ಅನ್ಯಾಯದ ವಿರುದ್ಧ ಮೌನವಾಗಿರುವುದು ಪ್ರಗತಿಯ ಸಂಕೇತವಲ್ಲ

KannadaprabhaNewsNetwork | Published : Jul 27, 2024 12:58 AM

ಸಾರಾಂಶ

ಯುವಜನರ ಮೌನವೂ ಆರೋಗ್ಯಕರ ಸಮಾಜದ ಲಕ್ಷಣವಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸದೇ ಮೌನವಾಗಿರುವುದು ಪ್ರಗತಿಯ ಸಂಕೇತವಲ್ಲ ಎಂದು ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ತಿಳಿಸಿದರು. ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟವು ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್‌ ಜಯಂತಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ವಿರೋಧಿ, ಕಾರ್ಮಿಕ ವಿರೋಧಿ, ವಿದ್ಯಾರ್ಥಿ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರೂ ಮೌನವಾಗಿದ್ದಾರೆ. ಯುವಜನರ ಮೌನವೂ ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಹೇಳಿದರು.

ಶತಮಾನೋತ್ಸವ ಪೂರೈಸಿರುವ ಮೈಸೂರು ವಿವಿ ಸ್ವಾತಂತ್ರ್ಯ ಪೂರ್ವದಿಂದಲೂ ರೈತ ಪರ ಪ್ರಗತಿಪರ ಚಿಂತನೆಗಳ ಹೋರಾಟಕ್ಕೆ ಪ್ರೇರಣೆಯಾಗಿದೆ. ಅನ್ಯಾಯದ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಇಲ್ಲದೇ ಚಳವಳಿ ನಿಂತಿರುವುದು ಬೇಸರದ ಸಂಗತಿ ಎಂದರು.

ವಿದ್ಯಾರ್ಥಿಗಳು ಸೂಕ್ಷ್ಮ ಸಂವೇದನೆ ಮತ್ತು ಕ್ರಿಯಾಶೀಲರಾಗಬೇಕು. ವಿದ್ಯಾರ್ಥಿದೆಸೆಯಲ್ಲಿ ಸಂಘಟಿತರಾಗಿ ಅನ್ಯಾಯವನ್ನು ಪ್ರಶ್ನಿಸಬೇಕು. ಶೋಷಿತರು, ಅವಕಾಶ ವಂಚಿತ ಜನರ ಪರವಾಗಿ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಕರೆ ನೀಡಿದರು.

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಭೂ ವಿಜ್ಞಾನ ವಿಭಾಗದ ಪ್ರೊ.ಡಿ. ನಾಗರಾಜು, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಎಸ್.ಎನ್. ಸುಷ್ಮಾ, ವಕೀಲ ಎಸ್. ಉಮೇಶ್, ಪತ್ರಕರ್ತ ರಾ. ಚಿಂತನ್, ರಾಜ್ಯ ಮುಕ್ತ ವಿವಿ ಆಡಳಿತ ಮಂಡಲಿ ಸದಸ್ಯ ಮಹೇಶ್ ಸೋಸಲೆ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜು ಶಿವಣ್ಣ, ಮಹಾರಾಜ ವಿದ್ಯಾರ್ಥಿ ನಿಲಯದ ಪ್ರಥಮ ದರ್ಜೆ ನೌಕರ ಎಸ್. ವಿನೋದ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಚಿನ್ ಕೆಸ್ತೂರು ಇದ್ದರು.

Share this article