ಧಾರವಾಡ ಕೃಷಿ ಮೇಳದಲ್ಲಿ ಎಐ ತಂತ್ರಜ್ಞಾನಗಳ ಆಕರ್ಷಣೆ!

KannadaprabhaNewsNetwork |  
Published : Sep 28, 2026, 01:45 AM IST
ಧಾರವಾಡದ ಕೃಷಿ ಮೇಳದ ಒಂದು ಎಕರೆ ಪ್ರದೇಶದಲ್ಲಿ ಪ್ರತ್ಯೇಕವಾಗಿ ಸ್ಮಾರ್ಟ್‌ ಫಾರ್ಮಿಂಗ್‌ ಪ್ರದರ್ಶನ | Kannada Prabha

ಸಾರಾಂಶ

ಮೇಳದಲ್ಲಿ ಆಧುನಿಕ ಕೃಷಿಗೆ ಪೂರಕ ನವೀನ ತಂತ್ರಜ್ಞಾನಗಳು ಮತ್ತು ಪರಿಹಾರಗಳು ಸೇರಿದಂತೆ 17ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಪ್ರದರ್ಶಿಸುತ್ತಿವೆ.

ಬಸವರಾಜ ಹಿರೇಮಠ

ಧಾರವಾಡ: ಸಾಂಪ್ರದಾಯಿಕ ಕೃಷಿಯಿಂದ ಯಾಂತ್ರೀಕರಣದತ್ತ ಸಾಗುತ್ತಿರುವ ಕೃಷಿ ಕ್ಷೇತ್ರವು ಇದೀಗ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಬಹುತೇಕ ಅಳವಡಿಸಿಕೊಳ್ಳುತ್ತಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸ್ಮಾರ್ಟ್‌ ಫಾರ್ಮಿಂಗ್‌ ಸಿದ್ಧಪಡಿಸಿದ್ದು, ಅಲ್ಲಿ ಪ್ರದರ್ಶಿಸಿರುವ ನವೀನ ತಂತ್ರಜ್ಞಾನಗಳು ವಿಶೇಷವಾಗಿ ಯುವ ರೈತರ ಗಮನ ಸೆಳೆಯುತ್ತಿವೆ.

ಮೇಳದಲ್ಲಿ ಆಧುನಿಕ ಕೃಷಿಗೆ ಪೂರಕ ನವೀನ ತಂತ್ರಜ್ಞಾನಗಳು ಮತ್ತು ಪರಿಹಾರಗಳು ಸೇರಿದಂತೆ 17ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಪ್ರದರ್ಶಿಸುತ್ತಿವೆ. ಇವುಗಳಲ್ಲಿ ಎಜಿಕೇನ್‌ ಸೈನ್ಸಸ್‌ ಮತ್ತು ಸರ್ವೀಸಸ್‌ ಅಭಿವೃದ್ಧಿಪಡಿಸಿರುವ ‘ಕ್ರಾಪ್‌ಸ್ಕ್ಯಾನ್’ ಆ್ಯಪ್ ಪ್ರಮುಖ ಆಕರ್ಷಣೆ. ಈ ಆ್ಯಪ್ ಬೆಳೆಗಳ ಆರೋಗ್ಯ ಪರಿಶೀಲಿಸುವುದರ ಜೊತೆಗೆ ಕೀಟ ಹಾಗೂ ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ರೈತರಿಗೆ ಸಲಹೆ ನೀಡುತ್ತದೆ. ಹವಾಮಾನ ಪರಿಸ್ಥಿತಿ, ಬೆಳೆ ಪಕ್ವತೆ ಹಾಗೂ ಕೊಯ್ಲಿಗೆ ಸೂಕ್ತ ಸಮಯದ ಬಗ್ಗೆಯೂ ಮಾಹಿತಿ ಒದಗಿಸುತ್ತದೆ.

ಆರಂಭದಲ್ಲೇ ಎಚ್ಚರಿಕೆ: ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಕ್ಷೇತ್ರ ಮಾರ್ಗದರ್ಶಕ ವೀರೇಶ, ಕೀಟಗಳ ಬಾಧೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಾಗೂ ಮಣ್ಣಿನ ಆರೋಗ್ಯ ಕುಸಿತದಿಂದಾಗಿ ಸುಮಾರು 25 ರಿಂದ 30ರಷ್ಟು ಬೆಳೆ ನಷ್ಟ ಉಂಟಾಗುತ್ತಿದೆ. ಈ ಆ್ಯಪ್ ಬೆಳೆಗಳ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದರಿಂದ ಕೀಟ ನಿರ್ವಹಣೆ ಹಾಗೂ ಪೋಷಕಾಂಶಗಳ ಬಳಕೆ ಸೇರಿದಂತೆ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಬಹುದು ಎಂದರು.

