ಜಿಲ್ಲೆಯ ಯನಗುಂದಾ ಗ್ರಾಮದ ರಾಮರೆಡ್ಡಿ, ಹಾಲಹಿಪ್ಪರಗಾ ಗ್ರಾಮದ ಶಿಲ್ಪಾ, ವಿಜಯನಗರ ಜಿಲ್ಲೆಯ ಹುಲಗೂರು ಚಂದ್ರಗೌಡ ಬುಳ್ಳನಗೌಡ, ಅಡವಿ ಆನಂದ ವಿ.ಅನಸೂಯ, ಕೊಪ್ಪಳ ಜಿಲ್ಲೆಯ ಆಚಾರ ನರಸಾಪುರದ ಶ್ರೀಪಾದರಾಜ ಜಿ.ಮುರಡಿ, ಚಿಕ್ಕಮನ್ನಾಪುರ ಗ್ರಾಮದ ನೀಲಮ್ಮ, ರಾಯಚೂರು ಜಿಲ್ಲೆಯ ಕಲಮಂಗಿ ಗ್ರಾಮದ ಮಲ್ಲಿಕಾರ್ಜುನ, ಗುಂಡಸಾಗರ ಗ್ರಾಮದ ಅನಸೂಯ, ಬಳ್ಳಾರಿ ಜಿಲ್ಲೆಯ ಮುಷ್ಟಘಟ್ಟ ಗ್ರಾಮದ ಕೆ.ಹನುಮಂತಪ್ಪ, ವದ್ದಟ ಗ್ರಾಮದ ರೇಣುಕಮ್ಮ, ಯಾದಗಿರಿ ಜಿಲ್ಲೆಯ ಮಾಲಹಳ್ಳಿ ಗ್ರಾಮದ ಕೆಂಜೊಡೆಪ್ಪ, ದೊರನಹಳ್ಳಿ ಗ್ರಾಮದ ರಾಧಾ ಅವರಿಗೆ ಶ್ರೇಷ್ಠ ಕೃಷಿಕ ಹಾಗೂ ಕೃಷಿಕ ಮಹಿಳೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.---ಮಾನ್ವಿ ಶಾಸಕ ಹಂಪಯ್ಯ ಗರಂಕೃಷಿ ವಿವಿಯಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳದ ಉದ್ಘಾಟನೆ ಸಮಾರಂಭದ ವೇದಿಕೆಯಲ್ಲಿ ಹೆಸರು ಕರೆಯದ್ದಕ್ಕೆ ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ ಗರಂಗೊಂಡ ಪ್ರಸಂಗ ಜರುಗಿತು.ಕಾರ್ಯಕ್ರಮದ ಆರಂಭದಲ್ಲಿ ಕುಲಪತಿ ಡಾ.ಎಂ.ಹನುಮಂತಪ್ಪ ಸ್ವಾಗತ ಭಾಷಣ ಮಾಡಿದರು. ಈ ವೇಳೆ ಎಲ್ಲರನ್ನು ಸ್ವಾಗತಿಸಿದ ಅವರು ಕೊನೆಯಲ್ಲಿ ಶಾಸಕ ಹಂಪಯ್ಯ ನಾಯಕ ನನ್ನ ಹೆಸರು ಕರೆಯಲೇ ಇಲ್ಲ. ಶಾಸಕರಿಗೆ ಸರಿಯಾದ ಗೌರವ ಕೊಡಲು ಬರುವುದಿಲ್ಲ ಎಂದು ಸಿಡಿಮಿಡಿಕೊಂಡ ಶಾಸಕರು ವೇದಿಕೆ ಮೇಲೆಯೇ ಕುಲಪತಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕುಲಪತಿ ಶಾಸಕರ ಕ್ಷಮೆ ಕೇಳಿ ಮತ್ತೊಮ್ಮೆ ಸ್ವಾಗತಿಸಿದರು.ಶಹಾಪುರದ ರೂಪಾ ಸಂಗಮೇಶ ಎಂಬ ಗೃಹಿಣಿಯೊಬ್ಬರು, ಕೃಷಿ ಮೇಳವು ಕೇವಲ ರೈತರಿಗಷ್ಟೇ ಅಲ್ಲ ಎಲ್ಲ ವರ್ಗದ ಜನರಿಗೆ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ ಹಾಗೂ ಯುವಕರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸುವ ವೇದಿಕೆಯಾಗಿದೆ. ವ್ಯವಸಾಹದಿಂದ ಹಿಂದೇಟು ಹಾಕುವವರು ಒಮ್ಮೆ ಮೇಳಕ್ಕೆ ಭೇಟಿ ನೀಡಿ ವಿವಿಧ ರೀತಿಯ ಕೃಷಿಗಳ ಕುರಿತು ತಿಳಿದುಕೊಂಡು ಲಾಭದಾಯಕ ಕೃಷಿಯಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದರು.

