ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಮೊದಲಿನಿಂದಲೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಪಕ್ಷದ ಅಭ್ಯರ್ಥಿ, ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಇದ್ದೇ ಇತ್ತು. ಅದರಂತೆ ತಕ್ಕಮಟ್ಟಿಗೆ ಕೆಲಸವನ್ನೂ ಬಿಜೆಪಿ ಮಾಡಿತ್ತು. ಆದರೆ ಸತತ ಮೂರು ಬಾರಿ ಗೆದ್ದಿರುವ ಜಿಗಜಿಣಗಿ ವಿರುದ್ಧದ ಅಲೆ ಎಬ್ಬಿಸುವುದರಲ್ಲಿ ಕಾಂಗ್ರೆಸ್ ಸಫಲವಾಗಿದ್ದರೂ ಅದ್ಯಾಕೋ ಜಯ ಮಾತ್ರ ಒಲಿದು ಬರಲಿಲ್ಲ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಅವರು ಕ್ಷೇತ್ರದಲ್ಲೇ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದು ಆಶ್ಚರ್ಯವಾಗಿದೆ.
ಬಿಜೆಪಿ ಗೆಲುವಿಗೆ ಕಾರಣಗಳು:ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ ಸುರಕ್ಷಿತವಾಗಿರುತ್ತದೆ, ಆಡಳಿತ ಸುಲಲಿತವಾಗುತ್ತದೆ ಎಂಬ ಭಾವನೆ ಜನರಲ್ಲಿ ಇರುವುದು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ನೆರೆಯ ಬಾಗಲಕೋಟೆಗೆ ಬಂದು ಭರ್ಜರಿ ಪ್ರಚಾರ ನಡೆಸಿದ್ದರು. ಈ ಮೂಲಕ ವಿಜಯಪುರ-ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರು, ನಾಯಕರನ್ನು ಹುರುದುಂಬಿಸುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆದಿದ್ದರು. ಸತತ ಮೂರುಬಾರಿ ಗೆದ್ದು ಬೀಗಿದ್ದ ರಮೇಶ ಜಿಗಜಿಣಗಿ ಕಳೆದ ಬಾರಿ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದು, ರೈಲ್ವೆ ಓವರ್ ಬ್ರಿಡ್ಜ್‌ಗಳನ್ನು ಮಾಡಿಸಿದ್ದು ಸಾಧನೆಗೆ ಬೆಂಬಲವಾಗಿದ್ದವು. ಇನ್ನು ಪಕ್ಷದಲ್ಲಿ ಸಾಕಷ್ಟು ಒಡಕಿದ್ದರೂ ಕೊನೆಯ ಹಂತದಲ್ಲಿ ಬಿಜೆಪಿ ಜಿಲ್ಲಾ ನಾಯಕರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರು. ಈ ಬಾರಿ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದರಿಂದ ಅದರ ಬೆಂಬಲವೂ ಸಿಕ್ಕಿತ್ತು. ಹಿರಿಯ ನಾಯಕನ ಕೊನೆಯ ಚುನಾವಣೆ ಎಂದು ಮತದಾರರು ಸಾಥ್ ನೀಡಿದ್ದು ಗೆಲುವಿಗೆ ಕಾರಣವಾಗಿದೆ.
ಕಾಂಗ್ರೆಸ್ ಸೋಲಿಗೆ ಕಾರಣಗಳೇನು?:ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ, ದೇಶದ ವಿಚಾರ ಬಂದಾಗ ಗ್ಯಾರಂಟಿಗಳನ್ನು ಮತದಾರರು ತಿರಸ್ಕರಿಸಿದ್ದಾರೆ. ವಿಧಾನಸಭೆಯಲ್ಲಿ ನಡೆದ ಗ್ಯಾರಂಟಿ ಮ್ಯಾಜಿಕ್ ಲೋಕಸಭೆ ಚುನಾವಣೆಯಲ್ಲಿ ನಡೆಯಲಿಲ್ಲ. ಎಂ.ಬಿ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಸೇರಿ ಜಿಲ್ಲೆಯಲ್ಲಿ ಇಬ್ಬರು ಸಚಿವರು, ನಾಲ್ವರು ಶಾಸಕರು ಇದ್ದರೂ ಮತದಾರರ ಮೇಲೆ ಪ್ರಭಾವ ಆಗಲಿಲ್ಲ. ಸಚಿವ ಶಿವಾನಂದ ಪಾಟೀಲ್ ತಮ್ಮ ಪುತ್ರಿಯ ಪ್ರಚಾರದಲ್ಲಿ ಹೆಚ್ಚಿನ ಸಮಯ ಕಳೆದರು. ಸಚಿವ ಎಂ.ಬಿ.ಪಾಟೀಲ್ ಸಹ ಇತರೆ ಜಿಲ್ಲೆಗಳಿಗೆ ಪ್ರಚಾರಕ್ಕೆ ಹೆಚ್ಚು ಸಮಯ ಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಪ್ರಭಾವ ಬೀರಲಿಲ್ಲ. ವಿಜಯಪುರಕ್ಕೆ ರಾಹುಲಗಾಂಧಿ ಅವರೇ ಬಂದು ಪ್ರಚಾರ ಮಾಡಿದರೂ ಅದರ ಪ್ರಭಾವ ಮತದಾರರ ಮೇಲೆ ಆಗಲಿಲ್ಲ. ಕಾಂಗ್ರೆಸ್‌ನಲ್ಲೂ ಒಳ ಹೊಡೆತಗಳು ಇದ್ದು, ಇದರಿಂದಲೇ ಸೋಲಾಗಿದೆ.
ಅಭ್ಯರ್ಥಿಗಳು ಪಡೆದ ಮತಗಳು:ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ 5,95,552 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 6,72,781 ಮತಗಳನ್ನು ಪಡೆಯುವ ಮೂಲಕ 77,229 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.