ಕಬ್ಬಿನ ಬೆಂಬಲ ಬೆಲೆಗಾಗಿ ಅಹೋರಾತ್ರಿ ಹೆದ್ದಾರಿ ಬಂದ್‌

KannadaprabhaNewsNetwork |  
Published : Oct 14, 2026, 02:00 AM IST
ಬೆಂಬಲ ಬೆಲೆ ಸೇರಿದಂತೆಹಲವು ಬೇಡಿಕೆಗಳಿಗೆ ಧಾರವಾಡ ಸಮೀಪದ ಯರಿಕೊಪ್ಪ ಬೈಪಾಸ್‌ ಬಳಿ ರೈತರು ಅಹೋರಾತ್ರಿ ಧರಣಿ | Kannada Prabha

ಸಾರಾಂಶ

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರದ ಜತೆಗಿನ ದೆಹಲಿ ಸಭೆ ವಿಫಲವಾದ ಬೆನ್ನಲ್ಲಿಯೇ ಕಬ್ಬು ಬೆಳೆಗಾರರು ಮಂಗಳವಾರ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬಂದ್‌ ಮಾಡಿದ್ದು, ಪ್ರತಿಭಟನೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

ಧಾರವಾಡ:

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರದ ಜತೆಗಿನ ದೆಹಲಿ ಸಭೆ ವಿಫಲವಾದ ಬೆನ್ನಲ್ಲಿಯೇ ಕಬ್ಬು ಬೆಳೆಗಾರರು ಮಂಗಳವಾರ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬಂದ್‌ ಮಾಡಿದ್ದು, ಪ್ರತಿಭಟನೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳಗಾವಿ, ಹಾವೇರಿಯ ಕೆಲವು ಟೋಲ್‌ಗೇಟ್‌ ಮಾತ್ರವಲ್ಲದೇ ಹುಬ್ಬಳ್ಳಿ-ಧಾರವಾಡ ಮಧ್ಯೆದ ಬೈಪಾಸ್‌ ರಸ್ತೆಯ ಯರಿಕೊಪ್ಪ ಹಾಗೂ ತೇಗೂರ ಬಳಿ ಪ್ರತ್ಯೇಕವಾಗಿ ಬೆಳಗ್ಗೆಯಿಂದ ಬಂದ್‌ ಮಾಡಲಾಯಿತು. ತೇಗೂರು ಬಳಿ ಸಂಜೆ ವರೆಗೂ ತರಹೇವಾರಿ ಪ್ರತಿಭಟನೆ ಬಳಿಕ ಭಜನೆ ಮಾಡುವ ಮೂಲಕ ಬಂದ್‌ ತೆರವುಗೊಳಿಸಲಾಯಿತು. ಆದರೆ, ಯರಿಕೊಪ್ಪ ಬಳಿ ಪ್ರತಿಭಟನೆ ಕಾವು ಸಂಜೆಯ ನಂತರ ಹೆಚ್ಚಾಯಿತು.

ಸ್ಪಂದನೆ ಇಲ್ಲ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನಪ್ಪ ಪೂಜಾರಿ, ನಮ್ಮ ಬೇಡಿಕೆ ಈಡೇರಿಲಸು ಸಂಜೆ 6ರ ವರೆಗೆ ಗಡುವ ನೀಡಲಾಗಿತ್ತು. ಆದರೆ, 8 ಗಂಟೆಯಾದರೂ ಕೇಂದ್ರ ಸಚಿವರಿಂದ ಸ್ಪಂದನೆ ಸಿಗದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಂದ್‌ನ್ನು ಅಹೋರಾತ್ರಿಗೆ ವಿಸ್ತರಿಸುವುದಾಗಿ ಘೋಷಿಸಿದರು. ಅಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿಯೇ ಅನ್ನ-ಸಾಂಬಾರ ಮಾಡಿಕೊಂಡು ಊಟ ಮಾಡಿದ ರೈತರು ರಸ್ತೆಯಲ್ಲಿಯೇ ಧರಣಿ ಮುಂದುವರಿಸಿದ್ದಾರೆ.

ವಿವಿಧೆಡೆಯಿಂದ ಆಗಮಿಸಿದ್ದ ರೈತರು:

