ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲೆ ಹಾಗೂ ಚಿಕ್ಕಮಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಅತ್ಯಾಧುನಿಕವಾಗಿ ಸ್ಥಾಪಿಸಲಾದ ''''''''ಇಂಟೆಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್'''''''' (ಐಸಿಸಿಸಿ) ನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಉದ್ಘಾಟಿಸಿದರು.
ಈ ಮಹತ್ವಾಕಾಂಕ್ಷಿ ಯೋಜನೆ ಮೆಸ್ಕಾಂ ಇಲಾಖೆ ಸಹಯೋಗದೊಂದಿಗೆ ಸಿಎಸ್‌ಆರ್ (ಸಿಎಸ್‌ಆರ್) ನಿಧಿಯಡಿ ಸುಮಾರು ₹1.75 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿದೆ. ಮೊದಲ ಹಂತವಾಗಿ ನಗರದ ಪ್ರಮುಖ ವೃತ್ತಗಳು, ಜನನಿಬಿಡ ಪ್ರದೇಶ ಗಳು ಹಾಗೂ ಆಯಕಟ್ಟಿನ ಸೂಕ್ಷ್ಮ ಜಾಗಗಳಲ್ಲಿ ಒಟ್ಟು 41 ಸೋಲಾರ್ ಚಾಲಿತ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ ಇವು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ವಿದ್ಯುತ್ ಕೈಕೊಟ್ಟರೂ ದಿನದ 24 ಗಂಟೆಯೂ ನಿರಂತರವಾಗಿ ಕಣ್ಣಾವಲು ನಡೆಸಲಿವೆ.ಜಿಲ್ಲೆಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ನಗರದ ಪ್ರವೇಶ ಮಾರ್ಗಗಳಲ್ಲಿ ವಾಹನ ಸಂಚಾರ ಸುಗಮ ಗೊಳಿಸುವುದು ಪೊಲೀಸರಿಗೆ ಸವಾಲಾಗಿತ್ತು. ಇನ್ನು ಮುಂದೆ ನಗರಕ್ಕೆ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಅಳವಡಿಸ ಲಾಗಿರುವ ಈ ಕ್ಯಾಮೆರಾಗಳು ಪ್ರತಿಯೊಂದು ವಾಹನದ ಮೇಲೆ ನಿಗಾ ಇಡಲಿವೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು, ದ್ವಿಚಕ್ರ ವಾಹನದಲ್ಲಿ ಹೆಲ್ಕೆಟ್ ಇಲ್ಲದಿರುವುದು, ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪ್ ಹಾಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಈ ಎಐ ತಂತ್ರಜ್ಞಾನ ಸ್ವಯಂಚಾಲಿತವಾಗಿ ಪತ್ತೆ ಹಚ್ಚಲಿದೆ. ನಿಯಮ ಉಲ್ಲಂಘಿಸುವ ಚಾಲಕರ ಫೋಟೋ ಸೆರೆ ಹಿಡಿದು ಕಂಟ್ರೋಲ್ ರೂಮ್ ಮೂಲಕ ನೇರವಾಗಿ ಮಾಲೀಕರಿಗೆ ದಂಡದ ನೋಟಿಸ್ ತಲುಪಿಸಲಾಗುತ್ತದೆ.
ನಿಯಮ ಪಾಲನೆ ನಿಮ್ಮ ಮೇಲಿರುವ ದಂಡದ ಭಯಕ್ಕಲ್ಲ, ಮನೆ ಕಾಯುತ್ತಿರುವ ನಿಮ್ಮವರ ಸುರಕ್ಷತೆಗಾಗಿರಲಿ. ಪೊಲೀಸರು ಸ್ಥಳದಲ್ಲಿ ಇಲ್ಲದಿದ್ದರೂ ತಂತ್ರಜ್ಞಾನದ ಹದ್ದಿನ ಕಣ್ಣು ಸದಾ ನಿಮ್ಮ ಮೇಲಿರುತ್ತದೆ.