ಕುಡಿಯುವ ನೀರು ಕೃಷಿಗೆ ಬಳಸಬೇಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

KannadaprabhaNewsNetwork |  
Published : Oct 14, 2026, 02:00 AM IST
ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆ. | Kannada Prabha

ಸಾರಾಂಶ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಕೃಷಿ ಅಥವಾ ತೋಟಗಾರಿಕೆ ಚಟುವಟಿಕೆಗಳಿಗೆ ಬಳಸದೇ ಮನೆಗಳಲ್ಲಿ ಮಿತವಾಗಿ ಬಳಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಲಹೆ ನೀಡಿದರು.

ಧಾರವಾಡ:

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಕೃಷಿ ಅಥವಾ ತೋಟಗಾರಿಕೆ ಚಟುವಟಿಕೆಗಳಿಗೆ ಬಳಸದೇ ಮನೆಗಳಲ್ಲಿ ಮಿತವಾಗಿ ಬಳಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸಂಗ್ರಹಣೆ ಹಾಗೂ ಬೆಳೆ ಪರಿಹಾರ ಕುರಿತು ಮಂಗಳವಾರ ಸಭೆ ಜರುಗಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಪರಿಶೀಲಿಸಬೇಕು. ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನೀರಿನ ತೊಟ್ಟಿ ತುಂಬಿಸಬೇಕು. ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಹಾಗೂ ನಲ್ಲಿಗಳನ್ನು ಅನಗತ್ಯವಾಗಿ ತೆರೆದಿಡಬಾರದು ಎಂದು ಸೂಚಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ನೀರಿನ ಸಂರಕ್ಷಣೆ ಹಾಗೂ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲು ಫೋನ್ ಕರೆಗಳ ಮೂಲಕ ಧ್ವನಿ ಸಂದೇಶಗಳನ್ನು ಕಳುಹಿಸಲಾಗುವುದು ಎಂದ ಅವರು, ವಿದ್ಯುತ್ ಕಿಡಿಯಿಂದಾಗಿ 10 ಜನ ರೈತರ ಕಬ್ಬು ಬೆಳೆ ಸುಟ್ಟುಹೋಗಿರುವ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಎರಡು-ಮೂರು ದಿನಗಳೊಳಗೆ ಪರಿಹಾರ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯ ಮೂರು ತಾಲೂಕಿನ ಗ್ರಾಮೀಣ ಪ್ರದೇಶದ 17 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. 19 ಖಾಸಗಿ ಕೊಳವೆಬಾವಿ ಮುಖಾಂತರ ಕುಡಿಯುವ ನೀರು ಸರಬರಾಜಾಗುತ್ತಿದೆ. ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಪ್ರದೇಶಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಮಲಪ್ರಭ ಜಲಾಶಯದಿಂದ ಕಾಲುವೆಗಳ ಮುಖಾಂತರ 55 ಕುಡಿಯುವ ನೀರಿನ ಕೆರೆಗಳನ್ನು ಆಗಸ್ಟ್ ತಿಂಗಳಿನಲ್ಲಿ ಭರ್ತಿ ಮಾಡಿಕೊಂಡಿದ್ದು ನವೆಂಬರ್ ಅಂತ್ಯದ ವರೆಗೆ ನಿರ್ವಹಣೆ ಮಾಡಬಹುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಂಜಿನೀಯರ ಜಗದೀಶ ಪಾಟೀಲ, ತೋಟಗಾರಿಕೆ ಇಲಾಖೆಯ ಕೆ.ಸಿ. ಭದ್ರಣ್ಣವರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಇದ್ದರು.

ಧಾರವಾಡ ಜಿಲ್ಲೆಯ ಎಂಟು ತಾಲೂಕುಗಳನ್ನು ತೀವ್ರತರ ಬರಪೀಡಿತ ಎಂದು ಘೋಷಣೆ ಮಾಡಿದ್ದು, 1.88 ಲಕ್ಷ ರೈತರಿಗೆ ₹ 271.17 ಕೋಟಿ ಹಾನಿಯಾಗಿರುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಯ 1,40,340 ಅರ್ಜಿ ಸ್ವೀಕರಿಸಿದ್ದು 1,30,371 ಹೆಕ್ಟೇರ್‌ ನೋಂದಣಿ ಆಗಿದೆ.

ಸ್ನೇಹಲ್‌ ಆರ್‌., ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಯಾಚನೆ ವೇಳೆ ಸಂಕನೂರ ಪರ ಎಲ್ಲೆಡೆ ಉತ್ತಮ ಸ್ಪಂದನೆ
ವಿವಾಹಿತೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು