10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ

Published : Jan 23, 2026, 12:35 PM IST
Karnataka govt

ಸಾರಾಂಶ

ಕೇಂದ್ರ ಸರ್ಕಾರವು ಮನರೇಗಾ ಯೋಜನೆ ರದ್ದುಪಡಿಸಿ ಗ್ರಾಮೀಣ ಜನರ ಉದ್ಯೋಗ, ನಿರುದ್ಯೋಗ ಭತ್ಯೆಯ ಹಕ್ಕನ್ನು ಕಸಿದಿದೆ. ಹೀಗಾಗಿ ವಿಬಿ ಗ್ರಾಮ್ ಜಿ ಕಾನೂನು ತಕ್ಷಣ ರದ್ದುಪಡಿಸಿ ಮನರೇಗಾ ಯೋಜನೆ ಮರು ಸ್ಥಾಪಿಸಬೇಕು’ ಎಂದು ನನ್ನ ಸರ್ಕಾರ ಒತ್ತಾಯಿಸುತ್ತದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.

  ವಿಧಾನಮಂಡಲ :  ‘ಕೇಂದ್ರ ಸರ್ಕಾರವು ಮನರೇಗಾ ಯೋಜನೆ ರದ್ದುಪಡಿಸಿ ಗ್ರಾಮೀಣ ಜನರ ಉದ್ಯೋಗ, ನಿರುದ್ಯೋಗ ಭತ್ಯೆಯ ಹಕ್ಕನ್ನು ಕಸಿದಿದೆ. ಹೀಗಾಗಿ ವಿಬಿ ಗ್ರಾಮ್ ಜಿ ಕಾನೂನು ತಕ್ಷಣ ರದ್ದುಪಡಿಸಿ ಮನರೇಗಾ ಯೋಜನೆ ಮರು ಸ್ಥಾಪಿಸಬೇಕು’ ಎಂದು ನನ್ನ ಸರ್ಕಾರ ಒತ್ತಾಯಿಸುತ್ತದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಮೊದಲ ಹಾಗೂ ಕೊನೆಯ ಪ್ಯಾರಾ ಓದಿ ಸದನದಲ್ಲಿ ಮಂಡನೆ ಆಗಿರುವ ಭಾಷಣದಲ್ಲಿ ಕೇಂದ್ರದ ವಿರುದ್ಧ ಪುಂಖಾನುಪುಂಖ ಟೀಕಾಪ್ರಹಾರವಿದೆ. ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳ ಪೈಕಿ 10ರಲ್ಲಿ ಕೇಂದ್ರ ಸರ್ಕಾರದ ನೀತಿ ಹಾಗೂ ನಡೆಗಳನ್ನು ಕಟುವಾಗಿ ಟೀಕಿಸಲಾಗಿದೆ.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು (ಮನರೇಗಾ) ಬಡವರ, ಕೃಷಿ ಕಾರ್ಮಿಕರ ಪರ ಇತ್ತು. ಗ್ರಾಮೀಣ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸುವ, ನಿರುದ್ಯೋಗ ಭತ್ಯೆ ಒದಗಿಸುವ, ಕಾರ್ಮಿಕರಿಗೆ ಅವರಿರುವ ಸ್ಥಳದಲ್ಲಿಯೇ ಕೆಲಸ ಯೋಜನೆಯನ್ನು ಮರು ಸ್ಥಾಪಿಸಬೇಕೆಂದು ನನ್ನ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು ಇದ್ದರೂ ರಾಜ್ಯಗಳನ್ನು ಸಂಪರ್ಕಿಸದೆ ನಿರ್ಧಾರ ಮಾಡಿರುವುದು ಸಂವಿಧಾನ ಬಾಹಿರ.

ಯೋಜನೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕಲಾಗಿದೆ. ಹೊಸ ಕಾಯ್ದೆಯ ಪ್ರಕಾರ ಶೇ.40 ರಷ್ಟು ಅನುದಾನವನ್ನು ರಾಜ್ಯಗಳು ನೀಡಬೇಕಾಗುತ್ತದೆ. ಕೇಂದ್ರವು ಅನುದಾನ ನೀಡದಿದ್ದರೆ ಕೇಂದ್ರವು ಅನುದಾನ ನೀಡುವುದಿಲ್ಲ. ಹೀಗಾಗಿ ಯೋಜನೆ ಅವಸಾನದ ಹಾದಿಗೆ ತೆರಳಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಮನರೇಗಾ ಸಾಧನೆ ಉಲ್ಲೇಖ:

ಗ್ರಾಮೀಣ ಭಾರತದ ಅಭಿವೃದ್ಧಿ ಪರ್ವದ ಬೃಹತ್‌ ಅಧ್ಯಾಯವಾಗಿದ್ದ ಮನರೇಗಾ ಕಾಯ್ದೆಯ ರದ್ದತಿಯ ಮೂಲಕ ಭಾರತೀಯ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಲಾಗಿದೆ.

ಅನ್ನ, ಉದ್ಯೋಗಗಳನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಬಾರದೆಂಬುದೂ ಸಹ ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2005ರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಿತ್ತು.

ರಾಜ್ಯವು ಕಳೆದ 20 ವರ್ಷಗಳಲ್ಲಿ 76.89 ಲಕ್ಷ ಕಾಮಗಾರಿಗಳನ್ನು 61.03 ಸಾವಿರ ಕೋಟಿ ರು. ವೆಚ್ಚದಲ್ಲಿ ಕೈಗೊಂಡಿದೆ. 182.5 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಸೃಜಿಸಿದೆ. ನೀರಿನಲ್ಲಿ ಹೋಮ ಮಾಡಿದಂತೆ ಕೇಂದ್ರ ಸರ್ಕಾರ ಈ ಯೋಜನೆಗೆ ತಿಲಾಂಜಲಿ ಇಟ್ಟಿದೆ. ಇಂತಹ ಪ್ರಗತಿ ವಿರೋಧಿ ಕ್ರಮವನ್ನು ನನ್ನ ಸರ್ಕಾರ ಬಲವಾಗಿ ಖಂಡಿಸುತ್ತದೆ.

ಮನರೇಗಾ ಕಾಯ್ದೆಯು ಖಾತ್ರಿ ಮಾಡಿದ್ದ ಉದ್ಯೋಗದ ಖಾತ್ರಿಯನ್ನು ಹೊಸ ವಿಬಿ ಗ್ರಾಮ್‌ ಜಿ ಕಾಯ್ದೆಯು ಕಿತ್ತುಕೊಂಡಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ದೂರಲಾಗಿದೆ.

ಉದ್ಯೋಗ ನೀಡುವ ತತ್ವ ಧ್ವಂಸ:

ಮನರೇಗಾ ಕಾಯ್ದೆಯ ಸೆಕ್ಷನ್‌ 3ರ ಪ್ರಕಾರ ಯಾವುದೇ ಪಂಚಾಯಿತಿಯಲ್ಲಿ ಉದ್ಯೋಗ ನೀಡಬೇಕೆಂದು ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕೆಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ಆದರೆ, ವಿಬಿ ಗ್ರಾಮ್‌ ಜಿ ಯೋಜನೆಯಲ್ಲಿ ಬೇಡಿಕೆ ಆಧರಿಸಿ ಉದ್ಯೋಗ ನೀಡಬೇಕೆಂಬ ತತ್ವವನ್ನು ಧ್ವಂಸ ಮಾಡಿ ಪೂರೈಕೆ ಆಧಾರಿತ ಯೋಜನೆ ಮಾಡಲಾಗಿದೆ.

ಕಾರ್ಪೊರೇಟ್‌ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡಲು ‘ವಿಬಿ ಗ್ರಾಮ್‌ ಜಿ’ ಯೋಜನೆಯನ್ನು ರೂಪಿಸಲಾಗಿದೆ. ಆ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ ಎಂದು ಟೀಕಿಸಲಾಗಿದೆ.

ಅಧಿಕಾರ ವಿಕೇಂದ್ರೀಕರಣ ಬುಡಮೇಲು:

ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಹೊಸ ಕಾಯ್ದೆಯು ದುರ್ಬಲಗೊಳಿಸಿದೆ. ಪಂಚಾಯತ್‌ರಾಜ್‌ನ ವಿಕೇಂದ್ರೀಕರಣ ವ್ಯವಸ್ಥೆಯ ಅಡಿಪಾಯವನ್ನೇ ಬುಡಮೇಲು ಮಾಡಿದೆ. ಗ್ರಾಮಸಭೆಗಳ ಅಧಿಕಾರವನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ ಪ್ರಗತಿ ವಿರೋಧಿ ಕ್ರಮವಿದು ಎಂದು ಟೀಕಿಸಲಾಗಿದೆ.

ತೆರಿಗೆ ಪಾಲು, ಅನುದಾನ ತಾರತಮ್ಯದ ಬಗ್ಗೆ ಕಿಡಿ:

ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಅನ್ಯಾಯಗಳಿಗೆ ತುತ್ತಾಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಕೇಂದ್ರದ ವಿರುದ್ದ ಟೀಕಾಪ್ರಹಾರ ನಡೆಸಲಾಗಿದೆ.

ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕವನ್ನು ಆರ್ಥಿಕವಾಗಿ ದಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಉಂಟಾಗುತ್ತದೆ ಎಂಬುದನ್ನು ಒಕ್ಕೂಟ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸಲಾಗಿದೆ.

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು ₹1.25 ಲಕ್ಷ ಕೋಟಿಗಳಷ್ಟು ಬೃಹತ್‌ ಪ್ರಮಾಣದ ಸಂಪನ್ಮೂಲಗಳು ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ. ಇದು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನ್ಯಾಯವು ಸರಿಯಾಗಬಹುದೆಂದು ಸರ್ಕಾರಕ್ಕೆ ಖಚಿತ ನಂಬಿಕೆಯಿದೆ ಆಶಾಭಾವನೆ ವ್ಯಕ್ತಪಡಿಸಲಾಗಿದೆ.

