ದಕ್ಷಿಣ ಕನ್ನಡ ಕಾಂಗ್ರೆಸ್‌ ಅಧ್ಯಕ್ಷ ಆಯ್ಕೆಗೆ ಎಐಸಿಸಿ ಎಂಟ್ರಿ!

KannadaprabhaNewsNetwork |  
Published : Oct 07, 2025, 01:03 AM ISTUpdated : Oct 07, 2025, 05:04 AM IST
Congress flag

ಸಾರಾಂಶ

ಸುದೀರ್ಘ 8 ವರ್ಷ 4 ತಿಂಗಳಿನಿಂದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆ. ಹರೀಶ್‌ ಕುಮಾರ್‌ ಇತ್ತೀಚೆಗಷ್ಟೇ ಮೆಸ್ಕಾಂ ಅಧ್ಯಕ್ಷರಾಗಿ ನೇಮಕ ಆಗಿರುವುದರಿಂದ ತಿಂಗಳೊಳಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುವ ನಿರೀಕ್ಷೆಯಿದೆ.

ಸಂದೀಪ್‌ ವಾಗ್ಲೆ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್‌ಗೆ ಶೀಘ್ರದಲ್ಲೇ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಮುಖಂಡರ ಮಧ್ಯೆ ಲಾಬಿ ಜೋರಾಗಿದೆ. ಇದೇ ಮೊದಲ ಬಾರಿಗೆ ನಗರ ಮತ್ತು ಗ್ರಾಮೀಣ ಅಧ್ಯಕ್ಷ ಎನ್ನುವ ಅಧಿಕಾರ ವಿಕೇಂದ್ರೀಕರಣದ ಸೂತ್ರ ಜಾರಿಯಾಗುವ ಸಾಧ್ಯತೆಯಿದ್ದು, ಇದು ಆಕಾಂಕ್ಷಿಗಳ ಪಟ್ಟಿಯನ್ನು ಇನ್ನಷ್ಟು ಉದ್ದಗೊಳಿಸಿದೆ. ಮುಖ್ಯವಾಗಿ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಇದೇ ಮೊದಲ ಬಾರಿಗೆ ಎಐಸಿಸಿ ಎಂಟ್ರಿ ನೀಡಲಿದೆ.

ಸುದೀರ್ಘ 8 ವರ್ಷ 4 ತಿಂಗಳಿನಿಂದ ಅಧ್ಯಕ್ಷರಾಗಿರುವ ಕೆ. ಹರೀಶ್‌ ಕುಮಾರ್‌ ಇತ್ತೀಚೆಗಷ್ಟೇ ಮೆಸ್ಕಾಂ ಅಧ್ಯಕ್ಷರಾಗಿ ನೇಮಕ ಆಗಿರುವುದರಿಂದ ತಿಂಗಳೊಳಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುವ ನಿರೀಕ್ಷೆಯಿದೆ.

ಆಖಾಡಕ್ಕಿಳಿದ ಎಐಸಿಸಿ!:

ಇದುವರೆಗೆ ಸ್ಥಳೀಯ ನಾಯಕರ ಒಲವಿನಂತೆ ಕೆಪಿಸಿಸಿ ಮಟ್ಟದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಿಲ್ಲಾ ನಾಯಕತ್ವ ಆಯ್ಕೆಗೆ ಎಐಸಿಸಿ ಆಸಕ್ತಿ ವಹಿಸಿದೆ. ಕರಾವಳಿಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಮರುಜೀವ ತುಂಬುವ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಎಐಸಿಸಿ ಉಸ್ತುವಾರಿಯಲ್ಲೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಯಾವ ಅಭ್ಯರ್ಥಿಗೆ ಕಾರ್ಯಕರ್ತರ ಬೆಂಬಲ ಹೆಚ್ಚಿದೆಯೋ ಅವರಿಗೆ ಕಿರೀಟ ತೊಡಿಸುವ ಕೆಲಸ ಎಐಸಿಸಿ ಮಾಡಲಿದೆ ಎಂದು ತಿಳಿದುಬಂದಿದೆ.

ಅಧಿಕಾರ ವಿಕೇಂದ್ರೀಕರಣ ಸೂತ್ರ:

ಇದುವರೆಗೆ ಜಿಲ್ಲೆಗೊಬ್ಬರೇ ಅಧ್ಯಕ್ಷರಿದ್ದರು. ಈ ಸಲ ಮೊದಲ ಬಾರಿಗೆ ನಗರ ಮತ್ತು ಗ್ರಾಮೀಣ ವ್ಯಾಪ್ತಿ (ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು) ಎಂದು ಅಧಿಕಾರ ವಿಭಜನೆ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಧಿಕಾರ ವಿಕೇಂದ್ರೀಕರಣ ಮಾಡಿರುವುದರಿಂದ ಜಿಲ್ಲಾಧ್ಯಕ್ಷ ಸ್ಥಾನವೂ ಇದೇ ಮಾದರಿಯಲ್ಲಿ ಇರಬಹುದು. ಅಥವಾ ಕೊನೆ ಹಂತದಲ್ಲಿ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಬಹುದು. ಎಐಸಿಸಿ ನಿರ್ಧಾರದಂತೆ ನಡೆಯಲಿದೆ ಎನ್ನುತ್ತಾರೆ ಪಕ್ಷದ ಮುಖಂಡರು.

ಸೆಂಥಿಲ್‌ ಟೀಂ ಇಲ್ಲೂ ಕೆಲಸ ಮಾಡುತ್ತಾ? 

