ಕನ್ನಡಪ್ರಭ ವಾರ್ತೆ ಯಾದಗಿರಿ
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ನಿರಂತರವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ವಿಳಂಬತನ, ಕಲ್ಯಾಣ ಕರ್ನಾಟಕ ಪ್ರದೇಶದ ವಿರೋಧಿ ನೀತಿ ಖಂಡಿಸಿ, ಕೂಡಲೇ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದುಗಡೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿ 13-05-2022 ರಿಂದ ನಿರಂತರ ಸುದೀರ್ಘ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಹೋರಾಟಕ್ಕೆ ಕರವೇ ಸದಾ ಬೆಂಬಲಿಸುತ್ತದೆ. ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪಿಸಬೇಕೆಂಬ ಉದ್ದೇಶಕ್ಕೆ ಯಾವುದೇ ಹಂತದ ಹೋರಾಟಕ್ಕೂ ಕರವೇ ಸಿದ್ಧವಾಗಿರುತ್ತದೆ ಎಂದರು.
ಈ ಒಂದು ಸುದೀರ್ಘ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ, ಕೇಂದ್ರ ಸರ್ಕಾರದ ಹಣಕಾಸು ಸಚಿವರಿಗೆ ಶಿಫಾರಸ್ಸು ಪತ್ರಗಳನ್ನು ಬರೆದು ರಾಯಚೂರಿನಲ್ಲಿ ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪಿಸಲೇಬೇಕೆಂದು ಒತ್ತಾಯಿಸಿದ್ದಾರೆ ಎಂದರು.ಜು.29ರಂದು ಮುಖ್ಯಮಂತ್ರಿಗಳು, ಮಾನ್ಯ ಪ್ರಧಾನಮಂತ್ರಿಗಳನ್ನು ದೆಹಲಿಯಲ್ಲಿ ಸ್ವತಃ ಭೇಟಿ ಮಾಡಿ ಹಿಂದುಳಿದ, ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಅನ್ನು ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ, ಇಂದಿಗೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಇರದೇ ಇರುವುದು ಖಂಡನೀಯವಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿಳಂಬ ನೀತಿ ಖಂಡಿಸಿ, ಐಐಟಿ ಯಿಂದ ವಂಚಿತಗೊಂಡ, 371(ಜೆ), ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನಕ್ಕೊಳಪಟ್ಟ, ಮಹತ್ವಾಕಾಂಕ್ಷಿ ರಾಯಚೂರು ಜಿಲ್ಲೆಗೆ ಶೀಘ್ರದಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.ಇದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಂಸದರು ಒಂದಾಗಿ ಏಮ್ಸ್ ಆರೋಗ್ಯ ಸಂಸ್ಥೆಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸಬೇಕೆಂದು ಸಂಸತ್ತಿನಲ್ಲಿ ಧ್ವನಿಯೆತ್ತುವಂತಹ ಕೆಲಸವಾಗಬೇಕು. ಇಲ್ಲವಾದಲ್ಲಿ ಮುಂದೊಂದಿನ ಕರವೇ ನಿಮ್ಮ ನಿಮ್ಮ ಮನೆಗಳನ್ನ ಮತ್ತು ಕಚೇರಿಗಳನ್ನ ಘೇರಾವ್ ಹಾಕಿ ಪ್ರತಿಭಟನೆ ರೂಪಿಸಬೇಕಾಗುತ್ತದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವಂತ ಜಿಲ್ಲೆಗಳಲ್ಲಿ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ತಿಳಿಸಿದರು.
ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷಕುಮಾರ ನಿರ್ಮಲ್ಕರ್, ಹಣಮಂತನಾಯಕ ಖಾನಳ್ಳಿ, ಹಣಮಂತ ಅಚ್ಚೋಲ, ಭೀಮರಾಯ್ ರಾಮಸಮುದ್ರ, ಪಪ್ಪುಗೌಡ ಚಿನ್ನಾಕರ್, ಶರಣುಸಾಹುಕಾರ, ವಿಶ್ವರಾಜ್ ಹೋನಗೇರಾ, ಮಲ್ಲಿಕಾರ್ಜುನ ಕನ್ನಡಿ, ಸಿದ್ದು ಸಾಹುಕಾರ, ಅಬ್ದುಲ್ ರೀಯಾಜ್, ವಿಜಯರಾಠೋಡ್, ಕಾಶಿನಾಥ್ ನಾನೇಕ್, ಸುಭಾಷ ಯರಗೋಳ, ಮಹೇಶ ಠಾಣಗುಂದಿ, ಬೀಮರಾಯ್, ಶರಣು ಮಡಿವಾಳ, ರಫೀಕ್ ವರ್ಕನಳ್ಳಿ ಮಂಜುನಾಥ ಬೇಗಾರ, ರಮೇಶ ನಾಯಕ ಸೇರಿದಂತೆ ಇತರರಿದ್ದರು.