-ಸಚಿವರಿಗೆ ಘೇರಾವ್ -ಎಐಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹ -15 ದಿನದಲ್ಲಿ ಜಾರಿ ಮಾಡದಿದ್ದರೆ ಹೋರಾಟಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿಗೆ ತರಲು ಕೂಡಲೇ ಕಾರ್ಯೋನ್ಮುಖರಾಗಬೇಕು. ರಾಜ್ಯದಲ್ಲಿ ಸದಾಶಿವ ಆಯೋಗ ಮತ್ತು 2015ರಲ್ಲಿ ಕಾಂತರಾಜು ಆಯೋಗವು ಅತ್ಯಂತ ವೈಜ್ಞಾನಿಕವಾಗಿ ಎಲ್ಲಾ ಜಾರಿಗಳ ದತ್ತಾಂಶ ಸಂಗ್ರಹಿಸಿ ತನ್ನ ವರದಿಯನ್ನು ನೀಡಿದೆ. ಇದನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಈ ವರದಿಯಲ್ಲಿ ಪ್ರತಿಯೊಂದು ಜಾತಿಯ - ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾವುದೇ ಒತ್ತಡಕ್ಕೂ ಮಣಿಯದೆ, ಕಾಂತರಾಜ ಆಯೋಗದ ಈ ವರದಿಯನ್ನು ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಜಾತಿ ಗಣತಿ ಮಾಡುವ ಬಗ್ಗೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಭಾಷಣ ಮಾಡುತ್ತಾರೆ. ಆದರೆ, ತಮ್ಮದೇ ಸರ್ಕಾರ ಇರುವ ರಾಜ್ಯದಲ್ಲಿ ಜಾತಿ ಗಣತಿ ವರದಿ ಸಿದ್ದವಾಗಿದ್ದರೂ ಅದನ್ನು ಬಿಡುಗಡೆ ಮಾಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದೊಂದು ಧ್ವಂದ್ವ ನಿಲುವು ಎಂದು ಟೀಕಿಸಿದರು.
ವೀರಶೈವ ಲಿಂಗಾಯತ ಸಂಘ ಕಾಂತರಾಜ ವರದಿ ಜಾರಿ ಮಾಡಬಾರದೆಂದು ಸರ್ಕಾರಕ್ಕೆ ಒತ್ತಾಯ ಮಾಡಲು ನಿರ್ಣಯ ತೆಗೆದುಕೊಂಡಿದೆ. ಅಹಿಂದ ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಸರ್ಕಾರಗಳು ಜಾತಿ ಜನಗಣತಿಯನ್ನು ವಿರೋಧಿಸುತ್ತಿರುವುದು ಅಹಿಂದ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಕುಟುಕಿದರು.
ರಾಮನಗರ ಜಿಲ್ಲಾ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಎಐಬಿಎಸ್‌ಪಿ ಜಿಲ್ಲಾ ಸಂಯೋಜಕರಾಗಿ ವಿ.ಸ್ವಾಮಿ, ಮಹದೇವ್ ಬೆಟ್ಟಹಳ್ಳಿ, ಜಿಲ್ಲಾಧ್ಯಕ್ಷರಾಗಿ ವೆಂಕಟಾಚಲ ದೊಡ್ಡ ಆಲಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾಗಿ ಅಬ್ದುಲ್ ರಹಿಂಬಾಬು, ಬೈರಯ್ಯ ಬಳಗೆರೆ, ಶ್ರೀನಿವಾಸ್ ರಾವ್, ಬಸವರಾಜ್ ಚಿಕ್ಕಾಲಹಳ್ಳಿ ಸೇರಿದಂತೆ ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.