೫೦೦೦ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಗುರಿ: ಡಾ: ಕುಮಾರ

KannadaprabhaNewsNetwork |  
Published : Aug 26, 2025, 01:02 AM IST
೨೫ಕೆಎಂಎನ್‌ಡಿ-೩ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣ (ಎಬಿಸಿ ಮತ್ತು ಎಆರ್‌ವಿ) ನೀಡುವ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ೨೧ನೇ ಜಾನುವಾರು ಗಣತಿಯನ್ವಯ ೨೪೬೧೫ ಸಾಕು ನಾಯಿಗಳು ಹಾಗೂ ೫೧೫೩೧ ಬೀದಿ ನಾಯಿಗಳು ಸೇರಿ ಒಟ್ಟು ೭೬೧೪೬ ನಾಯಿಗಳಿವೆ. ಈ ಬಾರಿ ಮಂಡ್ಯ ನಗರಸಭೆಯಲ್ಲಿ ೬೦ ಲಕ್ಷ ರು. ಹಣವನ್ನು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ಆಯವ್ಯಯದಲ್ಲಿ ಶೇ.೨ರಷ್ಟು ಹಣವನ್ನು ಬೀದಿ ನಾಯಿಗಳ ಎಬಿಸಿ ಹಾಗೂ ಎಆರ್‌ವಿ ಚಿಕಿತ್ಸೆಗೆ ಮೀಸಲಿಡಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೫- ೨೬ ನೇ ಸಾಲಿನಲ್ಲಿ ೫೦೦೦ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣ (ಎಬಿಸಿ ಮತ್ತು ಎಆರ್‌ವಿ) ನೀಡುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ೨೧ನೇ ಜಾನುವಾರು ಗಣತಿಯನ್ವಯ ೨೪೬೧೫ ಸಾಕು ನಾಯಿಗಳು ಹಾಗೂ ೫೧೫೩೧ ಬೀದಿ ನಾಯಿಗಳು ಸೇರಿ ಒಟ್ಟು ೭೬೧೪೬ ನಾಯಿಗಳಿವೆ ಎಂದರು.ಈ ಬಾರಿ ಮಂಡ್ಯ ನಗರಸಭೆಯಲ್ಲಿ ೬೦ ಲಕ್ಷ ರು. ಹಣವನ್ನು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ಆಯವ್ಯಯದಲ್ಲಿ ಶೇ.೨ರಷ್ಟು ಹಣವನ್ನು ಬೀದಿ ನಾಯಿಗಳ ಎಬಿಸಿ ಹಾಗೂ ಎಆರ್‌ವಿ ಚಿಕಿತ್ಸೆಗೆ ಮೀಸಲಿಡಲು ಅವಕಾಶವಿದೆ. ಪಶು ಸಂಗೋಪನೆ ಇಲಾಖೆ ಅವರು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಹಣ ಮೀಸಲಿಡಲು ಕ್ರಮ ವಹಿಸುವಂತೆ ಸೂಚಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ಬೀದಿ ನಾಯಿ ಅಥವಾ ನಾಯಿ ಕಡಿತಕ್ಕೆ ಒಳಗಾದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳ ಬೇಕು ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಪ್ರಾಣಿಗಳನ್ನು ಕೆಣಕುವ ಕೃತ್ಯಗಳನ್ನು ಮಾಡಬಾರದು ಎಂಬುದನ್ನೂ ತಿಳಿಸುವಂತೆ ಹೇಳಿದರು.

ಬೀದಿ ನಾಯಿ ಕಡಿತಕ್ಕೆ ಒಳಗಾಗಿರುವವರ ಅಂಕಿ-ಅಂಶಗಳು ಸರಿಯಾಗಿ ತಾಳೆಯಾಗುತ್ತಿಲ್ಲ. ಕಡಿತಕ್ಕೆ ಒಳಗಾಗಿರುವವರಿಗೆ ನೀಡಲಾಗುವ ಡೋಸ್‌ಗಳು ಹಾಗೂ ವ್ಯಕ್ತಿಗಳ ಸಂಖ್ಯೆಯನ್ನು ತಾಳೆ ಮಾಡಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

೨೦೨೩-೨೪ ನೇ ಸಾಲಿನಲ್ಲಿ ಜಿಲ್ಲೆಯ ಬರ ಪರಿಸ್ಥಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲು ಮುಂಜಾಗ್ರತ ಕ್ರಮವಾಗಿ ಖರೀದಿಸಲಾಗಿದ್ದು ಒಂದು ವರ್ಷ ಕಳೆದಿದ್ದು ಒಣ ಮೇವು ಹಾಳಾಗುವ ಸಂಭವವಿರುವುದರಿಂದ ಈ ಕುರಿತಂತೆ ಪ್ರಕಟಣೆ ನೀಡಿ ರೈತರಿಗೆ ಖರೀದಿಸಲು ಅವಕಾಶ ಕಲ್ಪಿಸಿಕೊಡಿ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಹೆಚ್ಚು ಬೀದಿ ನಾಯಿಗಳಿರುವ ಸ್ಥಳಗಳನ್ನು ಗುರುತಿಸಿ ಆ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಆಯ-ವ್ಯಯದಲ್ಲಿ ಎಬಿಸಿ ಹಾಗೂ ಎಆರ್‌ವಿ ಚಿಕಿತ್ಸೆಗೆ ಹಣ ಮೀಸಲಿದೆ. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕುರಿತಂತೆ ಯೋಜನೆ ರೂಪಿಸುವಂತೆ ತಿಳಿಸಿದರು.

ಕಸಾಯಿ ಖಾನೆ, ಪ್ರವಾಸಿ ಸ್ಥಳಗಳು, ಆರತಿ ಉಕ್ಕಡ, ಆದಿ ಚುಂಚನಗಿರಿ ಸೇರಿದಂತೆ ಬೀದಿ ನಾಯಿಗಳಿಗೆ ಹೆಚ್ಚು ಆಹಾರ ಸಿಗುವ ಸ್ಥಳಗಳನ್ನು ಗುರುತಿಸಿ. ಬೀದಿ ನಾಯಿಗಳು ಹೆಚ್ಚಿರುವ ಸ್ಥಳಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮ ವಹಿಸುವಂತೆ ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ: ಶಿವಲಿಂಗಯ್ಯ, ಪಶುವೈದ್ಯ ಡಾ. ಪ್ರವೀಣ್ ಇತರರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