ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಕೆಲವು ದಿನಗಳ ಹಿಂದಿನಿಂದಲೇ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ದತೆ ಕೈಗೊಂಡು ಶಾಲಾ ಆವರಣವನ್ನು ಸ್ವಚ್ಚಗೊಳಿಸಲಾಗಿತ್ತು. ಸೋಮವಾರ ಬೆಳಿಗ್ಗೆಯೇ ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯಾರ್ಥಿಗಳನ್ನು ಹೂ, ಸಿಹಿ ನೀಡಿ ಬರಮಾಡಿಕೊಳ್ಳಲಾಯಿತು.
ರಜಾ ಅವಧಿಯನ್ನು ಪೂರ್ಣಗೊಳಿಸಿ ಶಾಲೆಗೆ ಮರಳಿದ ಮಕ್ಕಳು ಶಿಕ್ಷಕರಿಗೆ ನಮಸ್ಕರಿಸಿ ಮುಗುಳ್ನಗುತ್ತ ತರಗತಿಗಳಿಗೆ ಹೆಜ್ಜೆ ಹಾಕಿದರು. ಮಕ್ಕಳನ್ನು ಶಾಲೆಯ ಬಳಿ ಬಿಡಲು ಬಂದಿದ್ದ ಪಾಲಕರು ಕುತೂಹಲದಿಂದ ನೋಡುತ್ತಿದ್ದರು.ನಗರದ ದುರ್ಗಿಗುಡಿಯಲ್ಲಿರುವ ಸರ್ಕಾರಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಹೂವು ಕೊಟ್ಟು, ಆರತಿ ಬೆಳಗಿ ಹಾಗೂ ಚಾಕ್ಲೇಟ್ ನೀಡಿ ಸ್ವಾಗತಿಸಿದರು. ನಗರದ ದುರ್ಗಿಗುಡಿಯ ಸರ್ಕಾರಿ ಶಾಲೆ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೊದಲ ದಿನವೇ ಮಕ್ಕಳು ಸಂಭ್ರಮದಿಂದ ಶಾಲೆಗೆ ಆಗಮಿಸಿದ್ದಾರೆ.
ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕಿದೆ:
ಶಾಸಕ ಆರಗ ಜ್ಞಾನೇಂದ್ರ ತಾವು ದತ್ತು ತೆಗೆದುಕೊಂಡಿರುವ ತೀರ್ಥಹಳ್ಳಿಯ ಶೀಬಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರತಿವರ್ಷದಂತೆ ಆರಂಭದ ಮೊದಲ ದಿನ ಶಾಲೆಗೆ ಆಗಮಿಸಿ ಖುದ್ದಾಗಿ ವಿಧ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿ ಶುಭಾಶಯ ಕೋರಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾಜೇಶ್ ಹಾಗೂ ಸದಸ್ಯರು, ತಾಲೂಕು ದೈಹಿಕ ಪರಿವೀಕ್ಷಕ ಕೆ.ವಿ.ರಮೇಶ್, ಸಿ.ನಾಗರಾಜ್, ಶಿಕ್ಷಕ ಮಹಾಬಲೇಶ್ವರ ಹೆಗ್ಡೆ ಇತರರು ಇದ್ದರು.
ತೀರ್ಥಹಳ್ಳಿ: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳ ಆವರಣದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಮಟ್ಟುಗಳನ್ನು ಕೂಡಲೇ ತೆರವುಗೊಳಿಸುವುದು ಅಗತ್ಯ ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಅಪಾಯದ ಸ್ಥಿತಿಯಲ್ಲಿರುವ ಮರಗಳ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾಗಿದೆ. ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಮಧ್ಯಾಹ್ನದ ಊಟ ಸೇರಿದಂತೆ ಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಆನಂದಪುರ: ಬೇಸಿಗೆ ರಜೆಯನ್ನು ಮುಗಿಸಿದ ಮಕ್ಕಳು ಶಾಲಾ ಪ್ರಾರಂಭ ದಿನವಾದ ಸೋಮವಾರ ಶಾಲೆಯ ಕಡೆ ಮುಖ ಮಾಡಿ ಹೊರಟಿದ್ದು ಸರ್ವೇಸಾಮಾನ್ಯವಾಗಿತ್ತು.
ಶಾಲೆ ಪ್ರಾರಂಭ ದಿನವಾದ ಸೋಮವಾರ ಎಲ್ಲಾ ಶಾಲೆಯ ಮಹದ್ವಾರದಕ್ಕೆ ಬಾಳೆ ಕಂಬ, ಮಾವಿನ ತೋರಣದಿಂದ ಅಲಂಕ ಮಾಡಲಾಗಿತ್ತು. ಶಾಲೆಗೆ ಬಂದಂತಹ ಮಕ್ಕಳಿಗೆ ಶಿಕ್ಷಕರು,ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಆತ್ಮೀಯವಾಗಿ ಹೂವನ್ನು ನೀಡಿ ಸ್ವಾಗತಿಸಿದರು. ಶಾಲಾ ಪ್ರಾರಂಭ ದಿನವೇ ಮಕ್ಕಳಿಗೆ ಪಠ್ಯಪುಸ್ತಕವನ್ನು ವಿತರಿಸಲಾಯಿತು.ಶಾಲಾ ಪ್ರಾರಂಭ ದಿನವಾದ ಸೋಮವಾರ ಮಕ್ಕಳು ಸಡಗರ ಸಂಭ್ರಮದಿಂದ ಶಾಲೆಗೆ ಆಗಮಿಸಿದ್ದಾರೆ. ಆನಂದಪುರ ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಾಲಾ ಪ್ರಾರಂಭ ದಿನವಾದ ಸೋಮವಾರ ಶಾಲಾ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಿಹಿ ವಿತರಿಸಿದ್ದಾರೆ.