ಕಾಂಗ್ರೆಸ್‌ನ ನಟ್ಟು, ಬೋಲ್ಟುಟೈಟ್‌ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯತ್ನ

KannadaprabhaNewsNetwork | Updated : Mar 09 2025, 04:56 AM IST

ಸಾರಾಂಶ

ಸಿಎಂ ಹುದ್ದೆ ಸಂಬಂಧ ರಾಜ್ಯ ಕಾಂಗ್ರೆಸ್‌ ನಾಯಕರ ಹೇಳಿಕೆ- ಪ್ರತಿ ಹೇಳಿಕೆ ಸಮರದ ಬಗ್ಗೆ ಅತೃಪ್ತಿ ಹೊರಹಾಕಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಗ್ಗಟ್ಟೇ ಬಲ, ಇಲ್ಲದೆ ಹೋದರೆ ನಮ್ಮನ್ನು ಜನ ತಿರಸ್ಕರಿಸುತ್ತಾರೆಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

 ಕಲಬುರಗಿ : ರಾಜ್ಯ ಕಾಂಗ್ರೆಸ್‌ನಲ್ಲಿನ ಸಿಎಂ ಕುರ್ಚಿ ಕಾದಾಟದ ಅಖಾಡಕ್ಕೆ ಮತ್ತೆ ಹೈಕಮಾಂಡ್‌ ಎಂಟ್ರಿ ಕೊಟ್ಟಿದೆ. ಸಿಎಂ ಹುದ್ದೆ ಸಂಬಂಧ ರಾಜ್ಯ ಕಾಂಗ್ರೆಸ್‌ ನಾಯಕರ ಹೇಳಿಕೆ- ಪ್ರತಿ ಹೇಳಿಕೆ ಸಮರದ ಬಗ್ಗೆ ಅತೃಪ್ತಿ ಹೊರಹಾಕಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಗ್ಗಟ್ಟೇ ಬಲ, ಇಲ್ಲದೆ ಹೋದರೆ ನಮ್ಮನ್ನು ಜನ ತಿರಸ್ಕರಿಸುತ್ತಾರೆಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಜೇವರ್ಗಿಯಲ್ಲಿ ಶನಿವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಲ್ಲಿನ ಕಲ್ಯಾಣ ಪಥ, ಪ್ರಗತಿ ಪಥ ರಸ್ತೆ ನಿರ್ಮಾಣ ಯೋಜನೆಗಳಿಗೆ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಬ್ಬರೂ ಒಗ್ಗಟ್ಟಾಗಿರುವಂತೆ ತಾಕೀತು ಮಾಡಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ಬೆನ್ನು ತಟ್ಟಿದರಲ್ಲದೆ, ಅವರಿಬ್ಬರೂ ಇದೇ ರೀತಿ ಒಗ್ಗಟ್ಟಿನಿಂದ ಇರಬೇಕೆಂಬುದೇ ನಮ್ಮ ಬಯಕೆ ಎಂದು ಹೇಳಿದರು.

ಮೈಕ್‌ ಪೋಡಿಯಂನಿಂದಲೇ ಖರ್ಗೆಯವರು ಶಿವಕುಮಾರ್‌ ಅವರತ್ತ ಕೈ ಸನ್ನೆ ಮಾಡಿ, ‘ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೂ ಹೀಂಗಿರಬೇಕು, ಹಂಗ ಇದ್ರೇನೇ ಚೆಂದ’ ಎಂದು ತಮ್ಮೆರಡೂ ಕೈ ಮುಂದೆ ಮಾಡಿ ಒಗ್ಗಟ್ಟಿನ ಮಂತ್ರ ಹೇಳಿದರು. 

 ಇಬ್ಬರೂ ಆ ಕಡೆ, ಈ ಕಡೆ ಆದರೆ ಸರಿಯಾಗೋದಿಲ್ಲವೆಂದು ತಿಳಿಸಿದರು. ಹಣಕಾಸು ಮಂತ್ರಿಯಾಗಿ 16 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ರೀತಿ ಈ ದೇಶದಲ್ಲೇ ಇನ್ನೊಬ್ಬರಿಲ್ಲ. ಅದೇ ರೀತಿ ಶಿವಕುಮಾರ್‌ ಕೂಡ ಇಂಧನ ಸಚಿವರಾಗಿ, ಜಲ ಸಂಪನ್ಮೂಲ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ, ಸರ್ಕಾರ, ಜನರಿಗಾಗಿ ಸೇವೆ ಮಾಡಿದ್ದಾರೆ. ಇಬ್ಬರೂ ಅವರ ಅವರ ಸಾಮರ್ಥ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಜೋಡೆತ್ತಿನಂತೆ ಅಭಿವೃದ್ಧಿಪರ ಕೆಲಸಗಳನ್ನ ಮಾಡುತ್ತಿರಿ ಎಂದು ಹಾರೈಸಿದರು. 

 ಕಾಂಗ್ರೆಸ್‌ನಲ್ಲಿ ವ್ಯಕ್ತಿಗಿಂತ ಒಳ್ಳೆಯ, ಉತ್ತಮ ಕೆಲಸಗಳಿಗೆ ಸದಾಕಾಲ ಬೆಂಬಲವಿರುತ್ತದೆ. ಪಕ್ಷ ಸದಾ ಬೆಂಬಲಿಸುತ್ತದೆ. ಉತ್ತಮ ಕೆಲಸ, ಜನಪರ ನಿಲುವು ವಿಷಯದಲ್ಲಿ ನಾನು ಸಿದ್ದರಾಮಯ್ಯ, ಶಿವಕುಮಾರ್‌ ಇವರಿಬ್ಬರಿಗೂ ಅಭಿನಂದಿಸುತ್ತೇನೆ. ಹೀಗೆ ಒಂದಾಗಿ ಹೋಗಿ. ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಕೊಡಿ. ಅಭಿವೃದ್ಧಿ ಬಿಟ್ಟು ಮಾತನಾಡಿದರೆ ಜನ ನಮ್ಮನ್ನು ಖಂಡಿತ ಮೆಚ್ಚೋದಿಲ್ಲ ಎಂದು ಖರ್ಗೆ ತಮ್ಮ ಭಾಷಣದುದ್ದಕ್ಕೂ ಎಚ್ಚರಿಕೆಯ ಮಾತನಾಡಿದರು.

ದೇವ್ರು ಅವಕಾಶ ಮಾತ್ರ ಕೊಡ್ತಾನೆ- ಡಿಕೆಶಿ:

ಹುಟ್ಟಿದ ಮೇಲೆ ಉತ್ತಮ ಕೆಲಸಗಳನ್ನು ಮಾಡಬೇಕು, ಜನಪರವಾಗಿರಬೇಕೆಂದು ಹೇಳುತ್ತಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೇವರು ವರ, ಶಾಪ ಕೊಡೋದಿಲ್ಲ. ಏನಿದ್ದರೂ ಅವಕಾಶ ಕೊಡುತ್ತಾನೆ, ಆಗ ನಾವು ಅದರ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ರಹೀಂ ಖಾನ್‌, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ ಸಿಂಗ್‌ ಸೇರಿದಂತೆ ಕಲ್ಯಾಣ ನಾಡಿನ ಸಂಸದರು, ಶಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಖರ್ಗೆ ಹೇಳಿದ ಒಗ್ಗಟ್ಟಿನ ಪಾಠಕ್ಕೆ ಎಲ್ಲರೂ ಕಿವಿಯಾದರು.

Share this article