;Resize=(412,232))
ಬೆಂಗಳೂರು : ನೇಕಾರರ (ಉದ್ಯೋಗಿಗಳು) ಕೊರತೆ, ಅಗತ್ಯಕ್ಕೆ ತಕ್ಕಂತೆ ಇರದ ಮಗ್ಗಗಳು, ಖಾಲಿ ಇರುವ ಹುದ್ದೆ ತುಂಬಲು ನಿರಾಸಕ್ತಿ ಮುಂತಾದ ಕಾರಣಗಳಿಂದ ರಾಜ್ಯದ ಹೆಮ್ಮೆಯ ಮೈಸೂರು ರೇಷ್ಮೆ ಸೀರೆಗಳನ್ನು ಬೇಡಿಕೆಗೆ ತಕ್ಕಂತೆ ಸಿದ್ಧಪಡಿಸಿ ಪೂರೈಸಲು ಆಗದಂತ ಸ್ಥಿತಿಯನ್ನು ಕರ್ನಾಟಕ ರೇಷ್ಮೆ ಕೈಗಾರಿಕೆ ಸಹಕಾರ ಸಂಘ (ಕೆಎಸ್‌ಐಸಿಎಲ್) ಎದುರಿಸುತ್ತಿದೆ.
ಆಕರ್ಷಕ ಸೌಂದರ್ಯ, ಕಲಾತ್ಮಕ ವಿನ್ಯಾಸ, ಐಷಾರಾಮಿ ಗುಣಮಟ್ಟ, ದೀರ್ಘಕಾಲ ಬಾಳಿಕೆ ಬರುವಂತಹ ಮೈಸೂರು ಸಿಲ್ಕ್ ಸೀರೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ರಾಜ್ಯದಲ್ಲಿ ಮೈಸೂರ್ ಸಿಲ್ಕ್ ಸೀರೆಗಳಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ, ಅತ್ಯಂತ ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ಉತ್ಪಾದಿಸುವ ಕೆಎಸ್‌ಐಸಿಎಲ್ ವರ್ಷಕ್ಕೆ ಅಂದಾಜು 1.20 ಲಕ್ಷ ಸೀರೆ ಉತ್ಪಾದಿಸುತ್ತಿದೆ. ಉತ್ಪಾದಿಸಿದ ಎಲ್ಲಾ ಸೀರೆಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಮಾರಾಟವಾಗುತ್ತಿರುವುದು ವಿಶೇಷ.
ಬೇಡಿಕೆ ಸಾಕಷ್ಟಿದ್ದರೂ ರೇಷ್ಮೆ ಸೀರೆ ಉತ್ಪಾದನೆ ಹೆಚ್ಚದಿರಲು ಖಾಯಂ ನೌಕರರ ಕೊರತೆ ಕಾರಣ. ಸದ್ಯ ಕೆಎಸ್‌ಐಸಿಎಲ್ ವ್ಯಾಪ್ತಿಯ ಕಾರ್ಖಾನೆಯಲ್ಲಿ 260ಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳು (ಪವರ್‌ಲೂಮ್) ಇವೆ. ದಿನವೊಂದಕ್ಕೆ 300ರಿಂದ 350 ಸೀರೆ ಅಷ್ಟೇ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ 800 ರಿಂದ ಒಂದು ಸಾವಿರ ಉದ್ಯೋಗಿಗಳು ಇದ್ದು, ಪ್ರತಿ ವರ್ಷ ಕನಿಷ್ಠ 10-15 ಮಂದಿ ಖಾಯಂ ನೌಕರರು ನಿವೃತ್ತರಾಗುತ್ತಿದ್ದಾರೆ. ಬೇಡಿಕೆಗೆ ತಕ್ಕಷ್ಟು ರೇಷ್ಮೆ ಸೀರೆಗಳನ್ನು ಉತ್ಪಾದಿಸಲು ಸಾಧ್ಯವಾಗದಿರಲು ಉದ್ಯೋಗಿಗಳ (ನೇಕಾರರ) ಕೊರತೆಯೇ ಕಾರಣವೆಂದು ಕೆಎಸ್‌ಐಸಿಎಲ್ ಮೂಲಗಳು ತಿಳಿಸಿವೆ.
