ಸಬರ್ಬನ್‌ ರೈಲು : ಮಲ್ಲಿಗೆ ಮಾರ್ಗ ಕೆಲಸ ಬಂದ್‌!

KannadaprabhaNewsNetwork |  
Published : May 09, 2025, 03:01 AM ISTUpdated : May 09, 2025, 03:45 AM IST
BSRP 5 | Kannada Prabha

ಸಾರಾಂಶ

ಭೂ ಹಸ್ತಾಂತರದಲ್ಲಿ ವಿಳಂಬದಿಂದಾಗಿ ನಗರದಲಲ್ಲಿ ಸಬರ್ಬನ್‌ ರೈಲು ಯೋಜನೆಯ ಮಲ್ಲಿಗೆ ಮಾರ್ಗ ಕಾಮಗಾರಿ ನಿಂತು ಹೋಗಿದೆ.

ಮಯೂರ್‌ ಹೆಗಡೆ

 ಬೆಂಗಳೂರು : ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಆರ್‌ಪಿ) ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ 2ನೇ ಕಾರಿಡಾರ್‌ ‘ಮಲ್ಲಿಗೆ’ ಮಾರ್ಗದ ಕಾಮಗಾರಿ ಸ್ಥಗಿತವಾಗಿದೆ. ಭೂಮಿ ಹಸ್ತಾಂತರ ಆಗದ ಕಾರಣ ಕಾಮಗಾರಿ ಗುತ್ತಿಗೆ ಪಡೆದ ಎಲ್‌ ಆ್ಯಂಡ್‌ ಟಿ ಕಂಪನಿ ಕೈಕಟ್ಟಿದೆ. ಇದರಿಂದ ಒಟ್ಟಾರೆ ಯೋಜನೆ ವಿಳಂಬವಾಗುವ ಎಲ್ಲ ಸಾಧ್ಯತೆಗಳಿವೆ.

ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಅನುಷ್ಠಾನ ಮಾಡುತ್ತಿರುವ ಬಿಎಸ್‌ಆರ್‌ಪಿ ಯೋಜನೆಯ ಒಟ್ಟಾರೆ 4 ಕಾರಿಡಾರ್‌ ಪೈಕಿ ಮೊದಲು ಆರಂಭವಾಗಿದ್ದ ಮಲ್ಲಿಗೆ ಮಾರ್ಗದ ಕಾಮಗಾರಿ ಸ್ಥಳಗಳು ಈಗ ಬಿಕೋ ಎನ್ನುತ್ತಿವೆ. ಕೆಲಸವಿಲ್ಲದೆ ಬಂದ್‌ ಆಗಿರುವ ಮಷಿನ್‌, ಅಷ್ಟಿಷ್ಟು ಕೆಲಸದ ಬಳಿಕ ಪೇರಿಸಿಟ್ಟ ಪರಿಕರಗಳು ಕಂಡುಬರುತ್ತಿವೆ. ಕಾರ್ಮಿಕರ ಚಟುವಟಿಕೆ ಅಕ್ಷರಶಃ ನಿಂತಿದೆ.

ಯಶವಂತಪುರ ಕೋಚ್‌ ಯಾರ್ಡ್‌ ಪಕ್ಕದಲ್ಲಿ ಬಿಎಸ್‌ಆರ್‌ಪಿಯ 208-210ರವರೆಗಿನ ಪಿಲ್ಲರ್‌ ಮೇಲಿಟ್ಟಿರುವ 2 ವಯಡಕ್ಟ್‌ ಬಿಟ್ಟರೆ ಒಂದಿಷ್ಟು ಅರ್ಧ ನಿರ್ಮಾಣವಾದ ಪಿಲ್ಲರ್‌ಗಳು ಕಾಣುತ್ತವೆ. ಹೆಬ್ಬಾಳ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಾಣ ಹಂತದಲ್ಲಿರುವ ಬಿಎಸ್‌ಆರ್‌ಪಿಯ ಪಿಲ್ಲರ್‌, ಪಿಯರ್‌ ಕ್ಯಾಪ್‌ ಅಳವಡಿಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಮುಂದುವರಿದರೆ ಕನಕನಗರ, ಲಿಂಗರಾಜಪುರದ ಉದ್ದಕ್ಕೂ ರೈಲ್ವೆ ಹಳಿ ಪಕ್ಕದಲ್ಲಿ ಭೂಮಿ ಸಮತಟ್ಟುಪಡಿಸುವ ಕೆಲಸವಾಗಿದೆ. ಅಲ್ಲಲ್ಲಿ ರಿಟೇನಿಂಗ್‌ ವಾಲ್‌, ಕಿರುಗಾಲುವೆ ನಿರ್ಮಿಸಿ ಅರ್ಧಕ್ಕೆ ಬಿಡಲಾಗಿದೆ. ಲೇವಲ್‌ ಕ್ರಾಸಿಂಗ್‌ ತಪ್ಪಿಸಲು ಹಳಿಯನ್ನೇ ಎತ್ತರಿಸುವ ಯೋಜನೆಯ ಭಾಗವಾಗಿದ್ದ ಶ್ಯಾಮ್‌ಪುರ ರೈಲ್ವೇ ಮೇಲ್ಸೇತುವೆ ಕೆಲಸ ಸ್ಥಗಿತಗೊಂಡು ತಿಂಗಳು ಕಳೆದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

2022ರ ಆಗಷ್ಟ್‌ನಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಗೆ ₹859.97 ಕೋಟಿ ಮೊತ್ತದ ಈ ಕಾಮಗಾರಿ ವಹಿಸಿ 27ತಿಂಗಳಲ್ಲಿ ಅಂದರೆ 2025ರ ಆಗಷ್ಟ್‌ನಲ್ಲೇ ಕಾಮಗಾರಿ ಮುಗಿಸುವ ಷರತ್ತು ವಿಧಿಸಲಾಗಿತ್ತು. ಆದರೆ, ಭೂಸ್ವಾಧೀನ ವಿಳಂಬದಿಂದ 2023ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. ಕಳೆದ ವರ್ಷ ಡೆಡ್‌ಲೈನ್‌ನ್ನು 2026ಕ್ಕೆ ವಿಸ್ತರಿಸಲಾಗಿದೆ. ಆದರೆ, ಕೆಲಸ ಸ್ಥಗಿತಗೊಂಡಿರುವುದರಿಂದ ಈ ಅವಧಿಯಲ್ಲಿ ಕೆಲಸ ಮುಗಿಯಲ್ಲ ಎಂದು ಸಾರಿಗೆ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ-ರಾಜ್ಯ ಹಗ್ಗಜಗ್ಗಾಟ:

ಕೇಂದ್ರ - ರಾಜ್ಯ ಸರ್ಕಾರದ ನಡುವೆ ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ವಿಚಾರದಲ್ಲೂ ಹೊಂದಾಣಿಕೆ ಇಲ್ಲ. ರೈಲ್ವೆ ಬೋರ್ಡ್‌ನಿಂದ ಎಂಡಿ ನೇಮಿಸುತ್ತೇವೆ ಎಂದು ಕೇಂದ್ರ, ರಾಜ್ಯದಿಂದ ಐಎಎಸ್‌ ಅಧಿಕಾರಿ ನೇಮಿಸಿದ್ದೇವೆ ಎಂದು ರಾಜ್ಯ ಸರ್ಕಾರದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಜತೆಗೆ 2ನೇ ಹಂತದಲ್ಲಿ ಬಿಎಸ್‌ಆರ್‌ಪಿ ವಿಸ್ತರಿಸುವ ರಾಜ್ಯದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಇದಕ್ಕೆ ತಡೆಯೊಡ್ಡಿತ್ತು.

