ಕನ್ನಡಪ್ರಭ ವಾರ್ತೆ ಬೆಂಗಳೂರು

ಪೊಲೀಸ್ ಇಲಾಖೆಗೆ ಸೇರಿರುವ ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಕೃಷ್ಣಮೂರ್ತಿ, ಶ್ರೀನಾಥ್‌ ನರಗದ್ದೆ ಮತ್ತು ಕಿಶನ್‌ ಬಂಧಿತರು.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಲ್ಲೇಶ್ವರದ ಪೊಲೀಸ್‌ ವಸತಿ ಗೃಹದ ಜಾಗವನ್ನು ಆರೋಪಿಗಳು ಕಬಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಎಂ.ಕುಮಾರ್‌ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:


ಪೊಲೀಸ್ ಇಲಾಖೆಗೆ ಸೇರಿದ್ದ ಈ ಜಾಗವನ್ನು 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು ಪೊಲೀಸ್ ವಸತಿಗೃಹ ಎಂದು ಗುರುತಿಸಲಾಗಿದೆ. ಸುಮಾರು 80 ಕೋಟಿ ರು. ಮೌಲ್ಯದ ಆಸ್ತಿ ಇದಾಗಿದ್ದು, ಪ್ರಸ್ತುತ ಇಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬ ಹಾಗೂ ಸಿಬ್ಬಂದಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಇನ್‌ಸ್ಪೆಕ್ಟರ್‌ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್ಲಿನಲ್ಲಿ ಮಹಾಲಕ್ಷ್ಮೀ ಎಂಬ ಖಾಸಗಿ ವ್ಯಕ್ತಿಯ ಹೆಸರು ನಮೂದಾಗಿತ್ತು.

ಈ ಬಗ್ಗೆ ಅನುಮಾನಗೊಂಡ ಇನ್‌ಸ್ಪೆಕ್ಟರ್‌ ಕುಮಾರ್, ಮೊದಲು ಬೆಸ್ಕಾಂ ನಂತರ ಜಿಬಿಎ ಮತ್ತು ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಿಸಿದಾಗ, ಅಕ್ರಮವಾಗಿ ಆಸ್ತಿ ದಾಖಲೆಗಳನ್ನು ಸೃಷ್ಟಿಸಿ ಮಹಾಲಕ್ಷ್ಮೀ ಹೆಸರಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿತ್ತು. ಇಷ್ಟೇ ಅಲ್ಲದೇ ಜಿಬಿಎ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಮಾರಾಟ ಮಾಡಲು ಒಪ್ಪಂದ ಪತ್ರ (ಅಗ್ರಿಮೆಂಟ್ ಆಫ್ ಸೇಲ್) ಕೂಡ ಮಾಡಿರುವುದು ಪತ್ತೆಯಾಗಿತ್ತು.

ಜಿಬಿಎ, ಬೆಸ್ಕಾಂ ಅಧಿಕಾರಿಗಳಿಗೆ ನೋಟಿಸ್‌:

ತನಿಖೆಯ ವೇಳೆ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಮಹಾಲಕ್ಷ್ಮಿ ಎಂಬುವರ ಹೆಸರಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಆದರೆ ಮಹಾಲಕ್ಷ್ಮಿ ಅವರು ವಯೋ ವೃದ್ಧರಾಗಿದ್ದು, ಅವರಿಗೆ ಈ ಆಸ್ತಿ ಕಬಳಿಕೆಯ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಆದರೆ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೆ ಕೇವಲ ನಕಲಿ ದಾಖಲೆಗಳನ್ನು ನೋಡಿ ಇ-ಖಾತ ಮಾಡಿಕೊಟ್ಟಿರುವ ಹಾಗೂ ಮಹಾಲಕ್ಷ್ಮಿ ಎಂಬುವರ ಹೆಸರಿಗೆ ವಿದ್ಯುತ್‌ ಬಿಲ್‌ ವರ್ಗಾವಣೆ ಮಾಡಿಕೊಟ್ಟಿರುವ ಜಿಬಿಎ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ನೋಟಿಸ್‌ ನೀಡಿ ವಿಚಾರಣೆಗೆ ಬರಲು ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಅವರ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ಯಾಂಗ್‌ ಹಿಂದೆ ದೊಡ್ಡ ಜಾಲ:

ಈ ಗ್ಯಾಂಗ್‌ನ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆಯಿದೆ. ನಕಲಿ ದಾಖಲೆ ಸೃಷ್ಟಿಸಲು ಇವರಿಗೆ ಇಲಾಖೆಯ ಒಳಗಿನ ವ್ಯಕ್ತಿಗಳು ಸಹಾಯ ಮಾಡಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದೆ. ಆರೋಪಿಗಳು ನಗರದ ಬೇರೆ ಎಲ್ಲೆಲ್ಲಿ ಭೂ ಕಬಳಿಕೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.