ಹೊಸದಾಗಿ ಬರುತ್ತಿರುವ ನೌಕರರಿಗೆ ಸರಿಯಾದ ತರಬೇತಿ ನೀಡಲು ಕನಿಷ್ಠ ಮೂರರಿಂದ ಆರು ತಿಂಗಳ ಕಾಲಾವಧಿ ಬೇಕಾಗುತ್ತಿದೆ. ಕೆಲವರು ಮೊದಲೇ ಸಿಲ್ಕ್ ಸೆಂಟರ್‌ನಿಂದ ತರಬೇತಿ ಪಡೆದು ಬಂದಿದ್ದರೂ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಬೇಕಿದೆ. ಕೆಎಸ್‌ಐಸಿಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಗುಣಮಟ್ಟದ ವಿಚಾರದಲ್ಲಿ ಯಾವುದೇ ಮುಲಾಜು ಇಲ್ಲ. ಸದ್ಯ ಉತ್ಪಾದನೆ ಕಡಿಮೆಯಿದ್ದರೂ ವಿನ್ಯಾಸ, ಗುಣಮಟ್ಟದ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನರಸೀಪುರದಲ್ಲಿ ರೀಲಿಂಗ್ ಫ್ಯಾಕ್ಟರಿ (ರೇಷ್ಮೆ ಗೂಡಿನಿಂದ ದಾರ ತೆಗೆಯುವ ಫ್ಯಾಕ್ಟರಿ), ಚನ್ನಪಟ್ಟಣ ಮತ್ತು ಮೈಸೂರಿನ ಫ್ಯಾಕ್ಟರಿ ಸೇರಿ ಅಂದಾಜು 260 ಮಗ್ಗಗಳು ಇವೆ. ಸಂಸ್ಥೆಯಲ್ಲಿ ನಿವೃತ್ತರಾಗುತ್ತಿರುವ ಉದ್ಯೋಗಿಗಳ ಸ್ಥಾನಕ್ಕೆ ಹೊಸಬರು ಬರುತ್ತಿದ್ದು ರೇಷ್ಮೆ ಸೀರೆ ನೇಯ್ಗೆಯ ತರಬೇತಿಯೂ ನಡೆಯುತ್ತಿದೆ. ಕೆಎಸ್‌ಐಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಜೆಹರಾ ನಸೀಮ್ ಅವರು ಇರುವ 260 ಮಗ್ಗಗಳ ಸಂಖ್ಯೆಯನ್ನು ಹೆಚ್ಚಿಸಲು ಆದ್ಯತೆ ನೀಡಿದ್ದಾರೆ. ನರಸೀಪುರ ಘಟಕಕ್ಕೆ ಆಟೋಮೆಟಿಕ್ ರೀಲಿಂಗ್ ಮೆಷಿನ ಕೂಡ ತರಿಸುತ್ತಿದ್ದಾರೆ. ಹೀಗೆ ಹಂತ, ಹಂತವಾಗಿ ರೇಷ್ಮೆ ಸೀರೆ ಉತ್ಪಾದನೆಯ ಪ್ರಮಾಣ ಹೆಚ್ಚಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕೆಎಸ್ಐಸಿಎಲ್ ಉತ್ಪಾದಿಸುವ ಮೈಸೂರು ಸಿಲ್ಕ್ ಸೀರೆಗಳ ದರ ₹19 ಸಾವಿರದಿಂದ ಆರಂಭಗೊಂಡು ₹3.50 ಲಕ್ಷವರೆಗೂ ಇದೆ. ಈ ಎಲ್ಲ ದರದ ರೇಷ್ಮೆ ಸೀರೆಗಳಿಗೂ ಬೇಡಿಕೆ ಹೆಚ್ಚಾಗಿಯೇ ಇದೆ. ಅದರಲ್ಲಿ 20 ರಿಂದ 35 ಸಾವಿರ ರು.ಗಳವರೆಗಿನ ಸೀರೆಗಳಿಗೆ ಅತೀ ಹೆಚ್ಚು ಬೇಡಿಕೆ ಇದೆ. ಹಬ್ಬ ಹರಿದಿನಗಳು ಮಾತ್ರವಲ್ಲ ಯಾವಾಗಲೂ ಈ ಮೈಸೂರು ಸಿಲ್ಕ್ ಸೀರೆಗಳಿಗೆ ಸರತಿ ಸಾಲಿನಲ್ಲಿ ನಿಂತು ಖರೀದಿಸುವಷ್ಟು ಬೇಡಿಕೆ ಇದೆ.
ಗುಣಮಟ್ಟದ ಮೈಸೂರು ಸಿಲ್ಕ್ ಸೀರೆಗಳು ಸಿಗುತ್ತವೆ ಎಂಬ ನಂಬಿಕೆಯಿಂದ ಮಳಿಗೆಗಳಿಗೆ ಬರುತ್ತೇವೆ. ಆದರೆ, ಇಲ್ಲಿ ಸಾಲಿನಲ್ಲಿ ನಿಂತು ಕಾದರೂ ಸೀರೆ ಸಿಗುತ್ತಿಲ್ಲ.
- ಎಚ್.ಎಸ್.ಧನಲಕ್ಷ್ಮಿ, ಗ್ರಾಹಕರು.
ಸೀರೆಗಳು ಅಲಭ್ಯ!
ಬೆಂಗಳೂರಿನ ಗಾಂಧಿಬಜಾರ್, ಡಿವಿಜಿ ರಸ್ತೆ, ಮಲ್ಲೇಶ್ವರ, ಬಸವೇಶ್ವರ ನಗರ, ಎಂ.ಜಿ.ರಸ್ತೆ, ಕೆ.ಜಿ.ರಸ್ತೆಯಲ್ಲಿ ಇರುವ ಮಳಿಗೆಗಳಲ್ಲಿ ಸೀರೆಗಳೇ ಬರುತ್ತಿಲ್ಲ. ವಾರಕ್ಕೊಮ್ಮೆ ಒಂದು ಬಾರಿ ಮಾತ್ರ ಸೀರೆಗಳು ಬರುತ್ತವೆ. ಸೀರೆ ಆಯ್ಕೆ ಮಾಡಿಕೊಳ್ಳಲು ಅವಕಾಶವೇ ಇರುವುದಿಲ್ಲ. ಸಿಕ್ಕದ್ದನ್ನು ತೆಗೆದುಕೊಳ್ಳಬೇಕೆಂದು ಮಳಿಗೆ ಸಿಬ್ಬಂದಿ ಒತ್ತಡ ಹೇರುತ್ತಾರೆ ಎಂಬುದು ಕೆಲವು ಗ್ರಾಹಕರ ಆರೋಪ.