ಹುಬ್ಬಳ್ಳಿ:
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಸಾಮೂಹಿಕವಾಗಿ ಮಾಲಾರ್ಪಣೆ ಮಾಡುವ ಮೂಲಕ ಜಾಥಾಗೆ ಚಾಲನೆ ನೀಡಿದರು.
ಬಿಜೆಪಿ ನಾಯಕರು ಮುಡಾ ಹಾಗೂ ವಾಲ್ಮೀಕಿ ಹಗರಣಗಳಲ್ಲಿ ಸಿದ್ದರಾಮಯ್ಯನವರನ್ನು ತಳುಕು ಹಾಕುವ ಮೂಲಕ ಬಲಿಪಶು ಮಾಡುವ ದುರುದ್ದೇಶ ಹೊಂದಿದ್ದಾರೆ. ಅನೇಕ ವರ್ಷದ ಹಿಂದೆಯೇ ಮುಡಾ ನಿವೇಶನಗಳು ನಿಯಮಾವಳಿಯಂತೆ ಮುಖ್ಯಮಂತ್ರಿ ಪತ್ನಿಯ ಹೆಸರಿಗೆ ಹಂಚಿಕೆಯಾಗಿವೆ. ಇದರಲ್ಲಿ ಅವರು ಯಾವುದೇ ಅವ್ಯವಹಾರ, ಭ್ರಷ್ಟಾಚಾರ ಹಾಗೂ ಪ್ರಭಾವ ಬೀರುವ ಕೆಲಸ ನಡೆಸಿಲ್ಲ. ಅಹಿಂದ ನಾಯಕರಾದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಸಿದ್ದರಾಮಯ್ಯನವರು ಭ್ರಷ್ಟಾಚಾರ ಹಾಗೂ ಕಳಂಕ ರಹಿತ ಆಡಳಿತ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅಂತಹ ಮಾದರಿ ನಾಯಕನ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಮುಡಾ ಹಗರಣ ತನಿಖೆ ಎದುರಿಸಲು ಸಿಎಂ ಸಿದ್ಧರಿದ್ದು, ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಎಲ್ಲ ಸಚಿವರು, ಶಾಸಕರು ಹಾಗೂ ಅಹಿಂದ ಮುಖಂಡರು ಮುಖ್ಯಮಂತ್ರಿಗಳ ಪರವಾಗಿದ್ದಾರೆ ಎಂದರು.
ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಕಾರ್ಯಕರ್ತರು ಹಾಗೂ ಅಹಿಂದ ಮುಖಂಡರು ಬೆಂಗಳೂರು ವಿಧಾನಸೌಧಕ್ಕೆ ತೆರಳುತ್ತಿದ್ದೇವೆ. ಇದೊಂದು ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗಲಿದೆ ಎಂದರು.ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಜಾಥಾ ಚೆನ್ನಮ್ಮ ವೃತ್ತದ ಮೂಲಕ ಗಬ್ಬೂರು ಬೈಪಾಸ್ ಆಗಮಿಸಿ, ಅಲ್ಲಿಂದ ಕುಂದಗೋಳ, ಹಾವೇರಿ, ರಾಣಿಬೆನ್ನೂರು ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಅ.4ರಂದು ಬೆಂಗಳೂರ ಮುಟ್ಟಲಿದ್ದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡಲಿದ್ದಾರೆ.
ಈ ವೇಳೆ ಅಹಿಂದ ಮುಖಂಡರಾದ ಅನ್ವರ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಜಯಶ್ರೀ ಸೂರ್ಯವಂಶಿ, ಯುಸೂಫ್ ಬಳ್ಳಾರಿ, ವೀರನಗೌಡ ಪಾಟೀಲ, ಶಿವಾನಂದ ಮುತ್ತಣ್ಣವರ, ಹುಸೇನ್ ಬಾಪುನವರ, ಶ್ರೀಧರ ದೊಡ್ಡಮನಿ, ಸಂಗೀತಾ ಚಾವರೆ ಸೇರಿದಂತೆ ಹಲವರಿದ್ದರು.