ಮಡಿಕೇರಿ: ಏಡ್ಸ್ ಜನ ಜಾಗೃತಿ ಮ್ಯಾರಥಾನ್ ಸಂಪನ್ನ

KannadaprabhaNewsNetwork |  
Published : Sep 02, 2024, 02:09 AM IST
ಚಿತ್ರ : 1ಎಂಡಿಕೆ7 : ಯುವ ಜನೋತ್ಸವ ಎಚ್.ಐ.ವಿ/ಏಡ್ಸ್ ಅರಿವು ಆಂದೋಲನದ ಮ್ಯಾರಥಾನ್ ನಡೆಯಿತು.  | Kannada Prabha

ಸಾರಾಂಶ

ವಿವಿಧ ಕಾಲೇಜುಗಳ ಒಟ್ಟು 83 ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯುವಜನೋತ್ಸವ ಎಚ್.ಐ.ವಿ/ಏಡ್ಸ್ ಅರಿವು ಆಂದೋಲನ-ಕಾರ್ಯಕ್ರಮದ ಅಂಗವಾಗಿ (ರೆಡ್ ರಿಬ್ಬನ್ ಓಟ, ಎಚ್.ಐ.ವಿ/ಏಡ್ಸ್ ನಿಯಂತ್ರಣಕ್ಕಾಗಿ ಯುವಜನತೆ) ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಮ್ಯಾರಾಥಾನ್ ಸ್ಪರ್ಧೆಯು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು. ಮ್ಯಾರಾಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಒಟ್ಟು 83 ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಎಚ್.ಐ.ವಿ/ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಚ್.ಐ.ವಿ/ಎಡ್ಸ್ (ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಕಾಯ್ದೆ 2017 ಇತ್ಯಾದಿ ಕುರಿತು ಅರಿವು ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶ.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಉದ್ಘಾಟಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುರಳಿಧರ್, ಅಂಥೋನಿ ಡಿಸೋಜ, ಮಹಾಬಲ, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಬಿಂದ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಅಂತಾತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸುನೀತ ಮುತ್ತಣ್ಣ, ಜಿಲ್ಲಾ ಮೇಲ್ವಿಚಾರಕರು, ಕಮಲಾ, ಉಷಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.

ಮ್ಯಾರಾಥಾನ್ ಸ್ಪರ್ಧೆಯು ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಾನ್ಸ್ ಕಾಂಪೌಂಡ್ ಮಡಿಕೇರಿಯಿಂದ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್, ಜನರಲ್ ತಿಮ್ಮಯ್ಯ ಸರ್ಕಲ್ (ಜಿ.ಟಿ ಸರ್ಕಲ್) ಮುಖಾಂತರ ಹಾದು ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ತಲುಪಿತು. ಮ್ಯಾರಾಥಾನ್ ಸಂಚರಿಸುವ ಮಾರ್ಗದಲ್ಲಿ, ಆಟೋ ಪ್ರಚಾರದ ಮುಖಾಂತರ ಎಚ್.ಐ.ವಿ/ಏಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು.

ಮ್ಯಾರಾಥಾನ್‌ ವಿಜೇತರು

ಬಾಲಕರ ವಿಭಾಗ: ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಸ್.ಗೌತಮ್ (ಪ್ರಥಮ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಚ್.ಪ್ರತಾಪ್ (ದ್ವಿತೀಯ), ಸೋಮವಾರಪೇಟೆ ಸೇಂಟ್ ಜೋಸೆಪ್‌ನ ದೀಪಕ್ ಎಸ್.ಯು(ತೃತೀಯ) ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ತಕ್ಷಕ್ ಬಿದ್ದಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಗೌತಮ್ ಪಿ.ಸಿ., ವಿರಾಜಪೇಟೆ ಕಾವೇರಿ ಕಾಲೇಜಿನ ರೋಶನ್ ಉತ್ತಪ್ಪ ಮತ್ತು ಮಡಿಕೇರಿ ಎಫ್‌ಎಂಸಿ ಕಾಲೇಜಿನ ಪೃಥ್ವೀಶ್ ಎಂ.ಆರ್. ಸಮಾಧಾನಕರ ಬಹುಮಾನ ಪಡೆದುಕೊಂಡರು.

ಬಾಲಕಿಯರ ವಿಭಾಗ: ಪೊನ್ನಂಪೇಟೆ ಕೂರ್ಗ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿನ ಚೋಂದಮ್ಮ ಕೆ.ಟಿ. (ಪ್ರಥಮ), ಮಡಿಕೇರಿ ಎಫ್‌ಎಂಸಿ ಕಾಲೇಜಿನ ನಿಲಿಶಾ ಜೋಜೋ (ದ್ವಿತೀಯ), ಸೋಮವಾರಪೇಟೆ ಸಂತ ಜೋಸೆಪ್ ಶಾಲೆಯ ಐಶ್ವರ್ಯ ಕೆ.ವೈ. (ತೃತೀಯ) ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೌನ ಎಚ್.ಎಸ್., ಮಡಿಕೇರಿ ಎಫ್‌ಎಂಸಿ ಕಾಲೇಜಿನ ಭೂಮಿಕಾ ಕೆ.ಆರ್., ವಿರಾಜಪೇಟೆ ಕಾವೇರಿ ಕಾಲೇಜಿನ ಕಾವ್ಯ ಎನ್.ಆರ್. ಮತ್ತು ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಮೇಘನಾ ಬಿ.ಎಂ. ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.

ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಗೌತಮ್ ಎಸ್. ಮತ್ತು ಚೋಂದಮ್ಮ ಕೆ.ಟಿ. ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!