ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ: ಶಕುಂತಲಾ ಆನಂದ್

KannadaprabhaNewsNetwork |  
Published : Oct 14, 2026, 01:45 AM IST
ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ ಶಕುಂತಲಾ ಆನಂದ್ | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ಮಕ್ಕಳ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಇಂತಹ ಆಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ರಾಮಾಯಣ, ಮಹಾಭಾರತ ಸೇರಿ ಭಾರತೀಯ ಇತಿಹಾಸದ ಮಹಾನ್ ಪುರುಷರು, ದಾರ್ಶನಿಕರು ಹಾಗೂ ಪೌರಾಣಿಕ ಪಾತ್ರಗಳನ್ನು ಗೊಂಬೆಗಳ ಮೂಲಕ ಮಕ್ಕಳಿಗೆ ಪರಿಚಯಿಸಬಹುದು.

ಅರಸೀಕೆರೆ: ನಾಡಿನ ಪರಂಪರೆ, ಭಾರತೀಯ ಇತಿಹಾಸ ಹಾಗೂ ಪೌರಾಣಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಮಹತ್ವದ ಪಾತ್ರ ವಹಿಸುತ್ತದೆ. ಇದು ಕೇವಲ ಸಾಂಪ್ರದಾಯಿಕ ಆಚರಣೆಯಾಗಿರದೆ, ಕುಟುಂಬದ ಸದಸ್ಯರನ್ನು ಭಾವನಾತ್ಮಕವಾಗಿ ಬೆಸೆಯುವ ಸಂಸ್ಕೃತಿಯ ಕೊಂಡಿಯಾಗಿದೆ ಎಂದು ತಾಲೂಕು ಸೀತಾ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಶಕುಂತಲಾ ಆನಂದ್ ಅಭಿಪ್ರಾಯಪಟ್ಟರು.

ನಗರದ ಮಾರುತಿನಗರ ಬಡಾವಣೆಯ ತಮ್ಮ ನಿವಾಸದಲ್ಲಿ ಶರನ್ನವರಾತ್ರಿ ಅಂಗವಾಗಿ ಗೊಂಬೆಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಗೊಂಬೆಗಳ ಮಹತ್ವ ಹಾಗೂ ಅವುಗಳ ಹಿನ್ನೆಲೆಯನ್ನು ವಿವರಿಸಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಇಂತಹ ಆಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ರಾಮಾಯಣ, ಮಹಾಭಾರತ ಸೇರಿ ಭಾರತೀಯ ಇತಿಹಾಸದ ಮಹಾನ್ ಪುರುಷರು, ದಾರ್ಶನಿಕರು ಹಾಗೂ ಪೌರಾಣಿಕ ಪಾತ್ರಗಳನ್ನು ಗೊಂಬೆಗಳ ಮೂಲಕ ಮಕ್ಕಳಿಗೆ ಪರಿಚಯಿಸಬಹುದು. ಇದರಿಂದ ಮಕ್ಕಳಲ್ಲಿ ಇತಿಹಾಸದ ಅರಿವು ಮೂಡುವುದರ ಜತೆಗೆ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಆಸಕ್ತಿಯೂ ಬೆಳೆಯುತ್ತದೆ. ಹೀಗಾಗಿ ಪೋಷಕರು ಮಕ್ಕಳಿಗೆ ಇಂತಹ ಪ್ರದರ್ಶನಗಳನ್ನು ವೀಕ್ಷಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಪರಿಸರ ಸ್ನೇಹಿ ಮಣ್ಣು ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಲಾದ ಗೊಂಬೆಗಳು ನಮ್ಮ ಪರಂಪರೆಯ ಪ್ರತೀಕಗಳಾಗಿವೆ. ವಿವಿಧ ಮರಗಳಿಂದ ರೂಪಿಸಿದ ಗೊಂಬೆಗಳು, ಶ್ರೀಗಂಧದ ಗೊಂಬೆಗಳು ಸೇರಿದಂತೆ ಹಿರಿಯರು ಉಳಿಸಿಕೊಂಡು ಬಂದಿರುವ ಕಲಾ ಸಂಪತ್ತು ಇಂದಿಗೂ ತನ್ನ ಮಹತ್ವವನ್ನು ಕಾಯ್ದುಕೊಂಡಿದೆ. ಮೈಸೂರು ದಸರಾ ದರ್ಬಾರ್ ಸೇರಿದಂತೆ ದೇಶದ ವಿವಿಧ ಭಾಗಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಗೊಂಬೆಗಳ ಪ್ರದರ್ಶನದ ಮೂಲಕ ಮನಮುಟ್ಟುವಂತೆ ಪರಿಚಯಿಸಲು ಸಾಧ್ಯವಿದೆ ಎಂದರು.

ವರ್ಷಕ್ಕೊಮ್ಮೆ ನಡೆಯುವ ದಸರಾ ಗೊಂಬೆಗಳ ಪ್ರದರ್ಶನವನ್ನು ಮನೆಮನೆಗಳಲ್ಲಿ ಆಯೋಜಿಸುವ ಮೂಲಕ ಹಿಂದಿನ ಕಾಲದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಬೇಕು. ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಸ್ಕಾರಗಳ ಪರಿಚಯ ಮಾಡಿಸುವ ಉದ್ದೇಶದಿಂದ ಈ ಬಾರಿಯ ದಸರಾ ಹಬ್ಬದಿಂದಲೇ ಎಲ್ಲರೂ ಗೊಂಬೆಗಳ ಪ್ರದರ್ಶನದ ಪರಂಪರೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಮಾಧಾನ ಬದಿಗಿಟ್ಟು ಲಿಂಬಿಕಾಯಿ ಪರ ಪ್ರಚಾರ: ಕುಬೇರಪ್ಪ
ಮಲ್ಲಿಪಟ್ಟಣ ಏತ ನೀರಾವರಿ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜು; ಕಾಮಗಾರಿ ವಿಳಂಬ ಬಗ್ಗೆ ಅಸಮಾಧಾನ