ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಎಐ ಆಧಾರಿತ ಸ್ವಯಂಚಾಲಿತ ರೋಬೋಟ್‌ಗಳು'''''''' ಕುರಿತು ವಿಶೇಷ ತಾಂತ್ರಿಕ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಚಿನ್ ಗೋಟಾ ಅವರು, ಮುಂದಿನ ಪೀಳಿಗೆ ಸ್ವಯಂಚಾಲಿತ ರೋಬೋಟಿಕ್ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಆಗುವ ಬದಲಾವಣೆ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ರೋಬೋಟ್‌ಗಳು ಮಾನವನಿಗೆ ಸಹಾಯ ಮಾಡುವ ಸಾಧನಗಳಾಗಿದ್ದು, ನೀಡಲಾದ ಸೂಚನೆಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ನಿರಂತರವಾಗಿ ಹಾಗೂ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ರೋಬೋಟ್‌ಗಳ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಾಗಿದೆ ಎಂದರು.ರೋಬೋಟಿಕ್ಸ್ ತಂತ್ರಜ್ಞಾನವು ಕಳೆದ ಹಲವು ದಶಕಗಳಿಂದ ಮಹತ್ತರ ಬದಲಾವಣೆ ಕಾಣುತ್ತಿದ್ದು, 1961 ರಿಂದ 2021 ರವರೆಗಿನ ರೋಬೋಟ್‌ಗಳ ಬೆಳವಣಿಗೆ ಆಧುನಿಕ ತಂತ್ರಜ್ಞಾನಕ್ಕೆ ಹೊಸ ದಿಕ್ಕು ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ರೋಬೋಟ್‌ಗಳ ಬಳಕೆ ವೈದ್ಯಕೀಯ ಸಿಬ್ಬಂದಿ ಕೆಲಸದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ರೋಗಿಗಳ ಆರೈಕೆ ಸುಧಾರಿಸಲು ಸಹಕಾರಿಯಾಗಿದೆ. ದೇಹದ ತಪಾಸಣೆ, ರೋಗಿಗಳ ಸೇವೆ ಹಾಗೂ ವಿವಿಧ ವೈದ್ಯಕೀಯ ಕಾರ್ಯಗಳಲ್ಲಿ ರೋಬೋಟ್ ತಂತ್ರಜ್ಞಾನ ಬಳಕೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ರೋಬೋಟ್ ತಂತ್ರಜ್ಞಾನಗಳು ಮಾನವನ ಕೆಲಸವನ್ನು ಸುಲಭಗೊಳಿಸುವುದರ ಜೊತೆಗೆ ಕೈಗಾರಿಕೆ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿವೆ. ವಿದ್ಯಾರ್ಥಿಗಳು ಇಂತಹ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.