ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೀಡಾದ ನಗರದ ಕೆ.ಎಚ್.ಬಿ. ಬಡಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ 20 ವರ್ಷಗಳಿಂದ ಇಲ್ಲಿ ಬದುಕು ನಡೆಸುತ್ತಿರುವ ಸಾರ್ವಜನಿಕರೇ ಹೇಳುವಂತೆ ಮೊದಲು ಇಲ್ಲಿ ಮಳೆ ಬಂದರೆ ಸ್ಥಳೀಯರೆಲ್ಲ ಒಂದು ವಾರ ಕಾಲೋನಿ ಬಿಡುವ ಸಂದರ್ಭ ಎದುರಾಗುತ್ತಿತ್ತು. ರವಿಕುಮಾರ್ ಶಾಸಕರಾದ ನಂತರ 15 ರಿಂದ 20 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ದೊಡ್ಡ ಸಮಸ್ಯೆ ಇಲ್ಲದಂತಾಗಿದೆ ಎಂದರು.
ಪ್ರಸ್ತುತ ಹರಿದು ಬರುತ್ತಿರುವ ಹೆಚ್ಚುವರಿ ನೀರನ್ನು ತಡೆಗಟ್ಟಲು ಸುಮಾರು ಎರಡುವರೆ ಕಿಮೀ ಸೇತುವೆ ನಿರ್ಮಾಣ ಮಾಡಲು ಈಗಾಗಲೇ 15 ಕೋಟಿ ಟೆಂಡರ್ ನೀಡಲಾಗಿದೆ. ಒಟ್ಟು 41 ಕೋಟಿಯನ್ನು ಕೆ.ಎಚ್.ಬಿ ಕಾಲೋನಿಯ 3ನೇ ವಾರ್ಡ್ ಅಭಿವೃದ್ಧಿಗೆ ನೀಡಲಾಗಿದೆ. ಅದರಲ್ಲಿ ಕೆಲವು ಭಾಗದ ಪ್ರಕರಣ ಸಿಬಿಐನಲ್ಲಿ ಇರುವುದರಿಂದ ಆ ಭಾಗಗಳಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಎಂದರು.ರವಿಕುಮಾರ್ ಶಾಸಕರಾಗಿ ಮಂಡ್ಯ ಅಭಿವೃದ್ಧಿ ಹಾಗೂ ಜನರ ಸಂಕಷ್ಟವನ್ನು ಪರಿಹರಿಸಲು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಮಳೆಯನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಇಂದಿನ ಕೆ.ಎಚ್.ಬಿ ಕಾಲೋನಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
41 ಕೋಟಿ ಅಲ್ಲದೇ ಈಗ ಉಂಟಾಗಿರುವ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ಇಲಾಖೆ ನಗರಸಭೆಯಿಂದ ಬರುವ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು, ಮಳೆಯಿಂದಾಗಿ ರಾಜ್ಯದಲ್ಲಿ 13 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಸುಮಾರು 80 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಳೆ ನಿಂತ ನಂತರ ಸರ್ವೇ ನಡೆಸಿ ನಿಖರವಾದ ಬೆಳೆ ಹಾನಿ ಕುರಿತಾಗಿ ಮಾಹಿತಿ ನೀಡಲಾಗುವುದು ಎಂದರು.
ಈ ವೇಳೆ ಶಾಸಕ ಪಿ.ರವಿಕುಮಾರ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇತರರು ಇದ್ದರು.