ಕೆ-ರೈಡ್‌ ಭೂಮಿ ಹಸ್ತಾಂತರ  ಮಾಡಿಲ್ಲ: ಎಲ್‌ ಆ್ಯಂಡ್‌ ಟಿ

ಮಲ್ಲಿಗೆ ಮಾರ್ಗಕ್ಕೆ ರೈಲ್ವೆ ಇಲಾಖೆಯಿಂದ 98.34 ಎಕರೆ ಪಡೆಯಲಾಗಿದೆ. ಇದು ಸೇರಿ ರಕ್ಷಣಾ ಇಲಾಖೆ, ಖಾಸಗಿ ಮತ್ತು ಸರ್ಕಾರಿ ಜಾಗ ಸೇರಿ ಒಟ್ಟಾರೆ 120.44 ಎಕರೆ ಅಗತ್ಯವಿತ್ತು ಎಂದು ಕೆ-ರೈಡ್‌ ತಿಳಿಸಿತ್ತು. 119.18 ಎಕರೆ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಹಿಂದೆ ಕೆ-ರೈಡ್‌ ತಿಳಿಸಿತ್ತು. ಆದರೆ, ‘ಕನ್ನಡಪ್ರಭ’ಕ್ಕೆ ಎಲ್‌ ಆ್ಯಂಡ್‌ ಟಿ ಎಂಜಿನಿಯರ್‌ ಒಬ್ಬರು ಪ್ರತಿಕ್ರಿಯಿಸಿ, ಕೆ-ರೈಡ್‌ನಿಂದ ಈವರೆಗೆ ನಮಗೆ ಭೂಮಿ ಹಸ್ತಾಂತರ ಪೂರ್ಣಗೊಂಡಿಲ್ಲ. ಪರಿಣಾಮ ಕೆಲಸ ನಿಲ್ಲುವಂತಾಗಿದೆ. ಶೇ.100ರಷ್ಟು ಭೂಮಿ ಹಸ್ತಾಂತರ ಆಗದೆ ಕೆಲಸ ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು. ಆರಂಭಿಕ ಹಂತದಲ್ಲಿ ನೈಋತ್ಯ ರೈಲ್ವೆ ಭೂಮಿಯನ್ನು ಕೆ-ರೈಡ್‌ಗೆ ಹಸ್ತಾಂತರ ಮಾಡುವುದು ವಿಳಂಬವಾಗಿತ್ತು. ಇದೀಗ ಖಾಸಗಿ ಜಾಗ ಸ್ವಾಧೀನ, ಹಸ್ತಾಂತರ ಬಾಕಿ ಇದೆ ಎಂದು ಕೆ-ರೈಡ್‌ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದಲ್ಲದೆ, ಕೆ-ರೈಡ್‌ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಯೋಜನೆ ವಿಳಂಬ

ಕೆಎಸ್‌ಆರ್‌-ದೇವನಹಳ್ಳಿ ಸಂಪಿಗೆ ಮಾರ್ಗ ( 41.40ಕಿಮೀ), ಕೆಂಗೇರಿ - ವೈಟ್‌ಫೀಲ್ಡ್‌ ಪಾರಿಜಾತ ಮಾರ್ಗ ( 35.52ಕಿಮೀ), ಹೀಲಲಿಗೆ- ರಾಜಾನುಕುಂಟೆ ಕನಕ ಮಾರ್ಗ (46.24 ಕಿಮೀ) ಸೇರಿ ಒಟ್ಟಾರೆ ಪ್ರಥಮ ಹಂತದ 148.17ಕಿಮೀ ಉದ್ದದ ಬಿಎಸ್‌ಆರ್‌ಪಿ ₹15,767 ಕೋಟಿ ಮೊತ್ತದ ಯೋಜನೆ. ರೈಲ್ವೆಯ 327 ಎಕರೆ, ಸರ್ಕಾರಿ 153 ಎಕರೆ, ಖಾಸಗಿ 101.68 ಎಕರೆ ಸೇರಿ ಒಟ್ಟಾರೆ 582 ಎಕರೆ ಜಾಗ ಬೇಕಿದೆ. ಆದರೆ, ಈಗ ಆರಂಭಿಕ ಹಂತದ ಯೋಜನೆ ಅನುಷ್ಠಾನದಲ್ಲೇ ಭೂಸ್ವಾಧೀನ ಸಮಸ್ಯೆ ಕಾಡುತ್ತಿದೆ. ಒಟ್ಟಾರೆ ಪ್ರತಿಕ್ರಿಯೆಗೆ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.ಉಪನಗರ ರೈಲ್ವೆ ಯೋಜನೆ ಮಲ್ಲಿಗೆ ಮಾರ್ಗದ ಕಾಮಗಾರಿ ಸ್ಥಗಿತಗೊಂಡಿದ್ದು ಗಮನಕ್ಕಿದೆ. ಹೀಗೆ ಆದರೆ ಇದರಿಂದ ಒಟ್ಟಾರೆ ಯೋಜನೆ ಪೂರ್ಣಗೊಳ್ಳುವುದು, ಯೋಜನಾ ವೆಚ್ಚ ಅಧಿಕವಾಗುತ್ತದೆ.-ರಾಜ್‌ಕುಮಾರ್‌ ದುಗರ್‌, ಸಾರಿಗೆ ತಜ್ಞ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