:ತಳಮಟ್ಟದಿಂದ ಪಕ್ಷ ಬಲಿಷ್ಠಗೊಳಿಸಬೇಕಾದರೆ ಸ್ಥಳೀಯ ನಾಯಕತ್ವ ಆಯ್ಕೆಯನ್ನೂ ಅಳೆದೂ ತೂಗಿ ಮಾಡಬೇಕು ಎನ್ನುವ ತೀರ್ಮಾನವನ್ನು ಎಐಸಿಸಿ ತೆಗೆದುಕೊಂಡಿದ್ದು, ಅದರ ಬಳಿಕ ಮಧ್ಯಪ್ರದೇಶ, ಹರಿಯಾಣ, ಗುಜರಾತ್‌ ಸೇರಿ ಅನೇಕ ರಾಜ್ಯಗಳಲ್ಲಿ ಎಐಸಿಸಿ ಉಸ್ತುವಾರಿಯಲ್ಲೇ ಜಿಲ್ಲಾಧ್ಯಕ್ಷರ ನೇಮಕ ನಡೆದಿದೆ. ಎಐಸಿಸಿಯ ಈ ಟೀಂನಲ್ಲಿ ತಮಿಳುನಾಡು ಸಂಸದ ಸಸಿಕಾಂತ್‌ ಸೆಂಥಿಲ್‌ ಮತ್ತಿತರರು ಇದ್ದಾರೆ. ಕರ್ನಾಟಕದಲ್ಲಿ ಈಗ 16 ಜಿಲ್ಲಾಧ್ಯಕ್ಷರ ಬದಲಾವಣೆ ಸಮಯ ಸನ್ನಿಹಿತ ಆಗಿರುವುದರಿಂದ ಸೆಂಥಿಲ್‌ ಅವರ ತಂಡವೇ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆಯೂ ಇಲ್ಲದಿಲ್ಲ. 

ಆಕಾಂಕ್ಷಿಗಳು ಯಾರು? 

ಅಧಿಕಾರ ವೀಕೇಂದ್ರೀಕರಣ ಸೂತ್ರ ಕಾರ್ಯರೂಪಕ್ಕೆ ಬಂದರೆ ನಗರ ಅಧ್ಯಕ್ಷ ಸ್ಥಾನಕ್ಕೆ ಕಳೆದ ಲೋಕಸಭಾ ಚುನಾವಣಾ ಅಭ್ಯರ್ಥಿ ಪದ್ಮರಾಜ್‌ ಆರ್‌., ಯುವ ನಾಯಕ ಮಿಥುನ್‌ ರೈ, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಎಂಎಲ್ಸಿ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್‌. ಲೋಬೊ ಹೆಸರು ಮುಂಚೂಣಿಯಲ್ಲಿದೆ.ಗ್ರಾಮೀಣ ಅಧ್ಯಕ್ಷ ಸ್ಥಾನಕ್ಕೆ- ಜಿಪಂ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಎಂ.ಎಸ್‌. ಮೊಹಮ್ಮದ್‌ ಹೆಸರು ಮುಖ್ಯವಾಗಿ ಕೇಳಿಬರುತ್ತಿದೆ. ಉಳಿದಂತೆ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷರಾದ ವಿಶ್ವನಾಥ ರೈ, ವೆಂಕಪ್ಪ ಗೌಡ, ಯುವ ನಾಯಕ ಕಿರಣ್‌ ಬುಡ್ಲೆಗುತ್ತು, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಲುಕ್ಮಾನ್‌ ಬಂಟ್ವಾಳ್‌ ಆಕಾಂಕ್ಷಿಗಳಾಗಿದ್ದಾರೆ. 

ಕೈ ಸಿದ್ಧಾಂತಕ್ಕೆ ಬದ್ಧವೋ, ಮೃದು ಹಿಂದುತ್ವದೆಡೆಗೋ? 

ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಆಯ್ಕೆಗೆ ಜಾತಿ ಲೆಕ್ಕಾಚಾರ ಜೋರಾಗಿ ನಡೆದಿದೆ. ಸರಣಿ ಸೋಲುಗಳ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಮೃದು ಹಿಂದುತ್ವದೆಡೆಗೆ ಕೊಂಚ ವಾಲಿಕೊಂಡಿದ್ದು, ಇದನ್ನೇ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರಕ್ಕೂ ಅನ್ವಯಿಸಿದರೆ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ಸಿಗೋದು ಡೌಟು. ಆದರೆ ಕಾರ್ಯಕರ್ತರ ಬಲ ಹಾಗೂ ಪಕ್ಷ ಮುನ್ನಡೆಸುವ ಛಾತಿಯುಳ್ಳ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡರೆ, ಎರಡು ಅಧ್ಯಕ್ಷ ಸ್ಥಾನದಲ್ಲಿ ಒಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗೆ ಅಧ್ಯಕ್ಷ ಕಿರೀಟ ಸಿಗಬಹುದು ಎನ್ನುವ ಲೆಕ್ಕಾಚಾರ ನಡೆದಿದೆ.

ಆದಷ್ಟು ಬೇಗನೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕ ಆಗಬೇಕಿದೆ. ನೂತನ ಅಧ್ಯಕ್ಷರಿಗೆ ನನ್ನ ಸಂಪೂರ್ಣ ಸಹಕಾರ ನೀಡಿ ಕೆಲಸ ಮಾಡುತ್ತೇನೆ.

- ಹರೀಶ್‌ ಕುಮಾರ್‌, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