ಆಂಧ್ರದ ಎಮ್ಮಿಗನೂರಿ ರೈತ ವೆಂಕಟರಾಮುಲು, ನಾವು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಎಮ್ಮಿಗನೂರು ಗ್ರಾಮದಿಂದ ಕೃಷಿ ಮೇಳ ನೋಡಲು ಬಂದಿದ್ದೇವೆ. ಈ ಭಾಗದಲ್ಲಿ ಎಲ್ಲಿಯೂ ನಡೆಯದಂತಹ ಮೇಳ ಇದಾಗಿದ್ದು, ರೈತರಿಗೆ ಹೊಸ ವಿಷಯ, ತಂತ್ರಜ್ಞಾನ, ಯಂತ್ರೋಪಕರಣ, ರಸಗೊಬ್ಬರ, ಸಮಗ್ರ ಕೃಷಿ ಸೇರಿದಂತೆ ಸಾಕಷ್ಟು ಉಪಯುಕ್ತವಾದ ಸಂಗತಿಗಳನ್ನು ಒದಗಿಸಿಕೊಡಲಾಗಿದೆ ಎಂದು ಅನಿಸಿಕೆ ಹಂಚಿಕೊಂಡರು.

ಎಲ್ಲ ತಾಲೂಕುಗಳಿಗೂ ಕೃಷಿ ಹೊಂಡ ಯೋಜನೆ: ಸಚಿವ ಎನ್.ಚಲುವರಾಯಸ್ವಾಮಿರಾಯಚೂರು: ರಾಜ್ಯದ ಎಲ್ಲ ತಾಲೂಕುಗಳಿಗೂ ಕೃಷಿ ಹೊಂಡ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಹಾಗೂ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ ಎಂಬ ಘೋಷವಾಕ್ಯದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿರುವ ಕೃಷಿ ಮೇಳಕ್ಕೆ ಚಾಲನೆ ನೀಡಿ ರವಿವಾರ ಮಾತನಾಡಿದರು. ಇಷ್ಟು ದಿನ ಕೇವಲ ಮಳೆಯಾಶ್ರಿತ ಪ್ರದೇಶದ 106 ತಾಲೂಕುಗಳಿಗೆ ಸೀಮಿತಗೊಂಡಿದ್ದ ಕೃಷಿ ಹೊಂಡ ಯೋಜನೆಯನ್ನು ವಿಸ್ತರಿಸಿ ನೀರಾವರಿ ಪ್ರದೇಶ ಸೇರಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮಂಜೂರು ಮಾಡಲು ನಿರ್ಧರಿಸ ಲಾಗಿದ್ದು, ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಸಂಗ್ರಹಿಸಿಕೊಂಡು ನೀರಿನ ಸಮಸ್ಯೆ ಎದುರಾದಾಗ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.ಕೃಷಿ ಖರ್ಚು ಕಡಿಮೆಯಲ್ಲಿ ಹೆಚ್ಚಿನ ಉತ್ಪಾದನೆ ಹೆಚ್ಚಿಸಲು ಯಂತ್ರೋಪಕರಣ ಮತ್ತು ಹೊಸ ತಂತ್ರಜ್ಞಾನ ಅತ್ಯಗತ್ಯವಾಗಿದೆ. ರೈತರು ಈ ತಾಂತ್ರಿಕ ಸೌಲಭ್ಯ ಹೊಂದುವಂತೆ ಮಾಡಲು ಮತ್ತು ರಿಯಾಯಿತಿ ದರದಲ್ಲಿ ಯಂತ್ರೋಪಕರಣ ರೈತರಿಗೆ ತಲುಪುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಯಾವುದೇ ಕೃಷಿ ಉತ್ಪನ್ನವನ್ನು ನೇರವಾಗಿ ಮಾರುಕಟ್ಟೆಗೆ ತಂದರೆ ರೈತರಿಗೆ ಹೆಚ್ಚಿನ ಬೆಲೆ ದೊರೆಯುವುದಿಲ್ಲ. ಕೃಷಿ ಉತ್ಪನ್ನ ಸಂಸ್ಕರಣೆಯಿಂದ ದ್ವಿಗುಣ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಕಬ್ಬು ಬೆಳೆಗಾರರಿಗೆ ಹೈಟೆಕ್ ಯಂತ್ರೋಪಕರಣ ಪೂರೈಸಲಾಗಿದೆ. ಒಂದು ಯಂತ್ರದ ಬೆಲೆ ಒಂದು ಕೋಟಿ ರು. ಇದನ್ನು ರೈತರಿಗೆ ಶೇ.50 ರಿಂದ 60ರಷ್ಟು ರಿಯಾಯಿತಿ ದರದಲ್ಲಿ ಸರ್ಕಾರ ಒದಗಿಸಿದೆ ಎಂದು ವಿವರಿಸಿದರು.ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಎಂಜಿನಿಯರಿಂಗ್ ಕಾಲೇಜು ಆರಂಭವಾಗಿದ್ದು, ಸಾಕಷ್ಟು ಅನುಕೂಲತೆಗಳು ಒದಗಿಸಿ ಕೊಡಬೇಕಾಗಿದೆ. ಆಗ್ರಿ ಇಂಜಿನಿಯರಿಂಗ್ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿ ಕೊಡಬೇಕು. ಹೊಸದಾಗಿ ಬಿ.ಟೆಕ್ ಕೋರ್ಸ್ ಆರಂಭಿಸಲು ಸೂಚಿಸಲಾಗಿದೆ. ಕೃಷಿ ಸಚಿವರು ಸ್ಪಂದಿಸಿ ಕೋರ್ಸ ಆರಂಭಕ್ಕೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಕೃಷಿ ವಿವಿಯಲ್ಲಿ ಕೆಕೆಆರ್‌ಡಿಬಿ ಯೋಜನಯಡಿಯಲ್ಲಿ 25 ಕೋಟಿ ರು.ಗಳ ವೆಚ್ಚದಲ್ಲಿ ಕನ್ವೆಷ್ನಲ್ ಹಾಲ್ ಮಂಜೂರು ಮಾಡಲಾಗಿದ್ದು, ಕೃಷಿ ವಿವಿಯು ಅನುಕೂಲತೆ ಪಡೆದುಕೊಳ್ಳಬೇಕಾಗಿದೆ. ಕೃಷಿ ವಿವಿಯಲ್ಲಿ ಶೇ.50ರಷ್ಟು ಮಹಿಳಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿವಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವ ಕೆಲಸ ಮಾಡಬೇಕಿದೆ. ಭತ್ತದ ಕಣಜವೆಂದು ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಪಶು ಸಂಗೋಪನೆ, ತೋಟಗಾರಿಕೆ, ಆಹಾರ ತಂತ್ರಜ್ಞಾನ ಕಾಲೇಜು ಆರಂಭಿಸುವ ಅಗತ್ಯವಿದೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕರಾದ ಜಿ.ಹಂಪಯ್ಯ ನಾಯಕ, ಕರೆಮ್ಮ ಜಿ.ನಾಯಕ, ಎಂಎಲ್ಸಿ ಎ.ವಸಂತಕುಮಾರ, ಶರಣಗೌಡ ಪಾಟೀಲ್ ಬಯ್ಯಾಪೂರ, ಬಸನಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ, ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‌, ಬೋಧಕ-ಬೋಧಕೇತರ ಸಿಬ್ಬಂದಿ, ಕೃಷಿ ವಿದ್ಯಾರ್ಥಿಗಳು,ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ರೈತರು, ಜನಸಾಮಾನ್ಯರು ಪಾಲ್ಗೊಂಡಿದ್ದರು.ಪವರ್‌ ಶೇರಿಂಗ್‌ ಏನೂ ಇಲ್ಲ, ಸಿಎಂ

ಬದಲಾವಣೆಯೂ ಇಲ್ಲ: ಬೋಸರಾಜುರಾಯಚೂರು: ರಾಜ್ಯದಲ್ಲಿ ಯಾವುದೇ ರೀತಿಯ ಪವರ್‌ ಶೇರಿಂಗ್‌ ಇಲ್ಲ, ಮುಖ್ಯಮಂತ್ರಿಗಳ ಬದಲಾವಣೆಯೂ ಇಲ್ಲ, ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಸ್ಪಷ್ಟನೆ ನೀಡಿದ್ದು, ಈ ವಿಚಾರವಾಗಿ ಗೊಂದಲದ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.