ಎಐ ನಮ್ಮ ಸಹಾಯಕನೇ ಹೊರತು ಯಜಮಾನನಲ್ಲ: ವರ್ಷ

KannadaprabhaNewsNetwork |  
Published : Sep 22, 2026, 01:30 AM IST
೨೧ಕೆಎಂಎನ್‌ಡಿ-೧ಕೆ.ಆರ್.ಪೇಟೆ ತಾಲೂಕು ಗವಿಮಠದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನ ಕುರಿತ ಕಾರ್ಯಾಗಾರದಲ್ಲಿ ವರ್ಷ ಎಂ.ಗೌಡ ಎಐ ತಂತ್ರಜ್ಞಾನ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. | Kannada Prabha

ಸಾರಾಂಶ

ಆಧುನಿಕ ಕಾಲಘಟ್ಟದಲ್ಲಿ ಎಐ ತಂತ್ರಜ್ಞಾನ ಅತ್ಯವಶ್ಯಕ. ಆದರೆ, ನಾವು ನಮ್ಮ ಬುದ್ದಿಚಾತುರ್ಯ, ಕ್ರಿಯಾಶೀಲತೆಯನ್ನು ಬದಿಗಿಟ್ಟು ಎಐ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದು. ಎಐ ನಮ್ಮ ಸಹಾಯಕನೇ ಹೊರತು ನಮ್ಮ ಯಜಮಾನನಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆಧುನಿಕ ಕಾಲಘಟ್ಟದಲ್ಲಿ ಎಐ ತಂತ್ರಜ್ಞಾನ ಅತ್ಯವಶ್ಯಕ. ಆದರೆ, ನಾವು ನಮ್ಮ ಬುದ್ದಿಚಾತುರ್ಯ, ಕ್ರಿಯಾಶೀಲತೆಯನ್ನು ಬದಿಗಿಟ್ಟು ಎಐ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದು. ಎಐ ನಮ್ಮ ಸಹಾಯಕನೇ ಹೊರತು ನಮ್ಮ ಯಜಮಾನನಲ್ಲ ಎಂದು ಶಾಸಕ ಎಚ್.ಟಿ.ಮಂಜು ಅವರ ಪುತ್ರಿ ಎಂಜಿನಿಯರಿಂಗ್ ಪದವೀಧರೆ ವರ್ಷ ಎಂ.ಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಗವೀಮಠದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನ ಕುರಿತ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ಎಐ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಶಿಕ್ಷಣ ಕ್ಷೇತ್ರದಲ್ಲಿ ಎಐನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದ ವರ್ಷ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಹೊಂದುವುದು ಅಗತ್ಯ. ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಇಂದು ಮನುಷ್ಯ ಚಂದ್ರನ ಮೇಲೆ ಹೋಗಿದ್ದಾನೆ. ಮಂಗಳ ಗ್ರಹಕ್ಕೂ ಲಗ್ಗೆಯಿಡಲಾಗುತ್ತಿದೆ. ಆದರೆ, ಇಂದು ನಮ್ಮ ಅಂಗೈಯಲ್ಲಿರುವ ಮೊಬೈಲ್‌ನಲ್ಲೆ ಸಮಸ್ತ ಜಗತ್ತನ್ನು ತಿಳಿದುಕೊಳ್ಳುವ ಶಕ್ತಿ ಬಂದಿದೆ. ಇದಕ್ಕೆ ಬಹುಮುಖ್ಯ ಕಾರಣ ಕೃತಕ ಬುದ್ದಿಮತ್ತೆ (ಎಐ). ಎಐ ಆಧುನಿಕ ಯುಗದಲ್ಲಿ ಆಗಿರುವ ಬಹುದೊಡ್ಡ ಬೌದ್ದಿಕ ಕ್ರಾಂತಿ. ಶಿಲಾಯುಗದಲ್ಲಿ ಮನುಷ್ಯ ಕಲ್ಲು ಬಳಕೆ ಮಾಡಿದ. ಅನಂತರ ಕಬ್ಬಿಣ ಮತ್ತು ಬೆಂಕಿಯ ಬಳಕೆ ಮಾಡುವುದನ್ನು ಕಂಡುಕೊಂಡ. ಇಂದು ನಾವು ಕೃತಕ ಬುದ್ದಿಮತ್ತೆ ಯುಗಕ್ಕೆ ಬಂದಿದ್ದೇವೆ. ತಂತ್ರಜ್ಞಾನ ಕೆಟ್ಟದ್ದಲ್ಲ. ಆದರೆ ಅದನ್ನು ಬಳಸುವ ಉದ್ದೇಶ ಮುಖ್ಯ ಎಂದರು.

ತಂತ್ರಜ್ಞಾನದೊಂದಿಗೆ ಕನ್ನಡವನ್ನು ಮತ್ತು ಕನ್ನಡದೊಂದಿಗೆ ತಂತ್ರಜ್ಞಾನವನ್ನೂ ಬೆಳೆಸೋಣ. ಎಐ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳದೆ ಭಾಷೆಯ ಬೆಳವಣಿಗೆ ವಿದ್ಯಾರ್ಥಿಗಳು, ರೈತರು, ಉದ್ಯಮಶೀಲರು ಹಾಗೂ ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಲು ಸದುಪಯೋಗಮಾಡಿಕೊಳ್ಳೋಣ ಎಂದರು.

ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿ ಎಐ ಕುರಿತ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡ್ಡಾಯ..ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಕೆಯಲ್ಲಿ ರಾಜ್ಯ ಹಿಂದೆ: ಡಾ.ಧನಂಜಯ ಸರ್ಜಿ
ನವೀನ ಮಾದರಿಯ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ: ಡಾ. ತುಷಾರ್ ಕಾಂತಿ ಬೆಹರಾ