ಚಾ.ನಗರ ನಂ.1 ಸ್ವಚ್ಛ ನಗರವನ್ನಾಗಿಸುವ ಗುರಿ: ಎಸ್.ಸುರೇಶ್

KannadaprabhaNewsNetwork | Published : Sep 13, 2024 1:41 AM

ಸಾರಾಂಶ

ಚಾಮರಾಜನಗರ ನೂತನ ನಗರಸಭಾ ಅಧ್ಯಕ್ಷ ಎಸ್.ಸುರೇಶ್ ಪೌರಕಾರ್ಮಿಕರ ಹಾಜರಾತಿ ಪಡೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರವನ್ನು ನಂಬರ್ ಒನ್ ಸ್ವಚ್ಛ ನಗರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ನಗರಸಭಾ ‌ನೂತನ ಅಧ್ಯಕ್ಷ ಎಸ್. ಸುರೇಶ್ ಹೇಳಿದರು.ಗುರುವಾರ ಮುಂಜಾನೆ ನಗರಸಭೆ ಮುಂಭಾಗದಲ್ಲಿ ಪೌರಕಾರ್ಮಿಕರ ಹಾಜರಾತಿ ಪಡೆದು ಮಾತನಾಡಿದ ಅವರು, ಸಾರ್ವಜನಿಕರಿಂದ ನಗರದಲ್ಲಿ ಸ್ವಚ್ಛತೆ ಆಗುತ್ತಿಲ್ಲ, ವಿಲೇವಾರಿ ಮಾಡುತ್ತಿಲ್ಲ ಎಂದು ತುಂಬಾ ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಕೇಂದ್ರ ಸರ್ಕಾರ ಸ್ವಚ್ಛ ಭಾರತದಡಿಯಲ್ಲಿ ತುಂಬಾ ಅನುಕೂಲವಾದ ಕಾರ್ಯಕ್ರಮಗಳನ್ನು ಕೊಟ್ಟಿದೆ. ಸಾಕಷ್ಟು ಅನುದಾನಗಳು ಬರುತ್ತಿದೆ. ಅದು ಉಪಯೋಗವಾಗುತ್ತಿಲ್ಲ. ತಾವೆಲ್ಲರೂ ನಗರದ ಸ್ವಚ್ಛತೆಯಲ್ಲಿ ನಂಬರ್‌ ಒನ್ ನಗರವನ್ನಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಸಹಕರಿಸಬೇಕು. ನಿಮ್ಮಲ್ಲಿ ಏನೇ ಕುಂದುಕೊರತೆ ಇದ್ದರೂ ನೇರವಾಗಿ ತಮ್ಮನ್ನು ಭೇಟಿ ಮಾಡಿದರೆ ಬಗೆಹರಿಸಿಕೊಡಲಾಗುವುದು ಎಂದರು.

ಪೌರಾಯುಕ್ತ ರಾಮದಾಸ್ ಮಾತನಾಡಿ, ನಗರಸಭೆಯ ಪೌರಕಾರ್ಮಿಕರು ಇಷ್ಟು ದಿನಗಳ ಕಾಲ ನಗರದಲ್ಲಿ ಉತ್ತಮ ಕೆಲಸ ಮಾಡಿ ನಗರದ ಸ್ವಚ್ಛತೆ ಕಾಪಾಡಿಕೊಂಡು ಬಂದಿದ್ದು, ಸಾರ್ವಜನಿಕರಿಂದ ಮನ್ನಣೆ ಪಡೆದ್ದೀರಿ. ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಿ ನೂತನ ಅಧ್ಯಕ್ಷರ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿ ನಗರಸಭೆ, ಅಧ್ಯಕ್ಷರಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು. ನಂತರ ದೊಡ್ಡಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಚಾಮರಾಜೇಶ್ವರ ಉದ್ಯಾನವನ ಪ್ರದಕ್ಷಿಣೆ ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಕಸ ವಿಲೇವಾರಿ ಮಾಡುತ್ತಿಲ್ಲ. ಉದ್ಯಾನವನದಲ್ಲಿ ಅಳವಡಿಸಿರುವ ಜಿಮ್ ಸಲಕರಣೆಗಳು ಮುರಿದಿವೆ ಎಂದು ಅಧ್ಯಕ್ಷರ ಗಮನಕ್ಕೆ ತಂದಾಗ ಸದ್ಯದಲ್ಲೇ ಸರಿಪಡಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸಿ.ಜಿ.ಚಂಚಂದ್ರಶೇಖರ್, ಮುಖಂಡರಾದ ಕೇಶವಮೂರ್ತಿ, ಸೇಂದಿಲ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಕಿರಿಯ ಆರೋಗ್ಯ ನಿರೀಕ್ಷಕರಾದ ನಾರಾಯಣ್, ಪುಷ್ಪಾ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

Share this article