ವಿಬಿ ಜಿ ರಾಮ್‌ ಜಿ ಬದಲು ‘ವಿಬಿ ಗ್ರಾಮ್‌ ಜಿ’ ಬಳಕೆ:

ವಿಕಸಿತ್ ಭಾರತ್‌-ರೋಜ್‌ಗಾರ್‌ ಅಜೀವಿಕಾ ಮಿಷನ್‌ (ಗ್ರಾಮೀಣ್‌) ಯೋಜನೆಯನ್ನು ವಿಬಿ ಜಿ ರಾಮ್‌ ಜಿ ಎಂದು ಬಳಕೆ ಮಾಡಲಾಗುತ್ತಿತ್ತು. ಆದರೆ, ರಾಜ್ಯಪಾಲರ ಭಾಷಣದಲ್ಲಿ ಯೋಜನೆಯ ಹೆಸರನ್ನು ಎಲ್ಲಾ ಕಡೆಗಳಲ್ಲೂ ವಿಬಿ ಗ್ರಾಮ್‌ ಜಿ ಎಂದು ಬಳಕೆ ಮಾಡಲಾಗಿದೆ. ರಾಮ್‌ ಬದಲಿಗೆ ಗ್ರಾಮ್‌ ಎಂದು ಬರುವಂತೆ ನೋಡಿಕೊಳ್ಳಲಾಗಿದೆ.

ಮೊದಲ, ಕೊನೆ ಪ್ಯಾರಾ ಓದಿದ್ದರಿಂದ ಇಡೀ ಭಾಷಣ ವಾಚಿಸಿದಂತೆ; ಹೊರಟ್ಟಿ:

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಲಿಖಿತ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾಗಳನ್ನು ಓದಿರುವುದರಿಂದ ಇಡೀ ಭಾಷಣ ವಾಚಿಸಿದಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸಭಾನಾಯಕ ಎನ್‌.ಎಸ್‌. ಬೋಸರಾಜು, ರಾಜ್ಯಪಾಲರು ಸಂವಿಧಾನದ 176 ಮತ್ತು 163 ವಿಧಿಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ರೀತಿ ನಡೆದುಕೊಳ್ಳುವ ಮೂಲಕ ಸದನಕ್ಕೆ ಅಗೌರವ ತೋರಿಸಿದ್ದಾರೆ, ಅವರ ನಡವಳಿಕೆ ಖಂಡನೀಯ ಎಂದರು.

ಇದಕ್ಕೆ ಬಿಜೆಪಿಯ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ರಾಜ್ಯಪಾಲರು ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ವಾದಿಸಿದರೆ, ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ರಾಜ್ಯಪಾಲರು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಜೋರಾಗಿ ಹೇಳತೊಡಗಿದರು. ಇದರಿಂದ ಕೆಲ ಕಾಲ ಗದ್ದಲದ ವಾತಾವರಣ ಉಂಟಾಯಿತು.

ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ರಾಜ್ಯಪಾಲರು ತಮ್ಮ ಭಾಷಣದ ಮೊದಲ ಹಾಗೂ ಕೊನೆಯ ವಾಕ್ಯಗಳನ್ನು ಓದಿದ್ದಾರೆ. ಹೀಗಾಗಿ, ಅದನ್ನು ‘ರೀಡ್‌ ಅಂಡ್‌ ರೆಕಾರ್ಡ್‌’ ಎಂದು ಹೇಳಬೇಕಾಗುತ್ತದೆ ಎಂದರು.

ಇದಕ್ಕೆ ಜೆಡಿಎಸ್‌ ಸದಸ್ಯ ಬೋಜೇಗೌಡ ಅವರು, ರಾಜ್ಯಪಾಲರು ಪೂರ್ಣ ಭಾಷಣ ಓದಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅವರು ಪೂರ್ಣ ಪ್ರಮಾಣದ ಭಾಷಣ ವಾಚಿಸಿಲ್ಲ. ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ ಎಂದು ಹೇಳುತ್ತಿರುವುದರಿಂದ ಭಾಷಣ ಅಪೂರ್ಣ ಎಂದು ಭಾವಿಸಬೇಕಾಗುತ್ತದೆ ಎಂದು ವಾದಿಸಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರು, ಮೊದಲ ಬಾರಿಗೆ ರಾಜ್ಯದಲ್ಲಿ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಓದದಿರುವದು ಖಂಡನೀಯ. ಇಂತಹ ಅಗೌರವ ಎಂದೂ ಆಗಿಲ್ಲ. ಸಂವಿಧಾನಕ್ಕೆ ರಾಜ್ಯಪಾಲರು ಅಪಚಾರ ಮಾಡಿದ್ದಾರೆ ಎಂದು ಪ್ರತಿ ವಾದಿಸಿದರು.

ಕೊನೆಗೆ ಸಭಾಪತಿ ಹೊರಟ್ಟಿ ಅವರು ಈ ವಿಷಯವನ್ನು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿ ಸಂತಾಪ ಸೂಚನೆ ಪ್ರಸ್ತಾವನೆ ಮಂಡಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ
ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