ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿ ರಾಜ್ಯ ಸರ್ಕಾರ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.ಇದೇ ವರ್ಷದ ಜೂನ್ ತಿಂಗಳಿಗೆ ಸಲೀಂ ಅವರು ನಿವೃತ್ತರಾಗಲಿದ್ದರು

 ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿ ರಾಜ್ಯ ಸರ್ಕಾರ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.

ಇದೇ ವರ್ಷದ ಜೂನ್ ತಿಂಗಳಿಗೆ ಸಲೀಂ ಅವರು ನಿವೃತ್ತರಾಗಲಿದ್ದರು. ಆದರೆ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ 2027ರ ಆಗಸ್ಟ್‌ನಲ್ಲಿ ರಾಜ್ಯ ಪೊಲೀಸ್ ಮಹಾದಂಡನಾಯಕ ಹುದ್ದೆಯಿಂದ ಅವರು ಬಿಡುಗಡೆ ಆಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದನ್ವಯ ಡಿಜಿ-ಐಜಿಪಿ ಸಲೀಂ ಅವರಿಗೆ ಅಧಿಕಾರಾವಧಿ ವಿಸ್ತರಣೆ ಮಾಡಲಾಗಿದೆ ಎಂದು ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸೇವಾ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್‌.ಸಂಜಯ್ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

2006ರಲ್ಲಿ ಪಂಜಾಬ್‌ ರಾಜ್ಯದ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಅಧಿಕಾರಾವಧಿ ಕನಿಷ್ಠ 2 ವರ್ಷಗಳಿರಬೇಕು ಎಂದು ಆದೇಶಿಸಿತ್ತು. ಆದರೆ ಡಿಜಿ-ಐಜಿ ಹುದ್ದೆಗೆ ನೇಮಕಗೊಳ್ಳುವ ಐಪಿಎಸ್‌ ಅಧಿಕಾರಿ ನಿವೃತ್ತಿಗೆ ಕನಿಷ್ಠ 6 ತಿಂಗಳಿಗಿಂತ ಹೆಚ್ಚಿನ ಸೇವಾವಧಿ ಇದ್ದರೆ ಪರಿಗಣಿಸಬಹುದು ಎಂಬ ನಿಯಮ ರೂಪಿಸಿತ್ತು. ಈ ನ್ಯಾಯಾಲಯದ ಆದೇಶದನ್ವಯ ಸಲೀಂ ಅವರಿಗೆ ಅಧಿಕಾರಾವಧಿ ವಿಸ್ತರಣೆಯಾಗಿದೆ.

ನಾಲ್ಕು ತಿಂಗಳಿಗಿಂತ ಮುನ್ನ:

ಇದೇ ವರ್ಷದ ಜೂನ್‌ ತಿಂಗಳಿಗೆ ಸಲೀಂ ಅವರು ಸೇವಾ ನಿವೃತ್ತಿ ಆಗಲಿದ್ದರು. ಅಲ್ಲದೆ 2024ರ ಮೇ 22ರಂದು ಅವರು ಡಿಜಿ-ಐಜಿಪಿ ಹುದ್ದೆ ನೇಮಕಗೊಂಡಿದ್ದರು. ಹೀಗಾಗಿ ಜೂನ್‌ ಅಥವಾ ಆಗಸ್ಟ್‌ನಲ್ಲಿ ಅಧಿಕಾರ ವಿಸ್ತರಣೆ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸಲೀಂ ಅವರ ಅಧಿಕಾರ ವಿಸ್ತರಣೆ ಆದೇಶ ಹೊರಬಿದ್ದಿರುವುದು ಇಲಾಖೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಡಿಜಿಪಿ ಹುದ್ದೆಗೆ ಅಧಿಕಾರ

ಮೊದಲು ಪ್ರಭಾರಿಯಾಗಿ ಡಿಜಿಪಿ ಹುದ್ದೆಗೆ ಅಧಿಕಾರ ವಹಿಸಿಕೊಂಡ ಅವರು ನಾಲ್ಕು ತಿಂಗಳ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಅನುಮೋದನೆ ಮೇರೆಗೆ ಕಾಯಂ ಆಗಿದ್ದರು. ಇನ್ನು ಈ ಹಿಂದೆ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರಿಗೆ ಪ್ರಭಾರ ಆಡಳಿತಾವಧಿಯನ್ನು ಸರ್ಕಾರ ಪರಿಗಣಿಸಿತ್ತು. ಆದರೆ ಸಲೀಂ ಅವರ ವಿಚಾರದಲ್ಲಿ ಉಸ್ತುವಾರಿ ಅವಧಿಯನ್ನು ಪರಿಗಣಿಸದೆ ಹುದ್ದೆ ಕಾಯಂಗೊಂಡ ದಿನದಿಂದ ಲೆಕ್ಕ ಹಾಕಿ ಅಧಿಕಾರಾವಧಿಯನ್ನು ಸರ್ಕಾರ ವಿಸ್ತರಿಸಿದೆ.