ಬೆಂಗಳೂರು : ದೆಹಲಿ ಮೆಟ್ರೋದಂತೆ ಅನೈತಿಕ ಚಟುವಟಿಕೆ, ಅಪಾಯದ ಘಟನೆಗಳು ‘ನಮ್ಮ ಮೆಟ್ರೋ’ದಲ್ಲೂ ಘಟಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಣ್ಗಾವಲಿಗೆ ಇನ್ನಷ್ಟು ಒತ್ತು ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ನಿಲ್ದಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾ ಅಳವಡಿಸಿದೆ.
ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ಮತ್ತು ಎಂ.ಜಿ.ರಸ್ತೆಯ ನಡುವಿನ 6 ಮೆಟ್ರೋ ನಿಲ್ದಾಣಗಳಲ್ಲಿ ಈ ಅತ್ಯಾಧುನಿಕ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗಿದೆ. ಇದು ನಿಲ್ದಾಣದ ಒಳಗಿನ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳ ಮೇಲೂ ನಿಗಾ ವಹಿಸಲಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್’ (ಎಎನ್‌ಪಿಆರ್) ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಜತೆಗೆ ಎಐ ಆಧಾರಿತ ವಿಡಿಯೋ ವಿಶ್ಲೇಷಣೆಯೊಂದಿಗೆ, ಈ ತಂತ್ರಜ್ಞಾನ ಶಂಕಾಸ್ಪದ ಚಟುವಟಿಕೆ, ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಿದೆ.
ಈಚೆಗೆ ನಮ್ಮ ಮೆಟ್ರೋದಲ್ಲಿ ಲೈಂಗಿಕ ದೌರ್ಜನ್ಯ, ಸಹ ಪ್ರಯಾಣಿಕರು ತಲೆ ತಗ್ಗಿಸುವಂತ ಅನೈತಿಕ ವರ್ತನೆ, ಆತ್ಮಹತ್ಯೆ ಯತ್ನ ಸೇರಿ ಇನ್ನಿತರ ಘಟನೆಗಳು ನಡೆದಿದ್ದವು. ಇಂತಹದನ್ನು ಕಡಿವಾಣ ಹಾಕಲೂ ಇದರಿಂದ ಸಾಧ್ಯವಾಗಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಮೆಟ್ರೋ ದಿನದ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಮನಗಂಡು ಬಿಎಂಆರ್‌ಸಿಎಲ್ ಈ ಕ್ರಮ ವಹಿಸಿದೆ.
ಪ್ರಯಾಣಿಕರ ಭದ್ರತೆಗೆ ಬದ್ಧ: ಮಹೇಶ್ವರ ರಾವ್
ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರು, ‘ಪ್ರಯಾಣಿಕರ ಭದ್ರತೆಗಾಗಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲು ಸಂಸ್ಥೆ ಬದ್ಧವಾಗಿದೆ. ಬೆಂಗಳೂರು ಮೆಟ್ರೋ ವ್ಯಾಪ್ತಿ, ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ, ಬಿಎಂಆರ್‌ಸಿಎಲ್ ಸ್ಮಾರ್ಟ್ ನಿಗಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಿದರು.