ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು. ಈ ಸಂದರ್ಭ ನಿವೃತ್ತ ಮಹಿಳಾ ಪೊಲೀಸ್ ನಿರೀಕ್ಷಕಿ ಸುಜಾತ ವಿ. ಸಾಲಿಯಾನ್ ಅವರು ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಧ್ವಜ ದಿನಾಚರಣೆಯು ಪೊಲೀಸ್ ಇಲಾಖೆಯ ಮಹತ್ವದ ದಿನವಾಗಿದೆ. ಕರ್ನಾಟಕ ಪೊಲೀಸ್ ಪಡೆ ಅಧಿಕೃತವಾಗಿ ರಚನೆಯಾದ ನೆನಪಿಗಾಗಿ ಈ ದಿನವನ್ನು ರಾಜ್ಯದ ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಹಾಗೂ ರಕ್ಷಣೆ ಸಂಕೇತವಾಗಿದೆ ಎಂದರು. ಅಲ್ಲದೆ ಪ್ರತಿ ವರ್ಷ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮೆ ಮಾಡುವುದರೊಂದಿಗೆ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಉತ್ತಮವಾಗಿ
ಕರ್ತವ್ಯ ನಿರ್ವಹಿಸಿರುವ ಹೆಸರು ಕರ್ನಾಟಕ ಪೊಲೀಸರಿಗೆ ಇದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲೂ ಉಡುಪಿ ಜಿಲ್ಲೆಯ ಪೊಲೀಸರು ಮೊದಲನೇ ಸ್ಥಾನದಲ್ಲಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು. ಪೊಲೀಸ್ ಇಲಾಖೆ ಸಿಬ್ಬಂದಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ವೈದ್ಯಕೀಯ ಧನ ಸಹಾಯ ವಿತರಿಸಲಾಯಿತು. ಎಎಸ್‌ಪಿ ಸುಧಾಕರ್ ನಾಯಕ್ ವಂದಿಸಿದರು. ನಿವೃತ್ತರಿಗೆ ಆರೋಗ್ಯ. ರಕ್ಷಣೆ ಯೋಜನೆ: ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆ ಯೋಜನೆ ಪ್ರಾರಂಭಿಸಿದ್ದು, ಇದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ / ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ 1.5 ಲಕ್ಷ ರು. ಮತ್ತು ತುರ್ತು ಸಂದರ್ಭದಲ್ಲಿ 3 ಲಕ್ಷ ರು. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿವೃತ್ತ ಕಲ್ಯಾಣ ಖಾತೆಯಿಂದ ಸುಮಾರು 13,08,050 ರು. ವೈದ್ಯಕೀಯ ಧನ ಸಹಾಯ ನೀಡಲಾಗಿದೆ. ಇನ್ನೂ ಹೆಚ್ಚಿನ ಸಿಬ್ಬಂದಿಗಳಿಗೆ ಧನ ಸಹಾಯ ಮಾಡುವುದಕ್ಕಾಗಿ, ಪ್ರಧಾನ ಕಚೇರಿಗೆ 15 ಲಕ್ಷ ರು. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದರು.ಪೊಲೀಸ್ ಧ್ವಜ ಶಿಸ್ತು, ನಿಷ್ಠೆ, ರಕ್ಷಣೆಯ ಸಂಕೇತ: ಸುಜಾತ ಸಾಲ್ಯಾನ್
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.