ನಕಲಿ ದಾಖಲೆಗಳ ಸೃಷ್ಟಿಸಿ 69 ಎಕರೆ ಅರಣ್ಯ ಭೂಮಿ ಮಂಜೂರು

KannadaprabhaNewsNetwork | Published : Jul 2, 2025 11:50 PM

ಸಾರಾಂಶ

ಶರಾವತಿ ಮುಳುಗಡೆ ಸಂತ್ರಸ್ತರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂತ್ರಸ್ತರ ಸೋಗಿನಲ್ಲಿ ಒಂದೇ ಕುಟುಂಬವು 69 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಮುಳುಗಡೆ ಸಂತ್ರಸ್ತರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂತ್ರಸ್ತರ ಸೋಗಿನಲ್ಲಿ ಒಂದೇ ಕುಟುಂಬವು 69 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

1960 ರಿಂದ 1978 ರ ನಡುವೆ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಮೂಲ ಪಹಣಿಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಕೊಂಡಿರುವುದನ್ನು ಸಾಗರ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಅವರು ಸಾಗರ ತಾಲೂಕು ಆನಂದಪುರದ ಎಂ.ಆರ್.ಷಣ್ಮುಖಪ್ಪ, ಎಂ.ಆರ್.ಗಣಪತಿ, ಮಂಜಪ್ಪಗೌಡ ಹಾಗೂ ಆನಂದಪುರ ನಾಡ ಕಚೇರಿಯ ಅಧಿಕಾರಿಗಳ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಜೂನ್ ೨೫ರಂದು ದೂರು ಸಲ್ಲಿಸಿದ್ದು, ಅದೇ ದಿನ ಎಫ್‌ಐಆರ್ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಂಜಪ್ಪಗೌಡ ಅವರ ಮಕ್ಕಳಾದ ಷಣ್ಮುಖಪ್ಪ ಮತ್ತು ಗಣಪತಿ ಅವರು ಸಾಗರ ತಾಲೂಕು ಆನಂದಪುರ ಹೋಬಳಿ ಮಲ್ಲಂದೂರು ಗ್ರಾಮದ ಸ.ನಂ.157 ರಲ್ಲಿ 69 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬುದು ಆನಂದಪುರ ನಾಡಕಚೇರಿಯಲ್ಲಿ ಮೂಲ ಕಂದಾಯ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಮಲ್ಲಂದೂರು ಗ್ರಾಮದ ಆರ್.ಆರ್. 5 ಮತ್ತು 6ರ ದಾಖಲೆ ಶಿಥಿಲಗೊಂಡಿದ್ದು, ಸ.ನಂ.157ಕ್ಕೆ ಸಂಬಂಧಿಸಿದಂತೆ ಆರ್.ಆರ್. ದಾಖಲೆ ಪುನರ್ ನಿರ್ಮಾಣ ಮಾಡಿ 1960-1970, 1972-73, 1974-75 ಹಾಗೂ 1977-78ರ ಕೈಬರಹದ ಪಹಣಿಗಳನ್ನು ತಿದ್ದಿ ಪುನರ್ ನಿರ್ಮಾಣ ಮಾಡಿ ಎಂ.ಆರ್. 5-311/66-77ನ್ನು ಹೆಚ್ಚುವರಿಯಾಗಿ ನಮೂದಿಸಲಾಗಿದೆ. ಅಲ್ಲದೆ ಅನೇಕ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡಿ ಮೂಲ ದಾಖಲೆಗಳನ್ನು ನಕಲಿ ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಎಂದು ನಮೂದಿಸಿ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿಕೊಂಡಿದ್ದಾರೆ.

ಆದರೆ, ಈ ಜಮೀನಿನ ಕಂದಾಯ ದಾಖಲೆಗಳನ್ನು ಯಾವ ಅವಧಿಯಲ್ಲಿ ಮತ್ತು ಯಾವ ಅಧಿಕಾರಿ, ಸಿಬ್ಬಂದಿ ಅವಧಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಹೀಗಾಗಿ ಇದರ ಬಗ್ಗೆ ನಿಖರವಾದ ತನಿಖೆಯ ಅಗತ್ಯ ಇದೆ ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ಅವರು ದೂರಿನಲ್ಲಿ ನಮೂದಿಸಿದ್ದಾರೆ.

PREV