ರವಿವಾರ ಮಾತನಾಡಿದ ಅವರು, ರಾಜಕೀಯ ಕೊನೆಹಂತಕ್ಕೆ ತಲುಪಿದ್ದೇನೆ ಎಂದಿರೋ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಸಿಎಂ ಅವರಿಗೆ 78 ವರ್ಷ ವಸ್ಸಾಗಿರುವುದರಿಂದ ಆ ರೀತಿಯಲ್ಲಿ ಈ ಹೇಳಿಕೆಯನ್ನು ಕೊಟ್ಟಿದ್ದಾರೆಯೇ ವಿನಾ ಅವರು ರಾಜಕೀಯದಿಂದ ದೂರ ಉಳಿಯುವುದಿಲ್ಲ, ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸಲಾಗುವುದು. ರಾಜಕಾರಣದಲ್ಲಿ ಯಾರು ಜನರ ಪ್ರೀತಿ ವಿಶ್ವಾಸ ಹೊಂದಿರುತ್ತಾರೆಯೋ ಅವರ ಮೇಲಿನ ಜನಾಭಿಪ್ರಾಯ, ಸರ್ವೇ ಮಾಹಿತಿ ಪಡೆದು ಪಕ್ಷವು ತೀರ್ಮಾನ ಮಾಡುತ್ತದೆ ಎಂದರು.ಬಿಜೆಪಿ ಮನೆಯೊಂದು ಆರು ಬಾಗಿಲು!ಪ್ರಸ್ತುತ ರಾಜ್ಯದ ಬಿಜೆಪಿಯಲ್ಲಿ ಮನೆಯೊಂದು ಆರು ಬಾಗಿಲು ಎಂಬಂತ ಸನ್ನಿವೇಶ ನಿರ್ಮಾಣಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾಲಾಯಕ್‌ ಎಂದು ಅವರದ್ದೇ ಪಕ್ಷದ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ ಜಾರಕಿಹೊಳಿ ಜರಿಯುತ್ತಿದ್ದಾರೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಮುಗಿದಿಲ್ಲ. ಆ ಪಕ್ಷದ ಎಲ್ಲ ಮುಗಿದಿದೆ. ಮೊದಲ ತಮ್ಮ ಪಕ್ಷದೊಳಗಿನ ಆಂತರಿಕ ಸಮಸ್ಯೆಯನ್ನು ಬಗೆಹರಿಸಿಕೊಂಡು ನಂತರ ಸಿಎಂ ಹಾಗೂ ಕಾಂಗ್ರೆಸ್‌ ಪಕ್ಷದ ಬಗ್ಗೆ ಟೀಕಿಸಲಿ ಎಂದು ತಿರುಗೇಟು ನೀಡಿದರು.ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಪ್ರತಿ ಪಕ್ಷದವರು ಸಹಕಾರ ನೀಡಬೇಕು, ಇಷ್ಟು ದಿನ ಬರೀ ಸುಳ್ಳು ಆರೋಪಗಳನ್ನೇ ಮಾಡುತ್ತಾ ವ್ಯರ್ಥವಾಗಿ ಕಾಲಹರಣ ಮಾಡುತ್ತಿರುವ ಬಿಜೆಪಿಗರು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.ಮುಖ್ಯಮಂತ್ರಿ ರೇಸ್‌ನಲ್ಲಿ ನಮ್ಮವರು ಯಾರೂ ಇಲ್ಲ: ಸಚಿವ ಚಲುವರಾಯ ಸ್ವಾಮಿ ಸ್ಪಷ್ಟನೆರಾಯಚೂರು:

ಬಿಜೆಪಿಗರು ಸಣ್ಣ ವಿಷಯಗಳನ್ನಿಟ್ಟುಕೊಂಡು ಅಧಿವೇಶನ ಹಾಳು ಮಾಡಬಾರದು ಎಂದು ಕೃಷಿ ಸಚಿವ ಎನ್‌.ಚಲುವರಾಯ ಸ್ವಾಮಿ ತಿಳಿಸಿದರು.ರವಿವಾರ ಮಾತನಾಡಿದ ಅವರು, ತಾವು ಆಡಳಿತ ನಡೆಸಿದ ಐದು ವರ್ಷಗಳ ಕಾಲ ಏನು ಮಾಡಿಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ಸಣ್ಣ ಸಂಗತಿಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಅಧಿವೇಶನವನ್ನು ಹಾಳಮಾಡಬಾರದು, ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಕೇಳಿದರೆ ಅದಕ್ಕೆ ಉತ್ತರ ನೀಡಲಾಗುವುದು ಎಂದರು.