ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಗ್ರಾಮದ ಖಾಸಗಿ ಸಮುದಾಯ ಭವನದಲ್ಲಿ ಬುಧವಾರ ಕೊಪ್ಪ ಹೋಬಳಿಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಬರೀ ಬೊಗಳೆ ಬಿಟ್ಟುಕೊಂಡು ಜನರನ್ನು ಯಾಮಾರಿಸುತ್ತಿದ್ದಾರೆ. ಅವನಂತೆ ಸುಳ್ಳು ಹೇಳುವವರು ಮತ್ತೋಬ್ಬರಿಲ್ಲ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.
ಶಾಸನಾಗಿದ್ದಾಗ ನನ್ನ ಅವಧಿಯಲ್ಲಿ ತಂದಿರುವ ಅನುದಾನಗಳಿಗೆ ಗುದ್ದಲಿ ಪೂಜೆ ಮಾಡಿಕೊಂಡು ಶನಿವಾರ ಬಂದ್ರೆ ಸಾಕು ನಾಗಮಂಗಲ ಮತ್ತು ಮಂಡ್ಯದಲ್ಲಿರುವ ಕಲೆಕ್ಷನ್ ಪಾಯಿಂಟ್ ಹೋಗಿ ಕಲೆಕ್ಷನ್ ಮಾಡೋದೆ ಸಚಿವ ಚಲುವರಾಯಸ್ವಾಮಿ ಕಾಯಕವಾಗಿದೆ ಎಂದು ಕಿಡಿಕಾರಿದರು.ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ರು ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ನಾನು ಎರಡು ಬಾರಿ ವಿರೋಧ ಪಕ್ಷದ ಶಾಸಕನಾಗಿದ್ದಾಗಲೂ ಸಹ ಕೊಪ್ಪ ಹೋಬಳಿಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಕೆರೆ ಕಟ್ಟೆಗಳ ಅಭಿವೃದ್ಧಿ, ಕುಡಿಯುವ ನೀರು, ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಶಕ್ತಿ ಮೀರಿ ಮಾಡಿದ್ದೇನೆ ಎಂದರು.
ಮಂಡ್ಯದ ವಿ.ಸಿ ಫಾರ್ಮ್ ಅನ್ನು ಕೃಷಿ ವಿವಿ ಮಾಡಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳೋದಲ್ಲ. ಸರ್ಕಾರದಿಂದ 500 ಕೋಟಿ ಅನುದಾನ ಬಿಡುಗಡೆ ಆಗಿದ್ದಿಯಾ ಅಥವಾ ಸಿಬ್ಬಂದಿ ನಿಯೋಜನೆಯಾಗಿಲ್ಲ. ಏನು ಮಾಡದೇ ಘೋಷಣೆ ಮಾಡಲಾಗಿದೆ ಅಷ್ಟೇ. ನಾಗಮಂಗಲ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆನ್ನುವ ಮನಸ್ಸಿದರೆ ತಾಲೂಕಿನಲ್ಲಿ 900 ಎಕರೆ ಜಮೀನಿದೆ ಅಲ್ಲಿಗೆ ತೋಟಗಾರಿಕೆ ವಿಶ್ವವಿದ್ಯಾಲಯ ತರುವಂತೆ ಶಾಸಕ ಸುರೇಶ್ ಗೌಡ ಸವಾಲು ಹಾಕಿದರು.
ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ರೀ ಓಪನ್ ಮಾಡೋಕೆ ಮುಂದಾದರೇ ಗಣಿಗಾರಿಕೆಗೆ ಅನುಮತಿ ನೀಡುತ್ತಿಲ್ಲ. ಆದರೆ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರು ಕುಮಾರಸ್ವಾಮಿ ಮನವೊಲಿಸಿ ವೈಜಾಕ್ ನಲ್ಲಿ ಕಾರ್ಖಾನೆ ಪುನರಾರಂಭ ಮಾಡಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಕುಮಾರಸ್ವಾಮಿ ರಾಜ್ಯದಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ ಎನ್ನುವುದು ಜನರಿಗೆ ಗೊತ್ತಗಲಿ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ಕೊಪ್ಪ ಗ್ರಾಮದಲ್ಲಿ ನಡೆದ 100 ಕೋಟಿ ರು. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿರುವುದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಗುತ್ತಿಗೆದಾರರಿಗೊಸ್ಕರ ಕೆಲಸ ತಂದಿದ್ದಾರೆ. ಅದರಲ್ಲೂ ಸಾಕಷ್ಟು ನ್ಯೂನತೆಗಳಿದ್ದು, ಅದು ಕೂಡ ಸ್ವಲ್ಪ ದಿನದಲ್ಲೇ ಎಲ್ಲಾ ಹಗರಣಗಳು ಹೊರಬರುತ್ತವೆ ಎಂದರು.