ಬಣ್ಣದ ಸಂಕೇತ: ಈ ಆ್ಯಪ್ ಉಪಗ್ರಹ ಆಧಾರಿತ ಬೆಳೆ ಮಾಹಿತಿಯನ್ನು ಪ್ರತಿ 10 ದಿನಗಳಿಗೊಮ್ಮೆ ಬಣ್ಣದ ಸಂಕೇತಗಳ ಮೂಲಕ ಒದಗಿಸುತ್ತದೆ. ಬೆಳೆ ಆರೋಗ್ಯ, ನೀರಾವರಿ ಹಾಗೂ ಹವಾಮಾನ ಮುನ್ಸೂಚನೆಗಳನ್ನು ದೃಶ್ಯ ರೂಪದಲ್ಲಿ ನೀಡುವುದರಿಂದ, ಸಾಕ್ಷರತೆಯ ಮಟ್ಟವನ್ನು ಲೆಕ್ಕಿಸದೆ ರೈತರು ಸುಲಭವಾಗಿ ಬಳಸಬಹುದಾಗಿದೆ. ಇದುವರೆಗೆ 4,000ಕ್ಕೂ ಹೆಚ್ಚು ರೈತರು ಈ ಸೌಲಭ್ಯವನ್ನು ಬಳಸಿದ್ದಾರೆ. ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಆ್ಯಪ್‌ನ್ನು ಪರಿಚಯಿಸಲಾಗಿದೆ ಎಂದರು.

ಉಪಗ್ರಹ ಚಿತ್ರಗಳಲ್ಲಿ ಬೆಳೆ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡರೆ ಅದು ಆರೋಗ್ಯಕರವಾಗಿ ಬೆಳೆಯುತ್ತಿದೆ ಎಂದರ್ಥ. ಹಳದಿ ಮಿಶ್ರಿತ ಹಸಿರು ಬಣ್ಣವು ರೋಗ ಅಥವಾ ಒತ್ತಡದ ಆರಂಭಿಕ ಹಂತವನ್ನು ಸೂಚಿಸುತ್ತದೆ. ಕೆಂಪು ಬಣ್ಣವು ತೀವ್ರ ಕೀಟಬಾಧೆ, ಬೆಳೆ ಹಾನಿ ಅಥವಾ ತೇವಾಂಶದ ಕೊರತೆ ಸೂಚಿಸುತ್ತದೆ. ವರದಿ ಅಪ್‌ಲೋಡ್ ಮಾಡಿದ ಬಳಿಕ ಕೃಷಿ ವಿಜ್ಞಾನಿಗಳು ಸಮಸ್ಯೆಯನ್ನು ಪತ್ತೆ ಹಚ್ಚಿ, ಬೆಳೆ ಉಳಿಸಲು ರೈತರಿಗೆ ಸೂಕ್ತ ಸಮಯದಲ್ಲಿ ಸಲಹೆ ನೀಡುತ್ತಾರೆ ಎಂದು ವೀರೇಶ ವಿವರಿಸಿದರು.

ಸಂಚಾರಿ ಮಣ್ಣು ಪ್ರಯೋಗಾಲಯ: ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಆರ್ಕಶೈನ್‌ ಇನ್ನೋವೇಶನ್ಸ್‌ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ, ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗಾಲಯ. ಬೆನ್ನಿಗೆ ಹೊತ್ತುಕೊಂಡು ಹೋಗಬಹುದಾದ ಈ ಸಾಧನದ ಮೂಲಕ ಹೊಲದಲ್ಲಿಯೇ ನೇರವಾಗಿ ತಕ್ಷಣ ಮಣ್ಣು ಪರೀಕ್ಷೆ ನಡೆಸಬಹುದು. ಇದರಿಂದ ಮಣ್ಣಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶಕ್ಕಾಗಿ ಕಾಯುವ ಅಗತ್ಯವಿಲ್ಲ. ಇದು 14 ಅಂಶಗಳನ್ನು ಪರೀಕ್ಷಿಸುತ್ತದೆ. ಮಣ್ಣಿನ ಪಿಎಚ್, ವಿದ್ಯುತ್ ವಾಹಕತೆ (EC), ಸಾವಯವ ಇಂಗಾಲ (OC), ತೇವಾಂಶ, ಸಾರಜನಕ, ರಂಜಕ, ಪೊಟ್ಯಾಶಿಯಂ (NPK) ಸೇರಿದಂತೆ ಪ್ರಮುಖ ಪೋಷಕಾಂಶಗಳು ಹಾಗೂ ದ್ವಿತೀಯ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನೂ ಪರೀಕ್ಷಿಸುತ್ತದೆ. ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ಕೇವಲ 15 ನಿಮಿಷಗಳಲ್ಲಿ ವಿವರವಾದ ಮಣ್ಣಿನ ವಿಶ್ಲೇಷಣೆಯ ಜೊತೆಗೆ ಸೂಕ್ತ ಬೆಳೆ ಮತ್ತು ರಸಗೊಬ್ಬರ ಬಳಕೆಯ ಶಿಫಾರಸುಗಳನ್ನು ನೀಡುತ್ತದೆ.

