ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರದ ಅನುದಾನಿತ ಶಾಲೆಯಾಗಿರುವ ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದಕ್ಕೆ ಮೈಷುಗರ್ ಅಧ್ಯಕ್ಷರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಪ್ರಶ್ನಿಸಿದರು.ಶಾಲೆಯ ವಿಚಾರದಲ್ಲಿ ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಕಾರ್ಖಾನೆಗೆ ಶಕ್ತಿ ತುಂಬುವುದಷ್ಟೇ ಅಧ್ಯಕ್ಷರ ಕೆಲಸ. ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ನಡೆಸುವ ಪ್ರೌಢಶಾಲೆಯನ್ನು ಗುತ್ತಿಗೆ ಕೊಡುವುದಕ್ಕೆ ಅಥವಾ ಮಾರಾಟ ಮಾಡುವುದಕ್ಕೆ ಅಧ್ಯಕ್ಷರಿಗೆ ಯಾವುದೇ ಅಧಿಕಾರ ಕೊಟ್ಟಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಷುಗರ್ ಪ್ರೌಢಶಾಲೆಯಲ್ಲಿ ಹಾಜರಾತಿ ಕೊರತೆ ಇರುವುದು ನಿಜ. ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಬಗ್ಗೆ, ಶಾಲೆಯಲ್ಲಿ ಶೈಕ್ಷಣಿಕವಾಗಿ ಬದಲಾವಣೆ ತರುವ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಬೇಕಾದ ಅಧ್ಯಕ್ಷರು ಶಾಲೆಯನ್ನು ಗುತ್ತಿಗೆ ನೀಡುವ ಬಗ್ಗೆ ಚರ್ಚಿಸಿರುವುದು ವಿಪರ್ಯಾಸ. ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿಂದ ಶಾಲೆಗಳನ್ನು ಮುಚ್ಚುವುದಾದರೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಬೇಕಾಗುತ್ತದೆ. ಇದನ್ನು ಸರ್ಕಾರ ಒಪ್ಪುತ್ತದೆಯೇ ಎಂದು ಪ್ರಶ್ನಿಸಿದರು.ಕಾರ್ಖಾನೆ ಸುಪರ್ದಿಯಲ್ಲಿರುವ ಸಮುದಾಯ ಭವನಗಳನ್ನು ನವೀಕರಣ ಮಾಡಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದೆ. ಇದರ ಬಗ್ಗೆ ಚಿಂತಿಸದ ಅಧ್ಯಕ್ಷರು ಅವುಗಳನ್ನು ಮಾರಾಟ ಮಾಡಲು ಚಿಂತಿಸುತ್ತಿರುವಂತೆ ಕಂಡುಬರುತ್ತಿದೆ ಎಂದು ಕಿಡಿಕಾರಿದರು.
ಸಮುದಾಯಗಳ ನವೀಕರಣದಿಂದ 40 ವಾರಕ್ಕೆ 10 ಲಕ್ಷ ರು. ಆದಾಯ ಗಳಿಸಬಹುದು. ಅಭಿವೃದ್ಧಿ ಪರವಾದ ಆಲೋಚನೆಗಳಿಲ್ಲದೆ ಕೇವಲ ಖಾಸಗಿ ಗುತ್ತಿಗೆ ಆಲೋಚನೆಗಳನ್ನೇ ಮುಂದಿಡುತ್ತಿರುವುದನ್ನು ನೋಡಿದರೆ ಅಧ್ಯಕ್ಷರ ಅಸಮರ್ಥತೆ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ದೂಷಿಸಿದರು.ಇದುವರೆಗೂ ಯಾರೂ ಸಹ ರೈತರ ಆಸ್ತಿಯನ್ನು ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಹಾಲಿ ಅಧ್ಯಕ್ಷರು ದುರುದ್ದೇಶದಿಂದ ಆಸ್ತಿ ಮಾರಾಟಕ್ಕೆ ಹೊರಟಿದ್ದಾರೆ. ಇದಕ್ಕೆ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅವರ ಅನುಮತಿಯನ್ನೂ ಪಡೆದಿಲ್ಲ. ಇದನ್ನು ನೋಡಿದಾಗ ಕಾರ್ಖಾನೆ ಅಧ್ಯಕ್ಷರ ಕುರಿತು ಕೇಂದ್ರ ಸಚಿವರು ಹೇಳಿರುವ ಹಗಲುದರೋಡೆ ಮಾತು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಲ್ಲಿ ಸಂಸದರೂ ಟ್ರಸ್ಟಿಯಾಗಿದ್ದಾರೆ. ಶಾಲೆಯನ್ನು ಗುತ್ತಿಗೆ ಕೊಡುವ ವಿಚಾರದಲ್ಲಿ ಟ್ರಸ್ಟಿಗಳ ಒಪ್ಪಿಗೆ ಪಡೆದು ಕಾರ್ಯನಿರ್ವಹಿಸಿರುತ್ತೇನೆಂದು ಅಧ್ಯಕ್ಷರು ಹೇಳಿದ್ದಾರೆ. ಆದರೆ, ಈ ವಿಚಾರವನ್ನು ಸಂಸದರ ಎದುರು ಪ್ರಸ್ತಾಪ ಮಾಡಿಲ್ಲ. ಅನುಮತಿಯನ್ನೂ ಪಡೆದಿಲ್ಲ. ಇದೊಂದು ಏಕಪಕ್ಷೀಯ ತೀರ್ಮಾನವಾಗಿದ್ದು ಜನರನ್ನು ದಿಕ್ಕುತಪ್ಪಿಸುವ ತಂತ್ರವಾಗಿದೆ ಎಂದು ಆರೋಪಿಸದರು.ಷೇರುದಾರರು ಮತ್ತು ಸರ್ಕಾರದ ಒಪ್ಪಿಗೆ ಪಡೆಯದೆ ಶಾಲೆಯನ್ನು ಖಾಸಗಿಯವರಿಗೆ ನೀಡುವ ತೀರ್ಮಾನ ಮಾಡಿರುವುದನ್ನು ವಿರೋಧಿಸುತ್ತೇವೆ. ಮೈಷುಗರ್ ಪ್ರೌಢಶಾಲೆ ಸೇರಿದಂತೆ ರೈತರ ಸಮುದಾಯ ಭವನಗಳನ್ನು ಯಾವುದೇ ಕಾರಣಕ್ಕೂ ಗುತ್ತಿಗೆ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಕುಮ್ಮಕ್ಕಿನಿಂದ ವಿದ್ಯಾ ಸಂಸ್ಥೆ ನಡೆಸುತ್ತಿರುವ ಆಪ್ತ ರಾಜಕಾರಣಿಯೊಬ್ಬರಿಗೆ ಭವಿಷ್ಯದಲ್ಲಿ ಮೈಷುಗರ್ ಶಾಲೆಯನ್ನು ಪರಭಾರೆ ಮಾಡಲು ಅನುಕೂಲವಾಗುವಂತೆ ಗುತ್ತಿಗೆ ಹೆಸರಿನಲ್ಲಿ ಮುನ್ನುಡಿ ಬರೆಯಲು ಹೊರಟಿದ್ದಾರೆ. ಇದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೀಲಾರ ಕೃಷ್ಣ ಹಾಜರಿದ್ದರು.