ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಏಮ್ಸ್)ಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸ್ಥಳ ಗುರುತಿಸಲಾಗಿದೆ.ಕೇಂದ್ರ ಸರ್ಕಾರ ಏಮ್ಸ್ ಮಂಜೂರಾತಿ ಪೂರ್ವದಲ್ಲಿ ಸಂಸ್ಥೆ ಸ್ಥಾಪನೆಗೆ ಕಠಿಣ ಬದ್ಧವಾದ ಷರತ್ತುಗಳನ್ನು ವಿಧಿಸಿತ್ತು. ಒಂದು ವೇಳೆ ರಾಯಚೂರು ಜಿಲ್ಲೆಗೆ ಏಮ್ಸ್ ಘೋಷಣೆಯಾದಲ್ಲಿ ಆ ಷರತ್ತುಗಳಿಗೆ ತಕ್ಕಂತೆ ಅಗತ್ಯವಿರುವ ಜಮೀನು, ಸಾರಿಗೆ ಸಂಪರ್ಕ, ಕುಡಿಯುವ ನೀರು ಒದಗಿಸಬೇಕು. ಅಲ್ಲದೇ ಏಮ್ಸ್ ನಿರ್ಮಾಣ ಜನವಸತಿ ಪ್ರದೇಶಕ್ಕೆ ಸಮೀಪವಿರುವಂತೆ ಹತ್ತು ಹಲವು ಸಂಗತಿಗಳನ್ನು ಪರಿಗಣಿಸಿ ಜಿಲ್ಲಾಡಳಿತ ಈಗ ಸ್ಥಳವನ್ನು ಗುರುತಿಸಿದೆ.ರಾಷ್ಟ್ರೀಯ ಹೆದ್ದಾರಿ 167ಕ್ಕೆ ಹೊಂದಿಕೊಂಡ, ರಾಯಚೂರು ತಾಲೂಕಿನ ಯರಗೇರಾಗೆ ಹೋಗುವ ಮುಖ್ಯ ರಸ್ತೆಯ ಹಾಗೂ ರಾಯಚೂರು ವಿಶ್ವವಿದ್ಯಾಲಯದ ಮುಂಭಾಗದ ಅರಣ್ಯ ಇಲಾಖೆಗೆ ಸೇರಿದ 200 ಎಕರೆ ಪ್ರದೇಶವನ್ನು ಜಿಲ್ಲಾಡಳಿತ ಗುರುತಿಸಿ ಪ್ರಸ್ತಾವನೆಯೊಂದನ್ನು ರೂಪಿಸಿದೆ.ಸಕರಾತ್ಮಕ ನಡೆ: ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಆ ನಿಟ್ಟಿನಲ್ಲಿಯೇ ರಾಯಚೂರು ನಗರದಲ್ಲಿ ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಳೆದ 881 ದಿನಗಳಿಂದ ಅನಿರ್ದಿಷ್ಟಾವಧಿ ಐತಿಹಾಸಿಕ ಹೋರಾಟವನ್ನು ನಡೆಸಲಾಗುತ್ತಿದೆ.
ಜಿಲ್ಲೆಗೆ ಏಮ್ಸ್ ನೀಡುವ ವಿಚಾರವಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ. ಸಚಿವರು, ಶಾಸಕರು ದೆಹಲಿಗೆ ತೆರಳಿದಾಗಲೆಲ್ಲಾ ಸಂಬಂಧಿಸಿದ ಕೇಂದ್ರ ಸಚಿವರು, ಇಲಾಖೆ ಮುಖ್ಯಸ್ಥರನ್ನು ಭೇಟಿಯಾಗಿ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಘೋಷಿಸಿದರೆ ಅದನ್ನು ರಾಯಚೂರಿಗೆ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಏಮ್ಸ್ ಮಂಜೂರು ವಿಚಾರವಾಗಿ ಜಿಲ್ಲಾಡಳಿತವು ಸಹ ಸ್ಥಳ ಗುರುತಿಸಿರುವುದು ಉತ್ತಮ ಬೆಳವಣಿಗೆ.
ಎಲ್ಲ ರೀತಿಯಲ್ಲಿ ಅನುಕೂಲ: ದೇಶದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದನ್ನು ಸ್ಥಾಪಿಸುವುದು ಎಂದರೆ ಅಷ್ಟು ಸಲೀಸಲ್ಲ. ಅದಕ್ಕೆ ಪ್ರಮುಖ ಮಾನದಂಡಗಳಿವೆ. ಜಮೀನು ಸೇರಿ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರದ ಮೇಲಿರುತ್ತದೆ.ಅದಕ್ಕಾಗಿಯೇ ರಾಷ್ಟ್ರೀಯ ಹೆದ್ದಾರಿ ಪಕ್ಕ, ಜಿಲ್ಲಾ ಕೇಂದ್ರಕ್ಕೆ 20 ಕಿಮೀ. ಒಳಗಿರುವ, ಕುಡಿಯುವ ನೀರು, ಸಾರಿಗೆ, ವಿಮಾನ ಸಂಪರ್ಕ ಹಾಗೂ ಇತರೆ ಅಗತ್ಯ ಸವಲತ್ತು ಕಲ್ಪಿಸಲು ಯಾವುದೇ ರೀತಿಯ ಅಡ್ಡಿಯಿಲ್ಲದ ಸ್ಥಳದ ಅಗತ್ಯವಿತ್ತು.
ಅದಕ್ಕಾಗಿಯೇ ಎರಡ್ಮೂರು ಸ್ಥಳಗಳ ಪರಿಶೀಲನೆ ನಡೆಸಿದ ಜಿಲ್ಲಾಡಳಿತ, ಕೊನೆಗೆ ಅರಣ್ಯ ಇಲಾಖೆಗೆ ಸೇರಿದ 200 ಎಕರೆ ಜಮೀನನ್ನು ಏಮ್ಸ್ ಗಾಗಿ ಮೀಸಲಿಡಲು ಮುಂದಾಗಿದೆ. ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಪಡೆದಲ್ಲಿ ಅದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿರುವ ಬೇರೆ ಭೂಮಿಯನ್ನು ಇಲಾಖೆಗೆ ನೀಡಬಹುದಾಗಿದ್ದು, ಇದರಿಂದ ಭೂ ಸ್ವಾಧೀನದ ಅಗತ್ಯತೆಯೂ ಸಹ ಬೀಳುವುದಿಲ್ಲ.ಅದ್ದರಿಂದ ಜಿಲ್ಲಾಡಳಿತ ಗುರುತಿಸಿದ ಸ್ಥಳದಲ್ಲಿ ಎಲ್ಲ ರೀತಿಯ ಸರ್ವೇ ಕಾರ್ಯವನ್ನು ನಡೆಸಿ, ಹದ್ದು-ಬಸ್ತಿಯನ್ನು ಮಾಡಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಹ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ವಿಚಾರವಾಗಿ, ರಾಯಚೂರು ವಿಶ್ವವಿದ್ಯಾಲಯದ ಮುಂಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ 200 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಸಂಪರ್ಕ, ನೀರು, ವಿವಿಧ ಸವಲತ್ತು ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸ್ಥಳ ಗುರುತಿಸಿದೆ. ಪ್ರಸ್ತಾವನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.
- ಕೆ. ನಿತೀಶ್ ಜಿಲ್ಲಾಧಿಕಾರಿ ರಾಯಚೂರು