ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದ್ದರೂ ನಾಲೆಗಳಿಗೆ ನೀರು ಹರಿಸದೆ ಬೆಳೆದ ಬೆಳೆಗಳು ಒಣಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ತಲೆದೋರಿದೆ ಎಂದು ರೈತರು ಕಾವೇರಿ ನೀರಾವರಿ ನಿಗಮ ಕಚೇರಿ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿದ ರೈತರು, ವಿಶ್ವೇಶ್ವರಯ್ಯ ಮತ್ತು ಚಿಕ್ಕದೇವರಾಜ ಅರಸು (ಸಿಡಿಎಸ್) ನಾಲೆಗಳಿಗೆ ನೀರು ಹರಿಸದೆ ನಿಗಮದ ಅಧಿಕಾರಿಗಳು ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರು ತಾವು ಬೆಳೆದ ಬೆಳೆ ಕೈಗೆ ಸಿಗುತ್ತದೆ ಎಂಬ ಆಶಾಭಾವನೆಯಿಂದ ಲಕ್ಷಾಂತರ ಸಾಲ ಮಾಡಿ ವ್ಯವಸಾಯ ಮಾಡಿದ್ದಾರೆ. ತಕ್ಷಣಕ್ಕೆ ನಾಲೆಗಳಲ್ಲಿ ನೀರು ಹರಿಯದಿದ್ದರೆ ಬೆಳೆ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಪರಿಸ್ಥಿತಿ ಎದುರಾಗಿದೆ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳ ಇಚ್ಚಾಸಕ್ತಿ ಕೊರತೆಯಿಂದ ರೈತರು ಹೋರಾಟದ ಹಾದಿ ಹಿಡಿದು ನೀರು ಪಡೆಯುವಂತಾಗಿದೆ ಎಂದು ಕಿಡಿಕಾರಿದರು.
ವಿಸಿ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಗುತ್ತಿಗೆದಾರನ ಪ್ರಭಾವಕ್ಕೆ ಕಟ್ಟುಬಿದ್ದು ಅಧಿಕಾರಿಗಳು ನಾಲೆಗೆ ನೀರು ಹರಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಲೆ ಕಾಮಗಾರಿಗೆ ಗುತ್ತಿಗೆದಾರ ವೆಚ್ಚ ಮಾಡುತ್ತಿರುವುದು 200 ಕೋಟಿ ಆಗಿರಬಹುದು. ಆದರೆ, ವಿಸಿ ಮತ್ತು ಸಿಡಿಎಸ್ ನಾಲೆ ನೀರಿನ ಮೇಲೆ ಅವಲಂಭಿತರಾಗಿ ರೈತರು 2 ಸಾವಿರ ಕೋಟಿಗೂ ಅಧಿಕ ಬೆಳೆ ಬೆಳೆದಿದ್ದಾರೆ. ನಾಲೆಗಳಿಗೆ ನೀರು ಹರಿಸದಿದ್ದರೆ ಗುತ್ತಿಗೆದಾರನಿಂದ ಪ್ರತಿ ಎಕರೆಗೆ 40 ಸಾವಿರ ರು. ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.ಒಬ್ಬ ಗುತ್ತಿಗೆದಾರನಿಗೆ ನಷ್ಟವಾಗುವುದನ್ನು ತಪ್ಪಿಸಲು ಅಧಿಕಾರಿಗಳು ರೈತರ ಬದುಕನ್ನು ಬಲಿಕೊಡುತ್ತಿದ್ದಾರೆ. ಆಧುನೀಕರಣ ನೆಪದಲ್ಲಿ ವಿಸಿ ನಾಲೆಗೆ ನೀರು ಹರಿಸಿಲ್ಲ. ಆದರೆ, ಸಿಡಿಎಸ್ ನಾಲೆ ಆಧುನೀಕರಣ ನಡೆಯುತ್ತಿಲ್ಲವಾದರೂ ಏಕೆ ನೀರು ಹರಿಸಿಲ್ಲ ಎಂದು ರೈತರು ನಿಗಮದ ಎಇಇ ಎಲ್.ಶಿವಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ನಾಲೆಗಳಿಗೆ ನೀರು ಹರಿಸಬಹುದು ಎಂದು ರೈತರು ಸುಮ್ಮನಿದ್ದರು. ಅಣೆಕಟ್ಟೆ ತುಂಬಿ ತುಳುಕುತ್ತಿದ್ದರು ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.ಸಾಲ ಮಾಡಿ ವ್ಯವಸಾಯ ಮಾಡುತ್ತಿರುವ ರೈತರು ಆತ್ಮಹತ್ಯೆ ದಾರಿ ಹಿಡಿಯದಂತೆ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು. ವಿಸಿ ನಾಲೆಗೆ ಕನಿಷ್ಠ ಒಂದು ಸಾವಿರ ಕ್ಯುಸೆಕ್ ಹಾಗೂ ಸಿಡಿಎಸ್ ನಾಲೆಗೆ ಸಂಪೂರ್ಣವಾಗಿ ನೀರು ಹರಿಸದಿದ್ದರೆ ನಾವ್ಯಾರು ಸ್ಥಳದಿಂದ ಕದಲುವುದಿಲ್ಲ. ಪಾಂಡವಪುರ ಪಟ್ಟಣದ ಬಂದ್ ಮಾಡಿ ಹಗಲು ರಾತ್ರಿ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಿಗಮದ ಎಇಇ ಎಲ್.ಶಿವಪ್ರಸಾದ್ ಮಾತನಾಡಿ, ವಿಸಿ ನಾಲಾ ವ್ಯಾಪ್ತಿಯ ಕುರಹಟ್ಟಿ ಸಮೀಪ ನಾಲೆಗೆ ಗೇಟ್ ಅಳವಡಿಸುತ್ತಿರುವ ಕಾರಣ ಹಾಗೂ ಕೆಲ ತಾಂತ್ರಿಕ ತೊಂದರೆಯಿಂದ ನಾಲೆಗೆ ನೀರು ಹರಿಸುವುದು ತಡವಾಗಿದೆ. ಕಾಮಗಾರಿ ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಇದಕ್ಕೆ ಪ್ರತಿಭಟನಾಕಾರರು ಒಪ್ಪದ ಕಾರಣ ಕಾಮಗಾರಿ ಸ್ಥಳ ಪರಿಶೀಲಿಸಿ ವಾಸ್ತವತೆ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಒಂದು ವೇಳೆ ನಾಳೆಯೊಳಗಾಗಿ ನೀರು ಹರಿಸದಿದ್ದರೆ ಕಚೇರಿ ಮುಂದೆ ಶಾಮಿಯಾನ ಹಾಕಿ ಎತ್ತಿನ ಗಾಡಿ, ಹಸು, ಕರುಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಹೇಳಿ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಹಿರೇಮರಳಿ ದೊರೆಸ್ವಾಮಿ, ಎಣ್ಣೆಹೊಳೆಕೊಪ್ಪಲು ನಿರಂಜನ್, ಹೌಸಿಂಗ್ ಬೋರ್ಡ್ ನಿರ್ದೇಶಕ ಎನ್.ಭಾಸ್ಕರ್, ಡಾಮಡಹಳ್ಳಿ ಕೇಶವ, ಪುಟ್ಟೇಗೌಡ, ನೆಲಮನೆ ಗ್ರಾಮದ ರೈತರು ಸೇರಿದಂತೆ ಇತರರು ಇದ್ದರು.