ಅತಿ ಹಚ್ಚು ಮಾನವ ದಿನ ಸೃಜಿಸುವ ಗುರಿ: ಈಶ್ವರಗೌಡ ಪಾಟೀಲ

KannadaprabhaNewsNetwork | Published : Mar 26, 2024 1:25 AM

ಸಾರಾಂಶ

ದುಡಿಯುವ ವರ್ಗಕ್ಕೆ ಕೆಲಸ ಕೊಡುವ ಮೂಲಕ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಗುರಿಯನ್ನು ಹೊಂದೋಣ ಗ್ರಾಪಂ ಅಭಿವೃದ್ಧಿ ಅಧಿಕಾರಿ ಈಶ್ವರಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ರೋಣ

ಈ ಬಾರಿ ಬರಗಾಲದ ಛಾಯೆ ಆವರಿಸಿದೆ. ಈ ಹಿನ್ನೆಲೆ ದುಡಿಯುವ ವರ್ಗಕ್ಕೆ ಮಳೆ ಇಲ್ಲದೆ, ಬೆಳೆ ಕೂಡ ಇಲ್ಲ. ಹೀಗಾಗಿ, ಡ.ಸ ಹಡಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜೂನ್‌ ಅಂತ್ಯದ ವರೆಗೂ ಕೆಲಸ ಕೊಡೋಣ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಈಶ್ವರಗೌಡ ಪಾಟೀಲ ಹೇಳಿದರು.

ತಾಲೂಕಿನ ಡ.ಸ. ಹಡಗಲಿ ಗ್ರಾಮ ಪಂಚಾಯಿತಿಯಲ್ಲಿ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದರು.

ದುಡಿಯುವ ವರ್ಗಕ್ಕೆ ಕೆಲಸ ಕೊಡುವ ಮೂಲಕ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಗುರಿಯನ್ನು ಹೊಂದೋಣ. ಈ ಹಿನ್ನಲೆ ತಾವೇಲ್ಲರೂ ಶ್ರಮ ವಹಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಪ್ರತಿ ಸೋಮವಾರ ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ಎಂ.ಐ.ಎಸ್.ನಲ್ಲಿ ದಾಖಲಿಸಿ ಎರಡು ದಿನಗಳೊಳಗೆ ಕೆಲಸ ಒದಗಿಸಬೇಕು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ತಪ್ಪದೇ ಮಾಡಿ ಎಂದರು.

ಈ ಮೊದಲ ಮಕ್ಕಳಿಗೆ ಸರಿಯಾದ ಸೌಲಭ್ಯಗಳು ಇಲ್ಲದೇ ಇರುವ ಕಾರಣ ಮಕ್ಕಳಿಗೆ ಸ್ವಲ್ಪ ತೊಂದರೆ ಆಗುತ್ತಿತ್ತು. ಈ ಬಾರಿ ಗ್ರಾಮದಲ್ಲಿ ಕೂಸಿನ ಮನೆಯನ್ನು ತೆರೆಯಲಾಗಿದ್ದು, ಪಾಲಕರಿಗೆ ಮಕ್ಕಳನ್ನು ಅಲ್ಲಿ ಬಿಟ್ಟು ಹೋಗಲು ತಿಳಿಸುವ ಕೆಲಸ ಮಾಡಿ. ಈ ಹಿನ್ನೆಲೆ ನಿಮ್ಮ ಸಹಕಾರ ಮುಖ್ಯ ಎಂದರು.

ಎನ್ಎಂಎಂಎಸ್ ಆ್ಯಪ್ ಬಗ್ಗೆ ಮಾಹಿತಿ ನೀಡಿ ಕಾಯಕ ಬಂಧುಗಳು ಎನ್ಎಂಎಂಎಸ್ ಆ್ಯಪ್‌ನ ಮೂಲಕ ಹಾಜರಾತಿ ಹಾಕಿ, ಕೆಲಸದಲ್ಲಿ ಯಾವುದೇ ರೀತಿಯ ವಿಳಂಬವಾಗುದಂತೆ ನೋಡಿಕೊಳ್ಳಬೇಕು. ಪ್ರತಿ ಕೂಲಿಕಾರರಿಗೆ ನರೇಗಾ ಕೂಲಿ ಯೋಜನೆಯಡಿ ₹316 ಇದೆ. ಹಾಗಾಗಿ ಜನರಿಗೆ ತಿಳಿವಳಿಕೆ ನೀಡುವುದು ಅವರನ್ನು ಹೆಚ್ಚು ಹೆಚ್ಚು ಕೆಲಸಕ್ಕೆ ಬರುವ ಹಾಗೆ ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಬಸವರಾಜ ತಳವಾರ, ಐಇಸಿ ಮಂಜುನಾಥ, ಬಿಎಫ್‌ಟಿ ಪ್ರಕಾಶ ಅಂಬಕ್ಕಿ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಇದ್ದರು.

Share this article