ಧಾರವಾಡ, ಅಳ್ನಾವರ, ಕಲಘಟಗಿ ಸೇರಿದಂತೆ ಬಾಗಲಕೋಟ, ಬೆಳಗಾವಿ ಹಾಗೂ ಸುತ್ತಲಿನ ಜಿಲ್ಲೆಗಳ ಕಬ್ಬು ಬೆಳೆಗಾರರು ಈ ಬಂದ್‌ನಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಸುಮಾರು 11ರ ಹೊತ್ತಿಗೆ ಬೈಪಾಸ್‌ ರಸ್ತೆಯ ಯರಿಕೊಪ್ಪ ಬಳಿ ಸೇರಿದ ನೂರಾರು ಕಬ್ಬು ಬೆಳೆಗಾರರು ಎರಡೂ ಬದಿಯ ರಾಷ್ಟ್ರೀಯ ಹೆದ್ದಾರಿಯನ್ನು ಬೈಕ್‌, ಕಾರು ನಿಲ್ಲಿಸಿ ವಾಹನ ತಡೆದಿದ್ದರು. ಒಂದೆರಡು ಗಂಟೆ ಬಳಿಕ ಧಾರವಾಡ-ಕಲಘಟಗಿ ರಸ್ತೆಯಲ್ಲಿ ವಾಹನ ಸಂಚಾರ ಗಮನಿಸಿದ ರೈತ ಮುಖಂಡರು ಅಲ್ಲಿಗೂ ಹೋಗಿ ರಾಜ್ಯ ಹೆದ್ದಾರಿ ಸಹ ಬಂದ್ ಮಾಡಿದ್ದರು. ಇದರಿಂದ ವಾಹನ ಸವಾರರು ಪರದಾಡಿದರು.

ತೇಗೂರ ಬಳಿಯೂ ಬಂದ್‌:

ಏತನ್ಮದ್ಯೆ ಧಾರವಾಡ-ಕಿತ್ತೂರು ರಸ್ತೆಯಲ್ಲಿರುವ ತೇಗೂರು ಗ್ರಾಮದ ಬಳಿಯೂ ಮತ್ತೊಂದು ರೈತರ ಗುಂಪು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಪರಿಣಾಮ ಬೆಳಗ್ಗೆಯಿಂದ ಸಂಜೆ ವರೆಗೂ ಲಾರಿ ಚಾಲಕರು ಹಾಗೂ ಬಸ್ ಪ್ರಯಾಣಿಕರು ಪರದಾಡಿದರು. ಸಂಜೆ ಬಳಿಕ ತೇಗೂರು ಬಳಿ ಬಂದ್‌ ತೆರವುಗೊಳಿಸಲಾಯಿತು. ದೆಹಲಿಗೆ ಕರೆಯಿಸಿ ಅಪಮಾನ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟಿಸಿದಾಗ ದೆಹಲಿಗೆ ಬನ್ನಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆಂದು ಕರೆಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಮ್ಮ ಬೇಡಿಕೆ ಈಡೇರಿಸಲು ಯಾವುದೇ ಕ್ರಮಕೈಗೊಳ್ಳದೆ ರೈತರಿಗೆ ಅಪಮಾನ ಮಾಡಿದ್ದಾರೆಂದು ರೈತ ಮುಖಂಡರಾದ ಕುಮಾರ ಹಾಗೂ ಸುಭಾಸ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಅಹೋರಾತ್ರಿ ಪೊಲೀಸರು ಕರ್ತವ್ಯ:

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬಂದ್‌ ವೇಳೆ ಯಾವುದೇ ಗದ್ದಲ-ಗೊಂದಲ ಸೃಷ್ಟಿಯಾಗಬಾರದೆಂದು ನಗರ ವ್ಯಾಪ್ತಿಯಲ್ಲಿ ಪೊಲೀಸ್‌ ಆಯುಕ್ತರು ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳೀಯವಾಗಿದ್ದು ಪೊಲೀಸ್‌ ಬಿಗಿ ಬಂದೋಬಸ್ತ್ ನಿರ್ವಹಿಸಿದರು. ಯರಿಕೊಪ್ಪದ ಬಳಿ ರೈತರೊಂದಿಗೆ ಗ್ರಾಮೀಣ ಪೊಲೀಸರು ಸಹ ಅಹೋರಾತ್ರಿ ಸ್ಥಳದಲ್ಲಿಯೇ ಇದ್ದು ತಮ್ಮ ಕರ್ತವ್ಯ ನಿರ್ವಹಿಸಿದರು. ನಮ್ಮ ಬೇಡಿಕೆ ಈಡೇರಿಸಲು ಸಂಜೆ 6ರ ವರೆಗೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದರೂ ಸ್ಪಂದಿಸಲಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಸಭೆ ನಡೆಸಿದಾಗ ರೈತರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಬೆಳಗಾವಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಹೆದ್ದಾರಿ ಬಂದ್‌ನ್ನು ಅಹೋರಾತ್ರಿಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೋರಾಟ ಗಂಭೀರತೆ ಪಡೆಯಲಿದೆ.

ಚೂನಪ್ಪ ಪೂಜಾರಿ, ರೈತ ಮುಖಂಡರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಯಾಚನೆ ವೇಳೆ ಸಂಕನೂರ ಪರ ಎಲ್ಲೆಡೆ ಉತ್ತಮ ಸ್ಪಂದನೆ
ವಿವಾಹಿತೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು