ಡೀಲ್ ಮಾಡಿಕೊಂಡೇ ಬೆಳೆ ವಿಮೆ ಪಾವತಿಸುವ ಖದೀಮರು

KannadaprabhaNewsNetwork | Published : Apr 11, 2025 12:33 AM

ಸಾರಾಂಶ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಲೂಟಿ ಮಾಡುವ ದೊಡ್ಡ ದಂಧೆಯೇ ರಾಜ್ಯಾದ್ಯಂತ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಹನುಮನಾಳ ಹೋಬಳಿಯಲ್ಲಿ ಬೆಳಕಿಗೆ ಬಂದಿರುವ ಅಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಳವಂಡಿ ಹೋಬಳಿಯಲ್ಲಿಯೂ ಅಕ್ರಮ ನಡೆದಿದೆ ಎನ್ನುವುದು ತಡವಾಗಿ ಬೆಳಕಿಗೆ ಬರುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಬೆಳೆ ವಿಮೆ ಗೋಲ್‌ಮಾಲ್‌ ಮಾಡುವವರು ಮೊದಲೇ ಅಕ್ರಮ ಕೂಟ ಕಟ್ಟಿಕೊಂಡು, ಡೀಲ್ ಮಾಡಿಕೊಂಡ ನಂತರವೇ ಬೆಳೆ ವಿಮೆ ಪಾವತಿ ಮಾಡುತ್ತಾರೆ. ಜತೆಗೆ ವಿಮೆ ಪಾವತಿಸಿದ ಬೆಳೆಯೇ ಅಧಿಕ ನಷ್ಟವಾಗಿದೆ ಎನ್ನುವ ವರದಿ ನೀಡುವ ಒಪ್ಪಂದ ಮಾಡಿಕೊಂಡೇ ವಿಮೆ ಪಾವತಿಸುತ್ತಾರೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಲೂಟಿ ಮಾಡುವ ದೊಡ್ಡ ದಂಧೆಯೇ ರಾಜ್ಯಾದ್ಯಂತ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಹನುಮನಾಳ ಹೋಬಳಿಯಲ್ಲಿ ಬೆಳಕಿಗೆ ಬಂದಿರುವ ಅಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಳವಂಡಿ ಹೋಬಳಿಯಲ್ಲಿಯೂ ಅಕ್ರಮ ನಡೆದಿದೆ ಎನ್ನುವುದು ತಡವಾಗಿ ಬೆಳಕಿಗೆ ಬರುತ್ತಿದೆ. ಈ ಹಿಂದೆ ಗದಗ ಜಿಲ್ಲೆಯಲ್ಲಿ ಇಂಥದ್ದೆ ಅಕ್ರಮ ನಡೆಸಿದ ತಂಡವೇ ಈಗ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾದ್ಯಂತ ಕೋಟ್ಯಂತರ ರುಪಾಯಿ ಬೆಳೆ ವಿಮೆ ಪರಿಹಾರ ಬಾಚಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ಇರುವುದೇ ಅಪರೂಪ. ಆದರೂ ಸಹ ಇಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾಕದೆಯೇ ನಕಲಿ ದಾಖಲೆ ಸೃಷ್ಟಿಸಿ ಶೇ. 44ರಷ್ಟು ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ, ಕೃಷಿ ಇಲಾಖೆ, ಅಂಕಿ-ಸಂಖ್ಯೆ ಇಲಾಖೆ ಮತ್ತು ವಿಮಾ ಕಂಪನಿ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರೊಬ್ಬರ ಸಹಯೋಗದಲ್ಲಿ ಬೆಳೆ ಕಟಾವು ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗಿದೆ. ಈರುಳ್ಳಿ ಬೆಳೆಯದೇ ಇರುವ ಭೂಮಿಯಲ್ಲಿಯೇ ಈರುಳ್ಳಿ ಬೆಳೆ ಕಟಾವು ಮಾಡಲಾಗಿದೆ.

ಕಿಂಗ್ ಪಿನ್:

ಪ್ರಾಥಮಿಕ ಮಾಹಿತಿಯ ಪ್ರಕಾರ ಮತ್ತು ಬೆಳೆ ಕಟಾವು ಮಾಡಿರುವ ಅಕ್ರಮದಿಂದ ಕೃಷಿ ಇಲಾಖೆ, ಕಂದಾಯ ಇಲಾಖೆಯಲ್ಲಿಯೇ ಅಕ್ರಮ ಕೂಟದ ಕಿಂಗ್‌ಪಿನ್ ಇರುವುದು ತಿಳಿದುಬಂದಿದೆ. ಇವರು ಸೇರಿಕೊಂಡೇ ಅಕ್ರಮ ನಡೆಸುತ್ತಿದ್ದಾರೆ. ಮೆಕ್ಕೆಜೋಳ ಬೆಳೆ ಬೆಳೆದಿದ್ದ ಹೊಲದಲ್ಲಿ ರೈತರಿಗೆ ತಿಳಿಯದಂತೆ ಈರುಳ್ಳಿ ಬೆಳೆಗೆ ಬೇರೊಬ್ಬರು ವಿಮಾ ಕಂತು ಪಾವತಿ ಮಾಡಿದ್ದಾರೆ. ನಂತರ ಬಂದ ಪರಿಹಾರವನ್ನು ಬೇರೊಬ್ಬರ ಖಾತೆಗೆ ಜಮೆ ಮಾಡಿರುವ ದಾಖಲೆಗಳಿದ್ದು ಇದು ಕೃಷಿ ಇಲಾಖೆ, ಕಂದಾಯ ಇಲಾಖೆಯಲ್ಲಿರುವ ಕಿಂಗ್‌ಪಿನ್‌ಗಳದ್ದೆ ಕರಾಮತ್ತು ಎಂಬುದು ತಿಳಿಯುತ್ತದೆ.

ತನಿಖೆ ಸುಲಭ:

ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಆಗಿರುವ ಅಕ್ರಮ ಬೆನ್ನು ಹತ್ತಿ, ಬೆಳೆಯೇ ಬೆಳೆಯದೇ ಇರುವ ಭೂಮಿಯಲ್ಲಿ ವಿಮಾ ಪರಿಹಾರಕ್ಕಾಗಿ ಬೆಳೆ ಕಟಾವು ಮಾಡಿದವರನ್ನು ಪತ್ತೆ ಮಾಡಿದರೆ ಅಕ್ರಮ ಬಯಲಿಗೆ ಬರಲಿದೆ ಎನ್ನುತ್ತಾರೆ ಹಿರಿಯ ವಕೀಲರೊಬ್ಬರು.

ನಮ್ಮ ಹೊಲದ ಪಕ್ಕದಲ್ಲಿಯೇ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೂ ಅವರಿಗೆ ಗೊತ್ತಿಲ್ಲದಂತೆ ಅವರ ಹೊಲದಲ್ಲಿ ಈರುಳ್ಳಿ ಬೆಳೆಯ ವಿಮಾ ಪರಿಹಾರ ಪಡೆದಿರುವ ದಾಖಲೆ ನಮ್ಮ ಬಳಿ ಇವೆ ಎನ್ನುತ್ತಾರೆ ವಕೀಲ ರವಿರಾಜ್ ಕುಲಕರ್ಣಿ.

ಹೀಗೆ, ಅಕ್ರಮದ ಇಂಚಿಂಚು ಮಾಹಿತಿ ಕನ್ನಡಪ್ರಭ ಬಳಿಯೂ ಇದ್ದು, ಅರೋಪಿಗಳನ್ನು ಪತ್ತೆ ಮಾಡುವ ಕಾರ್ಯ ಆಗಬೇಕಾಗಿದೆ.ವರದಿ ಕೇಳಿದ ಡಿಸಿ

ಕನ್ನಡಪ್ರಭದಲ್ಲಿ ಬೆಳೆ ವಿಮಾ ಪರಿಹಾರದ ವಂಚನೆಯ ಪ್ರಕರಣದ ವಿಶೇಷ ವರದಿ ಪ್ರಕಟವಾಗಿರುವ ಕುರಿತು ಕೃಷಿ ಇಲಾಖೆಯ ಜೆಡಿ ಅವರಿಂದ ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆ. ಕೂಡಲೇ ಈ ಕುರಿತು ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚಿಸಿದ್ದಾರೆ.ಅಕ್ರಮದ ಕುರಿತು ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಬ್ಯಾಂಕ್ ಖಾತೆಗೆ ಜಮೆಯಾಗಿರುವ ವಿಮಾ ಪರಿಹಾರ ಮಾಹಿತಿಯ ಜಾಡು ಹಿಡಿದರೆ ಆರೋಪಿಗಳು ಸಿಕ್ಕಿಬೀಳುತ್ತಾರೆ.

ರವಿರಾಜ್‌ ಕುಲಕರ್ಣಿ, ವಕೀಲ

Share this article