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರಿಗೆ ಪುರಸೊತ್ತಿಲ್ಲ, ಒಂದೆಡೆ ಪಕ್ಷದ ವಿರುದ್ಧವೇ ಹೋರಾಟ ನಡೆಸುತ್ತಿರುವ ಅವರು ಮತ್ತೊಂದೆಡೆ ವಕ್ಪ್‌ ವಿರುದ್ಧ ಹೋರಾಟ ಎನ್ನುತ್ತಾರೆ. ಬಿಜೆಪಿ ಸರ್ಕಾರದಲ್ಲಿಯೇ ಅತೀ ಹೆಚ್ಚು 2,500 ವಕ್ಫ್ ಆಸ್ತಿಯ ನೋಟಿಸ್ ನೀಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ನೋಟಿಸ್‌ ಕೊಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.ಮಂಡ್ಯ ನಮ್ಮ ಭದ್ರಕೋಟೆ ಎಂದು ಪರಿಗಣಿಸಿಲ್ಲ ಜನ ಯಾರ ಪರವಾಗಿ ಇರುತ್ತಾರೆಯೋ ಅದು ಅವರ ಭದ್ರಕೋಟೆಯಾಗಿರುತ್ತದೆ. ಜೆಡಿಎಸ್ ಮಂಡ್ಯದಲ್ಲಿ ಸಮಾವೇಶ ನಡೆಸುತ್ತಿದ್ದು, ಇದನ್ನು ಒಬ್ಬರು ಉಪಚುನಾವಣೆ ಸೋಲಿನ ಪರಾಮರ್ಶೆ ಎನ್ನುತ್ತಿದ್ದು, ಮತ್ತೊಬ್ಬರು ನಿಖಿಲ್‌ ಅವರ ಜನ್ಮದಿನವೆಂದು ಹೇಳುತ್ತಿ ದ್ದಾರೆ. ಇನ್ನೊಬ್ಬರು ಕೇಂದ್ರಮಂತ್ರಿಯಾಗಿದ್ದಕ್ಕೆ ಎಚ್‌ಡಿಕೆ ಅವರಿಗೆ ಸನ್ಮಾನ ಎಂದು ಹೇಳುತ್ತಿದ್ದಾರೆ. ಅವರು ಸಮಾವೇಶ ಮಾಡಲಿ ಬಿಡಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಿದ್ದು, ಒಳ್ಳೆ ಇಳುವರಿ ಸಹ ರೈತರ ಕೈ ಸೇರುತ್ತಿದೆ ಹವಾಮಾನ ವೈಪರೀತ್ಯಗಳಿಂದ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಗಳು ಹಾನಿಗೀಡಾಗಿವೆ. ತೊಗರಿ ಜಿಆರ್‌ಜಿ 152 ಬೀಜ ಕಳಪೆಯಾಗಿವೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಪರೀಕ್ಷೆಗೊಳಪಡಿಸಿದ್ದು, ನಾವು ವಿತರಿಸಿದ ಬೀಜಗಳಿಂದ ಯಾವುದೇ ತೊಂದರೆಯಾಗಿಲ್ಲ ಎಂದು ವಿಜ್ಞಾನಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.ಡಾ.ಪರಮೇಶ್ವರ್‌ ಗರಂ?:ಗೃಹ ಸಚಿವ ಪರಮೇಶ್ವರ ಅವರು ಸಿಎಂ, ಡಿಸಿಎಂ ಮೇಲೆ ಗರಂಗೊಂಡಿದ್ದಾರೆ ಎನ್ನುವ ವಿಷಯಕ್ಕೆ ಸ್ಪಂದಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ಹೈಕ ಮಾಂಡ್‌ ಎಲ್ಲ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಮುಖ್ಯಮಂತ್ರಿ ರೇಸ್‌ನಲ್ಲಿ ನಮ್ಮವರು ಯಾರೂ ಇಲ್ಲ, ನಮ್ಮಲ್ಲಿ ಸಿಎಂ ಯಾರಾಗಬೇಕು ಎನ್ನು ವುದನ್ನು ವರಿಷ್ಠರು ತೀರ್ಮಾನಿಸುತ್ತಾಯೇ ಹೊರತು ವಿಜಯೇಂದ್ರ, ಅಶೋಕ್‌ ತೀರ್ಮಾನ ಮಾಡಲ್ಲ. ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆಯಿದೆ, ಯಾರೋ ಮಾತನಾಡಿದ್ದಾರೆ ಎಂದು ಅದಕ್ಕೆ ಉತ್ತರ ಕೊಡಲು ಆಗುವುದಿಲ್ಲ ಎಲ್ಲವನ್ನು ಎಐಸಿಸಿಯೇ ನಿರ್ಧರಿಸುತ್ತದೆ ಎಂದರು.

Share this article