ಬ್ಯಾಂಕ್‌ಗೆ ವಂಚನೆ ಕೇಸ್‌ಲ್ಲಿ ದೀಪಕ್‌ ಕೇಬಲ್ಸ್‌ನ ₹1.27 ಕೋಟಿ, ಚಿನ್ನ ಜಪ್ತಿ

KannadaprabhaNewsNetwork |  
Published : Jun 02, 2026, 04:30 AM IST
ಕಾರು | Kannada Prabha

ಸಾರಾಂಶ

ಬ್ಯಾಂಕುಗಳಿಗೆ ಕೋಟ್ಯಂತರ ರು. ವಂಚನೆ ಪ್ರಕರಣ ಸಂಬಂಧ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯವು(ಇ.ಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್ ನಿರ್ದೇಶಕ ಕೆ.ವೆಂಕಟೇಶ್ವರ್‌ ರಾವ್‌, ಕೊಲ್ಕತ್ತದ ಆಧುನಿಕ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ನಿರ್ದೇಶಕ ಮಹೇಶ್‌ ಅಗರ್ವಾಲ್‌ ಹಾಗೂ ಇತರರಿಗೆ ಸೇರಿದ 1.27 ಕೋಟಿ ರು. ನಗದು ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಿದೆ. ಅಲ್ಲದೆ, ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 18 ಕೋಟಿ ರು.ಗಳನ್ನು ಸ್ಥಗಿತಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ಯಾಂಕುಗಳಿಗೆ ಕೋಟ್ಯಂತರ ರು. ವಂಚನೆ ಸಂಬಂಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಆಧರಿಸಿ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್, ಅದರ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌ ಮತ್ತು ಇತರರ ವಿರುದ್ಧ ಇ.ಡಿ. ತನಿಖೆ ಆರಂಭಿಸಿತ್ತು. ಆದರಂತೆ ಮೇ 21 ಮತ್ತು 29ರಂದು ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ, ನಿರ್ದೇಶಕರ ನಿವಾಸ, ಕಚೇರಿ ಸೇರಿದಂತೆ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಶೋಧ ಕಾರ್ಯದ ವೇಳೆ ವಂಚನೆ ಸಂಬಂಧ ಹಲವು ದಾಖಲೆಗಳು, ಚಿನ್ನಾಭರಣ, ನಗದು ಜಪ್ತಿ ಮಾಡಿದೆ.

899.35 ಕೋಟಿ ರು. ಸಾಲ ಪಡೆದು ವಂಚನೆ:

ಈ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ ಕಂಪನಿಯು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟದಿಂದ 899.35 ಕೋಟಿ ರು. ಸಾಲ ಪಡೆದು ಬಳಿಕ ಆ ಸಾಲದ ಹಣವನ್ನು ಬೇರೆಗೆ ವರ್ಗಾಯಿಸುವ ಮುಖಾಂತರ ವಂಚಿಸಿರುವ ಗಂಭೀರ ಆರೋಪವಿದೆ. ಅಂತೆಯೆ ಕಂಪನಿಯು ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿ ಮತ್ತು ಖಾತೆಗಳ ದಾಖಲೆಗಳನ್ನು ತಿರುಚಿ ಬ್ಯಾಂಕ್‌ಗಳಿಗೆ ಸಲ್ಲಿಸಿ ಸಾಲ ಪಡೆದಿರುವ ಆರೋಪವಿದೆ.

ನಕಲಿ ಕಂಪನಿಗಳ ಸೃಷ್ಟಿ:

ಸಾಲದ ಹಣವನ್ನು ಬೇರೆ ಕಡೆಗೆ ವರ್ಗಾಯಿಸಲು ನಕಲಿ ಕಂಪನಿಗಳನ್ನು ಸೃಷ್ಟಿಸಲಾಗಿದೆ. ಸುಳ್ಳು ಖರೀದಿ ಮತ್ತು ಮಾರಾಟದ ಮೂಲಕ ಕೃತಕವಾಗಿ ಕಂಪನಿಯ ವಹಿವಾಟು ಹೆಚ್ಚಿಸಲಾಗಿದೆ. ಸಾಲಗಳನ್ನು ಮರೆಮಾಚಲು ಮತ್ತು ಬ್ಯಾಂಕ್‌ಗಳಿಂದ ಮತ್ತಷ್ಟು ಸಾಲ ಪಡೆಯಲು ನಕಲಿ ಕಾರ್ಪೊರೇಟ್‌ ಗ್ಯಾರಂಟಿಗಳನ್ನು ನೀಡಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಂಪನಿಯ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌ ಯಾವುದೇ ವ್ಯಾಪಾರ ಸಂಬಂಧ ಇಲ್ಲದಿದ್ದರೂ ತಮ್ಮ ನಿಯಂತ್ರಣದಲ್ಲಿದ್ದ ಇತರೆ ಸಂಸ್ಥೆಗಳಿಗೆ ಸಾಲದ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾವಿ ವಕೀಲರು ಸಾಮಾಜಿಕ ನ್ಯಾಯದ ರೂವಾರಿ: ವಿಕ್ರಂನಾಥ್‌
ಕಾವೇರಿ ನೀರು ಕಳ್ಳತನ, ಸೋರಿಕೆತಡೆಯಲು ಎಐ ತಂತ್ರಜ್ಞಾನ ಬಳಕೆ