ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೃಷಿಗೆ ಉತ್ತಮ ಕೊಡುಗೆ ನೀಡಿದೆ. 2014 ರಲ್ಲಿ ದೇಶದ ಕೃಷಿ ಬಜೆಟ್ 22 ಸಾವಿರ ಕೋಟಿ ಇತ್ತು. ಈ ಬಾರಿ ಅದು 1.30 ಲಕ್ಷ ಕೋಟಿ ಆಗಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಚನ್ನಪಟ್ಟಣ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೃಷಿಗೆ ಉತ್ತಮ ಕೊಡುಗೆ ನೀಡಿದೆ. 2014 ರಲ್ಲಿ ದೇಶದ ಕೃಷಿ ಬಜೆಟ್ 22 ಸಾವಿರ ಕೋಟಿ ಇತ್ತು. ಈ ಬಾರಿ ಅದು 1.30 ಲಕ್ಷ ಕೋಟಿ ಆಗಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನಿರ್ಮಿಸಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ 7.5 ಕೋಟಿ ರೈತರಿಗೆ ವರ್ಷಕ್ಕೆ 6 ಸಾವಿರ ರು. ನೀಡಲಾಗುತ್ತಿದೆ. ಜಿಲ್ಲೆಯಲ್ಲಿಯೂ ಕಳೆದ 6 ವರ್ಷದಲ್ಲಿ ಸುಮಾರು 1 ಲಕ್ಷ ಕೋಟಿ ಕುಟುಂಬಕ್ಕೆ 356 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಾಲ ನೀಡಲಾಗುತ್ತಿದ್ದು, ಅದರ ಮಿತಿಯನ್ನು ೩ರಿಂದ ೫ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಮೈಕ್ರೋ ಫೈನಾನ್ಸ್ ಹಾವಳಿ ವಿಪರೀತವಾಗಿದ್ದು, ಸಾಕಷ್ಟು ಜನ ಪ್ರಾಣ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದಾರೆ. ಸುಗ್ರೀವಾಜ್ಞೆ ಜಾರಿಗೆ ತಂದರೂ ಇದು ನಿಂತಿಲ್ಲ ಎಂದರು.
ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿ ಇದೆ. ಸಿಲ್ಕ್ ವೇಸ್ಟ್ ವರ್ಷಕ್ಕೆ 6 ಸಾವಿರ ಟನ್ ಉಳಿಯುತ್ತಿದ್ದು, ಇದರಲ್ಲಿ ಶೇ.೯೦ರಷ್ಟು ಭಾಗವನ್ನು ನಾವು ಚೀನಾಗೆ ರಫ್ತು ಮಾಡುತ್ತಿದ್ದೇವೆ. ಅದರಲ್ಲಿ ಅವರು ಬೇರೆ ವಸ್ತುಗಳನ್ನು ತಯಾರಿಸಿ ಹೆಚ್ಚಿನ ಬೆಲೆಗೆ ನಮ್ಮ ದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಅದಕ್ಕೆ ಸಿಲ್ಕ್ ಸ್ಪನ್ ಮಿಲ್ಸ್ ಅನ್ನು ಮೇಲ್ದರ್ಜೇಗೆ ಏರಿಸುವಂತೆ ಕೇಂದ್ರದ ಕೃಷಿ ಸಚಿವರ ಜತೆ ಚರ್ಚಿಸಿದ್ದೇನೆ ಎಂದರು.
ಬೈರಾಪಟ್ಟಣದ ಬಳಿ ಮಾವು ಸಂಸ್ಕರಣಾ ಘಟಕ ಕೆಲವು ತಿಂಗಳಲ್ಲಿ ಆರಂಭಗೊಳ್ಳಲಿದೆ. ಚನ್ನಪಟ್ಟಣದ ರೈಲ್ವೆ ನಿಲ್ದಾಣವನ್ನು ೨೨ ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಏಲೇಕೇರಿ ಮೇಲ್ಸೇತುವೆ ಕಾಮಗಾರಿ ಸಹ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರ ರಾಗಿಗೆ ಬೆಂಬಲ ಬೆಲೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಿದರೆ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದರು.