ಕನ್ನಡಪ್ರಭ ವಾರ್ತೆ ತುಮಕೂರುವಿದ್ಯಾರ್ಥಿಗಳು ತಾವು ಕಂಡ ಕನಸನ್ನು ಈಡೇರಿಸಿಕೊಳ್ಳಬೇಕಾದರೆ ಆರೋಗ್ಯವೂ ಕೂಡ ಉತ್ತಮವಾಗಿರಬೇಕು. ಅದಕ್ಕಾಗಿ ಉತ್ತಮ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮವನ್ನು ಮಾಡಬೇಕು ಎಂದು ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಬಿ. ಲಿಂಗೇಗೌಡ ಸಲಹೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯಲ್ಲಿ ಸೋಮವಾರ ಆಯೋಜಿಸಿದ್ದ ‘ತಂತ್ರ- 2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನಲ್ಲಿ ನೆಮ್ಮದಿಯಾಗಿ ಓದುತ್ತಿದ್ದೀರ ಎಂದರೆ ಅದರ ಹಿಂದೆ ಪೋಷಕರ ಶ್ರಮವಿದೆ ಎಂಬುದನ್ನು ಮರೆಯಬಾರದು. ಪೋಷಕರು ಹಾಗೂ ಶಿಕ್ಷಕರನ್ನು ಗೌರವಿಸಬೇಕು. ನಿರಂತರ ಕಠಿಣ ಅಭ್ಯಾಸ ಮಾಡಿ ಉನ್ನತ ಹುದ್ದೆ ಗುರಿ ನಿಗದಿಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಎಂ.ಝಡ್.ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಲು ಹೆಚ್ಚು ಪ್ರಾತಿನಿತ್ಯ ಕೊಡುತ್ತಾರೆಯೇ ಹೊರತು, ಸ್ವಂತ ಉದ್ಯಮವನ್ನು ಶುರು ಮಾಡಲು ಯಾರೂ ಮುಂದಾಗುವುದಿಲ್ಲ. ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸಬೇಕೆಂದರೆ ಪ್ರತಿಯೊಬ್ಬರು ತಮ್ಮದೇ ಆದ ಉದ್ಯಮವನ್ನು ಕಟ್ಟಲು ಪ್ರಯತ್ನಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪುನಿತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿನಯ, ಸಭ್ಯತೆ, ಗೌರವಗಳು ಇಲ್ಲದಿದ್ದರೆ ಯಾವುದೇ ರಂಗದಲ್ಲಿ ಎಷ್ಟೇ ತಿಳಿದುಕೊಂಡಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನೀವು ಏನೇ ಮಾಡಿದರೂ ಅಚ್ಚುಕಟ್ಟಾಗಿ ಮಾಡಿ. ಸೋಲುಗಳ ಬಗ್ಗೆ ಚಿಂತಿಸಬೇಡಿ ಎಂದರು.
ಡೀನ್ ಡಾ. ಎಸ್. ರೇಣುಕಲತಾ, ಸಹಾಯಕ ಪ್ರಾಧ್ಯಾಪಕರಾದ ಡಾ.ಪುನೀತ್ ಕುಮಾರ್, ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಚೈತ್ರಾ ಎಂ.ಜಿ., ಪುಣ್ಯಶ್ರೀ ಎ.ಎಲ್. ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.