ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಸಿ. ಮಂಜುಳಾ ಆಕ್ರೋಶ

KannadaprabhaNewsNetwork |  
Published : Jul 02, 2025, 11:50 PM IST
2ಎಚ್‌ವಿಆರ್2-ಸಿ.ಮಂಜುಳಾ | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ ಹಾಗೂ 620 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಪುಂಡರ ಹಾವಳಿ ಹೆಚ್ಚಿದೆ ಎಂದು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಆರೋಪಿಸಿದರು.

ಹಾವೇರಿ: ಉತ್ತರ ಕರ್ನಾಟಕ ಭಾಗದ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಾನಗಲ್ಲಿನ ಗ್ಯಾಂಗ್ ರೇಪ್ ಪ್ರಕರಣ, ಮಾಸೂರಿನಲ್ಲಿ ಸ್ವಾತಿ ಹತ್ಯೆ ಪ್ರಕರಣ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ, ಅಂಜಲಿ ಅಂಬಿಗೇರ ಕೊಲೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತ್ವರಿತ ನ್ಯಾಯಾಲಯ ರಚಿಸುವ ಭರವಸೆ ನೀಡಿದ್ದರು. ಆದರೆ, ವರ್ಷಗಳೇ ಗತಿಸಿದರೂ ತ್ವರಿತ ನ್ಯಾಯಾಲಯದ ಸ್ಥಾಪನೆಯು ಇನ್ನೂವರೆಗೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳ ಅಧಿಕಾರದ ಅವಧಿ ಪೂರೈಸಿದ ಸಂಭ್ರಮಾಚರಣೆ ಯಾವ ಪುರುಷಾರ್ಥಕ್ಕಾಗಿ? ರಾಜ್ಯದಲ್ಲಿ 70ಕ್ಕೂ ಹೆಚ್ಚು ಬಾಣಂತಿಯರು ಸಾವಿಗೀಡಾಗಿದ್ದಾರೆ. ಸರ್ಕಾರ ಬಾಣಂತಿಯರ ಹೆಣದ ಮೇಲೆ ಸಂಭ್ರಮಾಚರಣೆ ಮಾಡುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ ಹಾಗೂ 620 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಪುಂಡರ ಹಾವಳಿ ಹೆಚ್ಚಿದೆ.

ಬಸ್ ನಿಲ್ದಾಣಗಳಲ್ಲಿ ಪುಂಡರು ಗುಂಪು ಕಟ್ಟಿಕೊಂಡು ನಿಂತು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಚುಡಾಯಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಮಹಿಳೆಯರ ಸುರಕ್ಷತೆಗೆ ಬೇಕಾದ ಸಿಸಿ ಕ್ಯಾಮೆರಾ ಅಳವಡಿಸಲು ದುಡ್ಡಿಲ್ಲ. ಪೊಲೀಸರು ಪುಂಡರ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಕಾಲಕ್ಕೆ ಬಿಡುಗಡೆ ಮಾಡದೇ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರ ದೈನಂದಿನ ವೆಚ್ಚ ನಿರ್ವಹಣೆಗೆ ಬಳಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಶಕ್ತಿ ಯೋಜನೆ ಮಹಿಳೆಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಮಹಿಳೆಯರನ್ನು ಉಚಿತವಾಗಿ ಬಸ್‌ನಲ್ಲಿ ಹತ್ತಿಸಿಕೊಳ್ಳಬೇಕಾಗುತ್ತದೆ ಎಂಬ ಉದ್ದೇಶದಿಂದ ನಿಗದಿತ ನಿಲ್ದಾಣ ಬಿಟ್ಟು ಚಾಲಕರು ಬಸ್‌ಗಳನ್ನು ದೂರದಲ್ಲಿ ನಿಲ್ಲಿಸುತ್ತಿದ್ದಾರೆ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗೃಹ ಸಚಿವರನ್ನು ಪ್ರಶ್ನೆ ಮಾಡಿದರೆ ದೊಡ್ಡ ಸಿಟಿಯಲ್ಲಿ ಇದು ಸಹಜ ಎಂದು ಉಡಾಫೆ ಉತ್ತರ ಕೊಡುತ್ತಾರೆ. ಇದೇನಾ ಮಹಿಳೆಯರ ರಕ್ಷಣೆಗೆ ಕೈಗೊಂಡ ಕ್ರಮ ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಬಂದಿರುವ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಕಾನೂನು ಸುವ್ಯವಸ್ಥೆ ಬಗ್ಗೆ ಯಾಕೆ ಮಾಹಿತಿ ಪಡೆದುಕೊಳ್ಳುತ್ತಿಲ್ಲ. ಇಷ್ಟೆಲ್ಲ ಪ್ರಕರಣಗಳು ನಡೆದರೂ ಹಾವೇರಿ ಜಿಲ್ಲೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಜಿಲ್ಲಾ ಪ್ರವಾಸ ಮಾಡಿಲ್ಲ. ಸಂತ್ರಸ್ತೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಈ ಕೂಡಲೇ ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್, ಮಹಿಳಾ ಸಚಿವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.ರಾಜ್ಯದಲ್ಲಿ ಹದಿಹರೆಯದ ಮಹಿಳೆಯರಿಗೂ ಹೃದಯಾಘಾತವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸರ್ಕಾರ ವಯಸ್ಕರು, ಹದಿಹರೆಯದವರಿಗೆ ಆಗುತ್ತಿರುವ ಹೃದಯಘಾತ ಬಗ್ಗೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಯಾವ ಕಾರಣಕ್ಕೆ ಹೀಗೆ ಆಗುತ್ತಿದೆ ಎಂದು ಪತ್ತೆ ಹಚ್ಚಲು ತಜ್ಞರ ಸಮಿತಿ ರಚಿಸಬೇಕು. ಸೂಕ್ತ ಸಲಹೆ ಸೂಚನೆ ಪಡೆದುಕೊಂಡು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಹಿಳಾ ಮೋರ್ಚಾ ಪ್ರಮುಖರಾದ ಶೋಭಾ ನಿಸ್ಸೀಮಗೌಡ್ರ, ಭಾರತಿ ಜಂಬಗಿ, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಸಂತೋಷ ಆಲದಕಟ್ಟಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