ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡಿಗರಿವರು- 8 ಮಂದಿಗೆ ಪದ್ಮಶ್ರೀ, ಶತಾವಧಾನಿ ಗಣೇಶ್‌ಗೆ ಪದ್ಮಭೂಷಣ

Published : Jan 26, 2026, 08:30 AM IST
Padma Awards 2026

ಸಾರಾಂಶ

  ಶತಾವಧಾನಿ ಗಣೇಶ್, ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಪದ್ಮ ವಿಜೇತರು. ಈ ಪೈಕಿ ಗಣೇಶ್‌ ಅವರಿಗೆ ಪದ್ಮಭೂಷಣ ಬಂದಿದ್ದರೆ, ಉಳಿದವರಿಗೆ ಪದ್ಮಶ್ರೀ ಸಂದಿದೆ.

 ನವದೆಹಲಿ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದ್ದು, ಕರ್ನಾಟಕದ 9 ಸಾಧಕರು ಭಾಜನರಾಗಿದ್ದಾರೆ.

ಶತಾವಧಾನಿ ಗಣೇಶ್, ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಪದ್ಮ ವಿಜೇತರು. ಈ ಪೈಕಿ ಗಣೇಶ್‌ ಅವರಿಗೆ ಪದ್ಮಭೂಷಣ ಬಂದಿದ್ದರೆ, ಉಳಿದವರಿಗೆ ಪದ್ಮಶ್ರೀ ಸಂದಿದೆ.

ನಾಡಿನ ಶ್ರೇಷ್ಠ ವಿದ್ವಾಂಸ, ಸಾಹಿತಿ ಶತಾವಧಾನಿ ಡಾ. ಆರ್. ಗಣೇಶ್‌ (ಕಲೆ ವಿಭಾಗ) ಅವರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಅವಧಾನ ಕಲೆಗೆ ಅನನ್ಯ ಕೊಡುಗೆ ನೀಡಿದ್ದು, ಎಂಜಿನಿಯರಿಂಗ್‌ನಿಂದ ಹಿಡಿದು ತತ್ವಶಾಸ್ತ್ರದವರೆಗೆ ಅನೇಕ ವಿಷಯಗಳಲ್ಲಿ ಪರಿಣತಿ ಪಡೆದಿದ್ದಾರೆ.

ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಅಂಕೇಗೌಡ ಅವರು (ಸಮಾಜ ಸೇವೆ) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಇವರು ಜಗತ್ತಿನ ಅತಿ ದೊಡ್ಡ ಮುಕ್ತ ಗ್ರಂಥಾಲಯವಾದ ‘ಪುಸ್ತಕದ ಮನೆ’ಯನ್ನು ಸ್ಥಾಪಿಸಿದ್ದಾರೆ. ಇದರಲ್ಲಿ ಸುಮಾರು 4 ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವಿದೆ.

ಡಾ. ಪ್ರಭಾಕರ ಕೋರೆ (ಸಾಹಿತ್ಯ ಮತ್ತು ಶಿಕ್ಷಣ) ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ

ಸುದೀರ್ಘ 40 ವರ್ಷಗಳ ಕಾಲ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಆಡಳಿತ ನಡೆಸಿದ ಡಾ. ಪ್ರಭಾಕರ ಕೋರೆ (ಸಾಹಿತ್ಯ ಮತ್ತು ಶಿಕ್ಷಣ) ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಸಾರಥ್ಯದಲ್ಲಿ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.

ಸಮಾಜ ಸೇವಕಿ, ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಡಾ. ಎಸ್.ಜಿ. ಸುಶೀಲಮ್ಮ (ಸಮಾಜ ಸೇವೆ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ, ಬಡವರ ಕಲ್ಯಾಣ, ಮಹಿಳಾ ಒಕ್ಕೂಟಗಳ ರಚನೆ, ಸ್ವಯಂ ಉದ್ಯೋಗ ತರಬೇತಿಯನ್ನು ತಮ್ಮ ಸಂಸ್ಥೆಯಿಂದ ನೀಡಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

 ಶಶಿ ಶೇಖರ್ ವೆಂಪಾಟಿ (ಸಾಹಿತ್ಯ ಮತ್ತು ಶಿಕ್ಷಣ) ಪದ್ಮಶ್ರೀಗೆ ಆಯ್ಕೆ

ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಶೇಖರ್ ವೆಂಪಾಟಿ (ಸಾಹಿತ್ಯ ಮತ್ತು ಶಿಕ್ಷಣ) ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ. ಭಾರತ್‌ ಫೌಂಡೇಶನ್‌ನ ದೀಪ್‌ಟೆಕ್‌ನ ಸಹ ಸಂಸ್ಥಾಪಕರಾಗಿರುವ ಇವರು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ವಿಜ್ಞಾನಿ ಶುಭಾ ವೆಂಕಟೇಶ್ ಅಯ್ಯಂಗಾರ್‌ (ವಿಜ್ಞಾನ ಇಂಜಿನಿಯರಿಂಗ್) ಅವರಿಗೆ ಪದ್ಮಶ್ರೀ ಪ್ರಶಸ್ತಿ ಅರಸಿಬಂದಿದೆ. ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ವೈಮಾನಿಕ ವಿಜ್ಞಾನದಲ್ಲಿ ಸಾಧನೆ ಮಾಡಿದ್ದಾರೆ.

ಕರ್ನಾಟಕದ ಪ್ರಸಿದ್ಧ ವೈದ್ಯ ಡಾ. ಸುರೇಶ್ ಹನಗವಾಡಿಯವರು ಪದ್ಮಶ್ರೀಗೆ ಭಾಜನರಾಗಿದ್ದಾರೆ. ಇವರು ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಹಿಮೋಫಿಲಿಯಾ ಸೊಸೈಟಿಯನ್ನು ಸ್ಥಾಪಿಸುವ ಮೂಲಕ ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ.

ಖ್ಯಾತ ಉದ್ಯಮಿ ದಿ. ಟಿ.ಟಿ. ಜಗನ್ನಾಥನ್‌ (ವ್ಯಾಪಾರ ಮತ್ತು ಉದ್ಯಮ) ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಲಭಿಸಿದೆ. ಇವರು ಅಡುಗೆ ಮನೆ ಉಪಕರಣಗಳ ತಯಾರಿಕಾ ವಲಯದಲ್ಲಿ ಅತಿ ದೊಡ್ಡ ಕಂಪನಿ ಟಿಟಿಕೆ ಪ್ರೆಸ್ಟೀಜ್‌ನ ಅಧ್ಯಕ್ಷರಾಗಿದ್ದರು. ‘ಅಡುಗೆ ಮನೆಯ ಸಾಮ್ರಾಟ’ ಎಂದೇ ಪ್ರಸಿದ್ಧರಾಗಿದ್ದರು.

ನವಜಾತ ಶಿಶು ತಜ್ಞೆ ಡಾ. ಅರ್ಮಿದಾ ಫೆರ್ನಾಡಿಸ್‌ (ವೈದ್ಯಕೀಯ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಶಿಶು ಮತ್ತು ಬಾಣಂತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಕೊಡುಗೆ ನೀಡಿರುವ ಇವರು, ಏಷ್ಯಾದಲ್ಲೇ ಮೊದಲ ಮಾನವರ ಹಾಲಿನ ಬ್ಯಾಂಕ್‌ ಸ್ಥಾಪಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ
ಇತಿಹಾಸದಲ್ಲೇ ಇದೇ ಮೊದಲ ಬಾರಿ ಲಾಲ್‌ಬಾಗ್‌ ಪುಷ್ಪ ಪ್ರದರ್ಶನದಿಂದ ಭಾರೀ ಗಳಿಕೆ