ಕನ್ನಡಪ್ರಭ ವಾರ್ತೆ ಬೆಂಗಳೂರು
ಯೋಜನೆಯ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಪರೀಕ್ಷಿಸಲು ಸ್ಮಾರ್ಟ್ ಟೆರ್ರಾ ಮತ್ತು ಸೊಲಿನಾಸ್ ಎಂಬ ಸ್ಟಾರ್ಟ್‌ಅಪ್‌ಗಳೊಂದಿಗೆ ಜಂಟಿ ಅಧ್ಯಯನಕ್ಕೆ ಜಲಮಂಡಳಿ ಒಪ್ಪಿಗೆ ನೀಡಿದೆ.
ನೀರಿನ ಕಳ್ಳತನ, ಲೆಕ್ಕಕ್ಕೆ ಸಿಗದ ನೀರು ಹಾಗೂ ಆದಾಯ ತರದ ನೀರಿನ ಪ್ರಮಾಣವನ್ನು ತಗ್ಗಿಸಲು ಟೈಟಾನ್ ಕಂಪನಿಯ ಅನುದಾನದಿಂದ ಪ್ರಯೋಗಗಳನ್ನು ನಡೆಸಲಾಗುತ್ತದೆ. ವಿಲ್ಗ್ರೋ ಇನ್‌ಕ್ಯುಬೇಷನ್ ಹಾಗೂ ವೆಲ್ ಲ್ಯಾಬ್ಸ್ ಕಂಪನಿಗಳು ಈ ಯೋಜನೆಗೆ ತಾಂತ್ರಿಕ ಪಾಲುದಾರರಾಗಿ ಕಾರ್ಯನಿರ್ವಹಿಸಲಿವೆ. ಒಂದು ವರ್ಷದ ಅವಧಿಯ ಈ ಅಧ್ಯಯನದಿಂದ ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ. ಶೂನ್ಯ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಜಲಮಂಡಳಿ ತಿಳಿಸಿದೆ.ಪೈಪ್‌ಗಳ ದುರಸ್ತಿ, ಪೈಪ್‌ಗಳನ್ನು ಬದಲಿಸುವುದು ಹಾಗೂ ಅಗೆಯುವಂತಹ ಅಗತ್ಯ ಸಿವಿಲ್ ಕಾಮಗಾರಿಗಳನ್ನು ಮಾತ್ರ ಜಲಮಂಡಳಿ ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸಲಿದೆ.
ನವೀನ ತಂತ್ರಜ್ಞಾನಗಳ ಬಳಕೆಯಿಂದ ನೀರು ಪೂರೈಕೆ ಮತ್ತು ಸೋರಿಕೆಯ ನಷ್ಟವನ್ನು ನಿರಂತರವಾಗಿ ಕಣ್ಗಾವಲಿನಲ್ಲಿಡಲು ಹಾಗೂ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ನವೀನ ತಂತ್ರಜ್ಞಾನಗಳನ್ನು ಆವಿಷ್ಕರಿಸಿರುವ ಯುವ ಸ್ಟಾರ್ಟ್‌ಅಪ್‌ಗಳಿಗೆ ಜಲಮಂಡಳಿಯು ಅವಕಾಶ ನೀಡಲು ಮುಂದಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ನೀರು ಸೋರಿಕೆಯಾಗುವ ಮತ್ತು ಅಪಾಯದಲ್ಲಿರುವ ಪೈಪ್‌ಲೈನ್ ವಿಭಾಗಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣೆ ಮಾಡಲಾಗುತ್ತದೆ. ಸೊಲಿನಾಸ್ ಸಂಸ್ಥೆ ಪೈಪ್‌ಗಳ ಒಳಗೆ ರೋಬೋಟ್‌ಗಳನ್ನು ಕಳುಹಿಸಿ ತಪಾಸಣೆ ಕೈಗೊಳ್ಳುತ್ತದೆ. ಸ್ಮಾರ್ಟ್ ಟೆರ್ರಾ ಸಂಸ್ಥೆಯು ಪೈಪ್‌ಗಳ ಒಳಗೆ ಶಬ್ದ ತರಂಗಗಳನ್ನು ರವಾನಿಸುವ ಮೂಲಕ ಮೂಲಕ ಸೋರಿಕೆಯ ನಿಖರ ಸ್ಥಳವನ್ನು ಪತ್ತೆ ಮಾಡುತ್ತದೆ. ಇದರಿಂದ ಬೆಂಗಳೂರು ಜಲಮಂಡಳಿಗೆ ಆಗುತ್ತಿರುವ ಆರ್ಥಿಕ ಹಾನಿ ಹಾಗೂ ಪೈಪ್‌ಲೈನ್‌ನಲ್ಲಿರುವ ಲೋಪದೋಷಗಳಿಂದ ನೀರು ಕಲುಷಿತವಾಗುವುದನ್ನು ತಪ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ವಿ. ತಿಳಿಸಿದ್ದಾರೆ.