ಹೈಡ್ರೋ ಮೇವು: ಇದೇ ವೇಳೆ, ಹೊಸದಾಗಿ ಪರಿಚಯಿಸಲಾದ ಹೈಡ್ರೋಪೋನಿಕ್ ಮೇವು ಬೆಳೆಯುವ ಚೇಂಬರ್ ಕೂಡ ಮೇಳಕ್ಕೆ ಆಗಮಿಸಿದವರ ಗಮನ ಸೆಳೆಯುತ್ತಿದೆ. ಮಣ್ಣು ರಹಿತ ಹಾಗೂ ಹವಾಮಾನ ನಿಯಂತ್ರಿತ ವ್ಯವಸ್ಥೆಯ ಮೂಲಕ ಮೆಕ್ಕೆಜೋಳ, ಬಾರ್ಲಿ ಅಥವಾ ಗೋಧಿಯಿಂದ ಕೇವಲ 7ರಿಂದ 8 ದಿನಗಳಲ್ಲಿ ತಾಜಾ ಮತ್ತು ಪೌಷ್ಟಿಕ ಹಸಿರು ಮೇವು ಉತ್ಪಾದಿಸಬಹುದಾಗಿದೆ ಎಂದು ಸಂಯೋಜಕಿ ದೀಪಾ ವಸ್ತ್ರದ ತಿಳಿಸಿದರು.

ಈ ವ್ಯವಸ್ಥೆಯಲ್ಲಿ ಒಂದು ವಾರದಲ್ಲೇ 30 ರಿಂದ 35 ಸೆಂ.ಮೀ. ಎತ್ತರದ ಹಸಿರು ಮೇವು ಬೆಳೆಯಬಹುದು. ಉತ್ತಮ ಗುಣಮಟ್ಟದ ಒಂದು ಕೆ.ಜಿ. ಮೆಕ್ಕೆಜೋಳದ ಬೀಜದಿಂದ 8 ರಿಂದ 10 ಕೆ.ಜಿ. ಪೌಷ್ಟಿಕ ಹಸಿರು ಮೇವು ಪಡೆಯಬಹುದಾಗಿದೆ. ಬರಪೀಡಿತ ಪ್ರದೇಶಗಳು ಹಾಗೂ ಸಣ್ಣ ರೈತರಿಗೆ ಈ ತಂತ್ರಜ್ಞಾನ ಹೆಚ್ಚು ಉಪಯುಕ್ತ. ಈ ಮೇವನ್ನು ಹಸು, ಮೇಕೆ, ಕುರಿ ಹಾಗೂ ಕೋಳಿಗಳಿಗೆ ಆಹಾರವಾಗಿ ಬಳಸಬಹುದಾಗಿದೆ. ಇದರಿಂದ ಹಾಲು ಮತ್ತು ಮೊಟ್ಟೆ ಉತ್ಪಾದನೆ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದರು.

ಇನ್ನು ಕೃಷಿ ಮೇಳದಲ್ಲಿ ಭಾಗವಹಿಸಿರುವ ಸ್ಟಾರ್ಟ್‌ಅಪ್‌ಗಳಿಗೆ ಭಾರತ ಸರ್ಕಾರದ ಆರ್‌ಕೆವಿವೈ ಯೋಜನೆ ಅಡಿ ಬೆಂಬಲ ನೀಡಲಾಗಿದೆ. ಕೃಷಿ ವಿವಿಯು ಇದುವರೆಗೆ 167 ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಿದೆ. ಇದರಲ್ಲಿ 32 ಮಹಿಳಾ ನೇತೃತ್ವದ ಹಾಗೂ ಎಂಟು ವಿದ್ಯಾರ್ಥಿ ಸ್ಟಾರ್ಟ್‌ಅಪ್‌ಗಳು ಸೇರಿವೆ. ಈ ಸ್ಟಾರ್ಟ್‌ಅಪ್‌ಗಳಿಗೆ ಒಟ್ಟು ರು. 16.76 ಕೋಟಿ ಅನುದಾನ ಶಿಫಾರಸು ಮಾಡಲಾಗಿದೆ. ಬೆಂಬಲ ಪಡೆದ ಸ್ಟಾರ್ಟ್‌ಅಪ್‌ಗಳು ರು. 158 ಕೋಟಿಗೂ ಅಧಿಕ ಆದಾಯ ಗಳಿಸಿದ್ದು, 11 ಲಕ್ಷ ರೈತರಿಗೆ ಪ್ರಯೋಜನ ತಲುಪಿಸಿವೆ. ಅಲ್ಲದೆ, 1,500ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿದ್ದು, 40 ಪೇಟೆಂಟ್‌ಗಳನ್ನು ಪಡೆದುಕೊಂಡಿವೆ ಎಂದು ದೀಪಾ ಪತ್ರಿಕೆಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರಿರಂಗನ್ ವರದಿಯ ಸಮಗ್ರ ಚರ್ಚೆಯಾಗಲಿ: ಮಾರುತಿ ಗುರೂಜಿ
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