ಕನ್ನಡಪ್ರಭ ವಾರ್ತೆ ಹಲಗೂರು
ಉದ್ಯೋಗ ಖಾತರಿ ಕಾಯ್ದೆಯಡಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಕೂಲಿಕಾರರು ಬುಧವಾರ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಉದ್ಯೋಗ ಖಾತರಿ ಕೆಲಸ ನಡೆಯುವ ಸ್ಥಳದಲ್ಲಿ ಕೂಲಿಕಾರರಿಗೆ ಅಗತ್ಯ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಗ್ರಾಪಂನಲ್ಲಿ ಪ್ರಭಾರ ಪಿಡಿಒ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡದಿಂದ ಸಕಾಲಕ್ಕೆ ಸರಿಯಾಗಿ ಕೂಲಿಕಾರರ ಕೆಲಸಗಳು ಆಗುತ್ತಿಲ್ಲ. ಕೂಡಲೇ ಪೂರ್ಣಾವಧಿ ಪಿಡಿಒ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕೋರಿ ಅರ್ಜಿ ಸಲ್ಲಿಸಿ ಸುಮಾರು 25 ದಿನಗಳು ಕಳೆದಿವೆ. ಇದುವರೆಗೂ ಕೆಲಸ ನೀಡಲು ಕ್ರಮ ವಹಿಸಿಲ್ಲ ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ತಿಳಿಸಿದರು.ಈ ವೇಳೆ ಗ್ರಾಪಂ ಪಿಡಿಒ ಕೆ.ಚೆಂದಿಲ್ ಮಾತನಾಡಿ, ಕಾಯ್ದೆಯಡಿ ವರ್ಷಕ್ಕೆ 100 ದಿನಗಳ ಕೆಲಸ ನೀಡಬೇಕೆಂಬ ನಿಯಮವಿದೆ. ಕೇವಲ 3 ತಿಂಗಳಲ್ಲಿ ಸುಮಾರು 40ಕ್ಕೂ ಹೆಚ್ಚು ದಿನಗಳ ಕೆಲಸಕ್ಕೆ ಕೂಲಿ ಪಾವತಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿವೆ. ಹೆಚ್ಚುವರಿ ಕಾಮಗಾರಿಗಳ ಕೆಲಸ ಆರಂಭಿಸಲು ಜಿಪಂಗೆ ಅನುಮೋದನೆಗೆ ಕಳುಹಿಸಲಾಗಿದೆ. ಮುಂದಿನ 6 ದಿನಗಳಲ್ಲಿ ಕಾಮಗಾರಿಗೆ ಅನುಮೋದನೆ ಸಿಗುವ ಭರವಸೆ ಇದೆ ಎಂದರು.
ಉದ್ಯೋಗ ಖಾತರಿ ಕಾಯ್ದೆ ಸಹಾಯಕ ನಿರ್ದೇಶಕ ಲಿಂಗರಾಜು ಮತ್ತು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎಚ್.ಜಿ. ಪಾರ್ಥಸಾರಥಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಕೆಲವೊಂದು ತಾಂತ್ರಿಕ ತೊಂದರೆಯಿಂದ ಸಮಸ್ಯೆ ಉಂಟಾಗಿದೆ. ಕೂಲಿಕಾರರಿಗೆ ತ್ವರಿತಗತಿಯಲ್ಲಿ ಕೆಲಸ ನೀಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದರು.ಇದೇ ವೇಳೆ ಗ್ರಾಪಂನಿಂದ ಕುಡಿಯುವ ನೀರಿನ ಕ್ಯಾನ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಕೂಲಿಕಾರರಿಗೆ ವಿತರಿಸಲಾಯಿತು. ಪ್ರತಿಭಟನೆಯಲ್ಲಿ ಕಾಯಕ ಬಂಧು ಪ್ರಮೀಳಾ, ಮುಖಂಡರಾದ ಮಹದೇವು, ಸಾಗ್ಯ ಶಿವಕುಮಾರ್, ಮೂರ್ತಿ, ಶಾಂಭವಿ, ಜ್ಯೋತಿ, ಮಹದೇವಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.