ಬೆಳ್ತಂಗಡಿ: 6 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

KannadaprabhaNewsNetwork | Published : Jul 2, 2025 11:51 PM
ಅಂಗಣೌಅಢೀ | Kannada Prabha

ಸಾರಾಂಶ

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಗಾಂಧಿನಗರ, ಬೆಳ್ತಂಗಡಿ ಕಸಬಾ ಮುಗುಳಿ, ಮೊಗ್ರುವಿನ ಮುಗೇರಡ್ಕ, ಕೊಕ್ಕಡ, ಕರಾಯದ ಉಜಿರೆಬೆಟ್ಟು ಹಾಗೂ ಶಿಶಿಲದ ಗಿರಿಜನ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಪ್ರಥಮ ಬಾರಿಗೆ ಎಲ್‌ಕೆಜಿ, ಯುಕೆಜಿ ಆರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಅದರಂತೆ ಬೆಳ್ತಂಗಡಿ ತಾಲೂಕಿನ ಆರು ಅಂಗನಾಡಿ ಕೇಂದ್ರಗಳಲ್ಲಿ ಜೂ. ೨ರಿಂದ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಲಾಗಿದೆ.ತಾಲೂಕಿನ ಚಾರ್ಮಾಡಿಯ ಗಾಂಧಿನಗರ, ಬೆಳ್ತಂಗಡಿ ಕಸಬಾ ಮುಗುಳಿ, ಮೊಗ್ರುವಿನ ಮುಗೇರಡ್ಕ, ಕೊಕ್ಕಡ, ಕರಾಯದ ಉಜಿರೆಬೆಟ್ಟು ಹಾಗೂ ಶಿಶಿಲದ ಗಿರಿಜನ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಪ್ರಥಮ ಬಾರಿಗೆ ಎಲ್‌ಕೆಜಿ, ಯುಕೆಜಿ ಆರಂಭಗೊಂಡಿದೆ. ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇಲ್ಲದ ಕಾರಣ ಎರಡು ಕೊಠಡಿಗಳುವುಳ್ಳ ಅಂಗನವಾಡಿ ಕೇಂದ್ರದಲ್ಲಿ ಈ ತರಗತಿಯನ್ನು ಪ್ರಥಮ ಹಂತದಲ್ಲಿ ಪ್ರಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಮುಂದಿನ ಹಂತದಲ್ಲಿ ಉಳಿದ ಅಂಗನವಾಡಿಗಳಲ್ಲಿ ನಡೆಸುವ ಉದ್ದೇಶ ಹೊಂದಲಾಗಿದೆ.ರಾಜ್ಯದಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ಕೂಡ ಮಾಡಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಮನವಿಗೆ ಮಣಿದ ರಾಜ್ಯ ಸರ್ಕಾರ ಇದೀಗ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಪ್ರಾರಂಭಿಸಿದೆ.ತರಗತಿಗೆ ಸ್ಮಾರ್ಟ್ ಟಿವಿ., ಪುಸ್ತಕ ನೀಡಲಾಗಿದ್ದು, ಸಮವಸ್ತ್ರ ಬಂದ ಮೇಲೆ ವಿತರಿಸಲಾಗುತ್ತದೆ. ಅಂಗನಾಡಿ ಕಾರ್ಯಕರ್ತೆಯರೇ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲಿದ್ದು, ಕೇಂದ್ರದಲ್ಲಿ ನೀಡುವ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತದೆ. ಒಟ್ಟಿನಲ್ಲಿ ಇರುವಂತಹ ವ್ಯವಸ್ಥೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲಾಗಿದ್ದು ಮುಂದೆ ಹೈಟೆಕ್ ಮಾದರಿಯಲ್ಲಿ ತರಗತಿ ರೂಪುಗೊಳ್ಳಲಿದೆ.೨೧೨ ಅಂಗನವಾಡಿ ಕೇಂದ್ರ ಹೈಟೆಕ್‌:

ಕೇಂದ್ರ ಸರ್ಕಾರದ ಸಕ್ಷಮ್ ಯೋಜನಯಡಿ ಬೆಳ್ತಂಗಡಿ ತಾಲೂಕಿನ ೨೧೨ ಅಂಗನವಾಡಿ ಕೇಂದ್ರಗಳನ್ನು ಹೈಟೆಕ್‌ಗೊಳಿಸಲು ಆಯ್ಕೆ ಮಾಡಲಾಗಿದೆ. ಆರ್‌ಸಿಸಿ ಕಟ್ಟಡಗಳಿಗೆ ಈ ಯೋಜನೆ ಅನ್ವಯವಾಗಿದ್ದು, ಈಗಾಗಲೇ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿಗಳು ಬಂದಿಚೆ. ಕೆಲವು ದಿನಗಳಲ್ಲಿ ಅಳವಡಿಕೆ ಕಾರ್ಯ ನಡೆಯಲಿದೆ. ಇದರಲ್ಲಿ ಆರು ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಪ್ರಾರಂಭಿಸಲಾಗಿದ್ದು, ಮುಂದೆ ಸಕ್ಷಮ್ ಆಗಿ ಪರಿವರ್ತಗೊಳ್ಳಲಿದೆ.ಎಲ್‌ಕೆಜಿ, ಯುಕೆಜಿ ತರಗತಿಗೆ ತಾಲೂಕಿನ ಆರು ಅಂಗನವಾಡಿ ಕೇಂದ್ರದಲ್ಲಿ ಈಗಾಗಲೇ ಆರಂಭಗೊಂಡಿದ್ದು ಇದುವರೆಗೆ ೪೨ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಮುಂದೆಯೂ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಒಂದನೇ ತರಗತಿಗೆ ಸೇರ್ಪಡೆಗೆ ವಯೋಮಿತಿ ಸಡಿಲಗೊಳಿಸಿದ ಕಾರಣ ದಾಖಲಾತಿಯಲ್ಲಿ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಈ ಅಂಗನವಾಡಿ ಕೇಂದ್ರಗಳಿಗೆ ಸೇರಿಸಲು ಅವಕಾಶ ನೀಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ................

ಗ್ರಾಮೀಣ ಭಾಗದ ಮಕ್ಕಳು ಎಲ್‌ಕೆಜಿ, ಯುಕೆಜಿ ತರಗತಿಗೆ ಬಂದು ಅಂಗನವಾಡಿ ಕೇಂದ್ರದಲ್ಲಿ ಆಂಗ್ಲ ಭಾಷೆ ಕಲಿಯುವ ಹೊಸ ಪ್ರಯೋಗವಾಗಿದ್ದು, ಎಲ್ಲರೂ ಪ್ರೋತ್ಸಾಹಿಸಿ ಹೆಚ್ಚು ಮಕ್ಕಳು ಬರುವಾಗೆ ಮಾಡಿದಲ್ಲಿ ಇನ್ನೂ ಹೆಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಈ ತರಗತಿ ಪ್ರಾರಂಭವಾಗುತ್ತದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು.

। ಪ್ರಿಯಾ ಆ್ಯಗ್ನೇಸ್ ಚಾಕೋ, ಸಿಡಿಪಿಒ ಬೆಳ್ತಂಗಡಿ

PREV